ನವದೆಹಲಿ: ದೆಹಲಿಯ ಎಕ್ಯೂಐ, ಸುಭಾಷ್ ಚಂದ್ರಬೋಸ್ ಹೆಸರು ಸೇರಿ ಹಲವು ಪದಗಳನ್ನು ಬಾಯತಪ್ಪಿನಿಂದ ತಪ್ಪಾಗಿ ಉಚ್ಚರಿಸಿ ಟ್ರೋಲ್ಗೆ ಗುರಿಯಾಗಿರುವ ದೆಹಲಿ ಸಿಎಂ ರೇಖಾ ಗುಪ್ತಾ(CM Rekha Gupta) ಶುಕ್ರವಾರ(ಜ. 09) ದೆಹಲಿಯ ವಿಧಾನಸಭೆಯಲ್ಲಿ ಕಣ್ಣೀರಾಕಿ, ಭಾವುಕರಾದ ಪ್ರಸಂಗ ನಡೆದಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಸದನವನ್ನುದ್ದೇಶಿಸಿ ಮಾತನಾಡಿರುವ ರೇಖಾ ಗುಪ್ತಾ, ಅಜಾಗರೂಕತೆಯಿಂದ ಬಾಯಿಂದ ಒಂದು ಪದ ತಪ್ಪಾದ್ರೂ ವೈಯಕ್ತಿಕವಾಗಿ ಆಮ್ ಆದ್ಮಿ ಪಕ್ಷವೂ ತಮ್ಮನ್ನು ಮೀಮ್ಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡುತ್ತದೆ ಎಂದು ಆರೋಪಿಸಿದ್ದು, ಇದು ನನಗೆ ತುಂಬಾ ನೋವುಂಟು ಮಾಡುತ್ತದೆ ಎಂದು ಎಂದು ಭಾವುಕರಾಗಿದ್ದಾರೆ.
ನನ್ನ ಬಾಯಿಂದ ಒಂದು ಪದ ತಪ್ಪಾಗಿ ಜಾರಿದರೆ, ಎಎಪಿ ಅದರ ಮೇಲೆ ಮೀಮ್ಸ್ ಮಾಡಿ ನನ್ನನ್ನು ಅಪಹಾಸ್ಯ ಮಾಡುತ್ತದೆ. ಅದು ನನಗೆ ತುಂಬಾ ನೋವುಂಟು ಮಾಡುತ್ತದೆ. ಎಕ್ಯೂಐ ಅನ್ನು ಎಐಕ್ಯೂ ಎಂದು ತಪ್ಪಾಗಿ ಉಚ್ಚರಿಸಿದ್ದಕ್ಕಾಗಿ ಮತ್ತು ಆಕಸ್ಮಿಕವಾಗಿ ಬ್ರಿಟಿಷ್ ಬದಲಿಗೆ ಕಾಂಗ್ರೆಸ್ ಎಂದು ಹೇಳಿದ್ದಕ್ಕೆ ನನ್ನನ್ನು ಟ್ರೋಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗೆ ಎಕ್ಯೂಐ ಸರಿಯಾಗಿ ಹೇಳೋದಕ್ಕೆ ಬರೋದಿಲ್ಲ ಅಂತ ಹೇಳ್ತಾರೆ, ನನ್ನ ಎಲ್ಲಾ ಮಾತನ್ನು ಗೇಲಿ ಮಾಡುತ್ತಾರೆ. ಆದರೆ ಉದ್ದೇಶಪೂರ್ವಕವಲ್ಲದ ತಪ್ಪುಗಳು ಮತ್ತು ಉದ್ದೇಶಪೂರ್ವಕ ಕ್ರಮಗಳ ನಡುವೆ ವ್ಯತ್ಯಾಸವಿದೆ. ನಾನು ಉದ್ದೇಶಪೂರ್ವಕವಲ್ಲದ ತಪ್ಪು ಮಾಡಿದ್ದೇನೆ. ನೀವು ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರ ರಾಜಧಾನಿಯನ್ನು ಒಬ್ಬ ಮಹಿಳೆ ಮುನ್ನಡೆಸುತ್ತಿರುವುದು ಅವರಿಗೆ ಸರಿ ಕಾಣಿಸುತ್ತಿಲ್ಲ, ಇಷ್ಟವಾಗುವುದಿಲ್ಲ, ಇದು ಅವರ ಮನಸ್ಥಿತಿ. ನಾನು ಸಿಎಂ ಆಗಿ ಯಾವುದೇ ಉದ್ದೇಶಪೂರ್ವಕವಾದ ಅಪಹಾಸ್ಯಕ್ಕೆ ಅರ್ಹವಾದ ಹೇಳಿಕೆ ನೀಡಿಲ್ಲ. ಆದರೆ ಚಿಕ್ಕ ತಪ್ಪುಗಳನ್ನು ಗುರಿಯಾಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).