ಸಂಸದ ಕಲ್ಯಾಣ್ ಬ್ಯಾನರ್ಜಿ 
ದೇಶ

ಸಿಇಸಿ ಆಗಿಲ್ಲದಿದ್ದರೆ ಅವರ ಬೆರಳು ಕತ್ತರಿಸುತ್ತಿದ್ದೆ; ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಲ್ಯಾಣ್ ಬ್ಯಾನರ್ಜಿ ವಾಗ್ದಾಳಿ | Kalyan Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಎಸ್​ಐಆರ್ ಪ್ರಕ್ರಿಯೆ ವಿರುದ್ಧ ಯುದ್ಧವನ್ನೇ ಸಾರಿರುವ ಆಡಳಿತರೂಢ ಟಿಎಂಸಿ, ಇಂದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದೆ. ಈ ವೇಳೆ ಮಾತನಾಡಿರುವ ಸಂಸದ ಕಲ್ಯಾಣ್ ಬ್ಯಾನರ್ಜಿ(Kalyan Banerjee), ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೋಲ್ಕತ್ತಾದ ಎಸ್ಪ್ಲನೇಡ್ ಮೆಟ್ರೋ ಚಾನೆಲ್‌ನಲ್ಲಿ ನಡೆದಿರುವ ಪಕ್ಷದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕಳೆದ ತಿಂಗಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಜ್ಞಾನೇಶ್ ಕುಮಾರ್ ನಡುವೆ ನಡೆದ ಚುನಾವಣೆ ಕಚೇರಿಯಲ್ಲಿ ಘಟನೆ ಉಲ್ಳೇಖಿಸಿ, ಅವರು ನಮ್ಮ ನಾಯಕಿ ಮಮತಾ ಬ್ಯಾನರ್ಜಿಯವರೊಂದಿಗೆ ಬೆರಳು ತೋರಿಸಿ ತುಂಬಾ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಿಲ್ಲದಿದ್ದರೆ ಆ ದಿನ ನಾನು ಅವರ ಬೆರಳನ್ನು ಕತ್ತರಿಸುತ್ತಿದ್ದೆ ಎಂದು ಕಿಡಿಕಾರಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ಕಿಡಿ

ಇನ್ನೂ ಕಲ್ಯಾಣ್ ಬ್ಯಾನರ್ಜಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ, ಈ ಹೇಳಿಕೆಗಳು ಪ್ರಜಾಪ್ರಭುತ್ವ ಅಥವಾ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಯಾವುದೇ ಗೌರವವಿಲ್ಲದ ಟಿಎಂಸಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಸುವೇಂಧು ಅಧಿಕಾರಿ ಟೀಕಿಸಿದ್ದಾರೆ (ಏಜೆನ್ಸೀಸ್).