ಇದೇನಾದ್ರೂ ಹೀಗೆ ಮುಂದುವರಿದರೆ... ಈ ಪಾಟಿ ದಿಢೀರ್​​ ಕುಸಿಯುತ್ತಿರುವ ಚಿನ್ನದ ಬೆಲೆ ಖುಷಿ ವಿಷಯ ಅಲ್ಲವೇ ಅಲ್ಲ | Gold Rates  
ದೇಶ

ಇದೇನಾದ್ರೂ ಹೀಗೆ ಮುಂದುವರಿದರೆ... ಈ ಪಾಟಿ ದಿಢೀರ್​​ ಕುಸಿಯುತ್ತಿರುವ ಚಿನ್ನದ ಬೆಲೆ ನಿಜಕ್ಕೂ ಖುಷಿ ಪಡುವ ವಿಷಯವಲ್ಲ | Gold Rates Downfall

Gold Rates: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಿದ್ದು, ಸ್ವರ್ಣದ ದರಗಳು ಬ್ಯಾಕ್​ ಟು ಬ್ಯಾಕ್ ಪ್ರತಿದಿನ ಗ್ರಾಂಗೆ 250ರಿಂದ 500 ರೂ. ಇಳಿಕೆ ಆಗುತ್ತಿದೆ ಎಂಬ ಸಂಗತಿ ಸದ್ಯ ಚಿನ್ನದಂತ ಗ್ರಾಹಕರನ್ನು ಖರೀದಿಯತ್ತ ಕೈಬೀಸಿ ಕರೆಯುತ್ತಿದೆ. ಒಂದೆರೆಡು ವಾರಗಳ ಹಿಂದೆ ಗ್ರಾಂಗೆ 15 ಸಾವಿರ ರೂ. ಇದ್ದ ಗೋಲ್ಡ್​ ಈಗ ಶಾಕಿಂಗ್ ಎನ್ನುವಂತೆ 11 ಸಾವಿರಕ್ಕೆ ಬಂದು ನಿಂತಿದೆ. ಇದು ಹಲವರನ್ನು ಕೊಳ್ಳುವಿಕೆಗೆ ದೂಡಿದರೆ, ಇನ್ನೂ ಕೆಲವರನ್ನು ಚಿಂತೆಗೀಡು ಮಾಡಿದೆ.

ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಬೆಳವಣಿಗೆಗಳು ಕಂಡುಬಂದಿರುವುದು ಇದೀಗ ಖರೀದಿಗೆ ಸೂಕ್ತ ಸಮಯವೇ ಎಂಬ ಪ್ರಶ್ನೆ ಸದ್ಯ ಜನರಲ್ಲಿ ಕಾಡತೊಡಗಿದೆ. ಇಂದಿನ ವಹಿವಾಟು ಆರಂಭವಾದ ಕೆಲವೇ ಹೊತ್ತಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಣನೀಯವಾಗಿ ಇಳಿಕೆಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಶೇ.7ಕ್ಕಿಂತ ಹೆಚ್ಚು ಕುಸಿದಿದ್ದರೆ, ಚಿನ್ನದ ಬೆಲೆ ಶೇ.2ಕ್ಕಿಂತ ಹೆಚ್ಚು ಇಳಿದಿದೆ.

ದೇಶೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನವು ಸುಮಾರು ಶೇ.4ರಷ್ಟು ಮತ್ತು ಬೆಳ್ಳಿ ಸುಮಾರು ಶೇ.6ರಷ್ಟು ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನದ ಸ್ಪಾಟ್ ಬೆಲೆ (spot gold price) ಶೇ.2.19ರಷ್ಟು ಕುಸಿದು ಪ್ರತಿ ಔನ್ಸ್‌ಗೆ 3,546 ಡಾಲರ್‌ಗೆ ತಲುಪಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಇನ್ನೂ ತೀವ್ರವಾಗಿ ಕುಸಿದಿದ್ದು, ಶೇ.7.01ರಷ್ಟು ಇಳಿಕೆಯೊಂದಿಗೆ ಪ್ರತಿ ಔನ್ಸ್‌ಗೆ ಸುಮಾರು 42 ಡಾಲರ್‌ಗೆ ತಲುಪಿದೆ. ಈ ಸಮಯದಲ್ಲಿ, ಯುಎಸ್​ ಡಾಲರ್ ಬಲಗೊಂಡಿರುವುದು ಮತ್ತು ಬಾಂಡ್ ಇಳುವರಿ ಹೆಚ್ಚಾಗಿರುವುದು ಈ ಎರಡು ಅಮೂಲ್ಯ ಲೋಹಗಳ ಬೆಲೆಗಳ ಮೇಲೆ ಒತ್ತಡವನ್ನು ಸೃಷ್ಟಿಸಿದೆ.

ಎಷ್ಟು ಕುಸಿದಿದೆ ಗೋಲ್ಡ್​?

ಭಾರತೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ತೀವ್ರವಾಗಿ ಕುಸಿದಿವೆ. ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಡಿಸೆಂಬರ್ 4ರಂದು ಡೆಲಿವರಿ ಆಗಲಿರುವ ಚಿನ್ನದ ಬೆಲೆಯು, ಆರಂಭಿಕ ವಹಿವಾಟಿನಲ್ಲಿ ಶೇ.3.94ರಷ್ಟು ಕುಸಿದು ಪ್ರತಿ 10 ಗ್ರಾಂಗೆ 1,22,430 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ, ಎಂಸಿಎಕ್ಸ್​ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,29,380 ರೂ.ಗಳೊಂದಿಗೆ ಮುಕ್ತಾಯಗೊಂಡಿತ್ತು. ಇದರೊಂದಿಗೆ, ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 6,950 ರೂ.ಗಳಷ್ಟು ಗಣನೀಯ ಇಳಿಕೆಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 13,083 ರೂ., 22 ಕ್ಯಾರೆಟ್ ಬೆಲೆ 11,994 ರೂ. ಆಗಿದೆ. ಕೋಲ್ಕತ ಮತ್ತು ಬೆಂಗಳೂರಿನಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 13,068 ರೂ. ಆಗಿದ್ದರೆ, 22 ಕ್ಯಾರೆಟ್ ಬೆಲೆ 11,979 ರೂ. ಹಾಗೂ 18 ಕ್ಯಾರೆಟ್ ಬೆಲೆ ರೂ. 9,801 ರೂ. ಆಗಿದೆ. ಇನ್ನು, ಹೈದರಾಬಾದ್‌ನಲ್ಲಿ, 24 ಕ್ಯಾರೆಟ್ ಚಿನ್ನ 13,068 ರೂ. ಮತ್ತು 22 ಕ್ಯಾರೆಟ್ ಬೆಲೆ 11,979 ರೂ.ಗೆ ತಲುಪಿದೆ.

ಈ ಪಾಟಿ ಕುಸಿಯಲು ಕಾರಣವೇನು?

ಅಮೆರಿಕದ ಹಣದುಬ್ಬರ ದರಗಳು ಮತ್ತು ಫೆಡರಲ್ ರಿಸರ್ವ್‌ನಿಂದ ಬಂದ ಕಠಿಣ ನಿಲುವಿನ ಸೂಚನೆಗಳು, ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಕುಸಿತಕ್ಕೆ ಪ್ರಮುಖ ಕಾರಣಗಳು ಎನ್ನಲಾಗಿದೆ. ಅಮೆರಿಕದಲ್ಲಿ ಹಣದುಬ್ಬರವು ನಿರೀಕ್ಷೆಗಿಂತ ಹೆಚ್ಚಾಗಿರುವುದರಿಂದ, ಫೆಡರಲ್ ರಿಸರ್ವ್ ತಕ್ಷಣವೇ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎಂಬ ನಿರೀಕ್ಷೆಗಳು ಮರೆಯಾಗಿವೆ. ಇದರೊಟ್ಟಿಗೆ, ಅಮೆರಿಕದ ಖಜಾನೆ ಬಾಂಡ್‌ಗಳ ಮೇಲಿನ ಆದಾಯ ಹೆಚ್ಚಾಗಿರುವುದು ಮತ್ತು ಡಾಲರ್ ಮೌಲ್ಯ ಬಲಗೊಂಡಿರುವುದು ಕೂಡ ಪರಿಣಾಮ ಬೀರಿದೆ.

ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಚಿನ್ನದಂತಹ, ಬಡ್ಡಿ ನೀಡದ ಹೂಡಿಕೆಗಳ ಮೇಲೆ ಭಾರಿ ಪರಿಣಾಮ ಬೀರುತ್ತವೆ. ಈ ಕಾರಣಗಳಿಂದಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವ ವಿಷಯದಲ್ಲಿ ಎಚ್ಚರಿಕೆಯಿಂದ ವರ್ತಿಸುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಅಂತಾರಾಷ್ಟ್ರೀಯ ಬೆಳವಣಿಗೆಗಳು ಮತ್ತು ಅಮೆರಿಕದ ಆರ್ಥಿಕ ಪರಿಸ್ಥಿತಿಯ ಪ್ರಭಾವದಿಂದಾಗಿ ಚಿನ್ನ-ಬೆಳ್ಳಿಯ ಬೆಲೆಗಳು ತೀವ್ರವಾಗಿ ಕುಸಿದಿವೆ.

ಇದು ಹೀಗೆ ಮುಂದುವರಿದರೆ...

ಇನ್ನು, ಈ ಪಾಟಿ ಗ್ರಾಂಗೆ 500 ರೂ.ನಷ್ಟು ಇಳಿಕೆ ಆಗುತ್ತಲೇ ಬಂದರೆ, ಮುಂದಿನ ಕೆಲವೇ ದಿನಗಳಲ್ಲಿ ಗ್ರಾಂ ಗೋಲ್ಡ್ ದರವು 10ರಿಂದ 9 ಸಾವಿರಕ್ಕೆ ಬಂದಿಳಿದರೂ ಆಶ್ಚರ್ಯವಿಲ್ಲ. ಇದೇನಾದರೂ ಹೀಗೆ ಮುಂದುವರಿದರೆ, ಆಗ ಖರೀದಿದಾರರಲ್ಲಿ ಖಂಡಿತ ಖುಷಿ ನೀಡುತ್ತೆ ಸರಿ. ಆದ್ರೆ, ಅದೇ ಚಿನ್ನವನ್ನು ನಂಬಿ, ಕಷ್ಟಕಾಲದಲ್ಲಿ ಅಡವಿಟ್ಟಿರುವವರ ಕಥೆಯೇನು? ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಮಾಡಿರುವವರ ಗತಿಯೇನು? ಖರೀದಿಗೆ ದರ ಇಳಿಕೆ ಓಕೆ? ಆದರೆ, ಇಷ್ಟೊಂದು ಇಳಿಕೆಯಾದರೆ ಹೂಡಿಕೆ ಮತ್ತು ಅಡವಿಟ್ಟರೆ ಪಾಡು ವಿಪರೀತ ಕಷ್ಟವಾಗಲಿದೆ ಎಂಬುದನ್ನು ನಾವಿಲ್ಲಿ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲೇಬೇಕು,(ಏಜೆನ್ಸೀಸ್).