Himanta Biswa Sarma | ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್​ 
ದೇಶ

ಬಂಧನಕ್ಕಿದೆ ಭರ್ಜರಿ ಪ್ಲಾನ್, ಆದರೆ ಈಗಲ್ಲ!...ಗೊಗೊಯ್​ ಅರೆಸ್ಟ್​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸಿಎಂ ಬಿಸ್ವಾ ಶರ್ಮಾ! | Himanta Biswa Sarma

ದಿಸ್ಪೂರ್​: ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಭಾನುವಾರ ಪುನರುಚ್ಚರಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಜ್ಯ ಸಚಿವ ಸಂಪುಟವು ಈ ಪ್ರಕರಣವನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ತಮ್ಮ ಸರ್ಕಾರವು ಕಾಂಗ್ರೆಸ್ ಸಂಸದರನ್ನು ಬಂಧಿಸುವ ಸಾಧ್ಯತೆಯಿಲ್ಲ ಎಂದಿದ್ದಾರೆ.
ಗುವಾಹಟಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಶರ್ಮಾ, ಅವರನ್ನು ಬಂಧಿಸುವ ಕಠಿಣ ಹೆಜ್ಜೆ ಇಟ್ಟರೆ, ಮುಂಬರುವ ವಿಧಾನಸಭಾ ಚುನಾವಣೆಗೆ ಇದನ್ನೇ ಅಸ್ತ್ರವಾಗಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಲಾಗುತ್ತದೆ ಎಂದು ಹೇಳಿದರು.
ತಮ್ಮ ಸರ್ಕಾರವು ಗೊಗೊಯ್​​ರನ್ನು ವಿಚಾರಣೆ ಕೂಡ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಹಿಮಂತ್​ ಶರ್ಮಾ, ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕರಾಗಿರುವುದರಿಂದ, ಆ ಸ್ಥಾನಕ್ಕೆ ಗೌರವ ನೀಡಿ ಈ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದೇವೆ ಎಂದು ಹೇಳಿದರು.
ಕೇಂದ್ರೀಯ ತನಿಖೆಗೆ ಶಿಫಾರಸು ಮಾಡಿದ ಶರ್ಮಾ, ಗೊಗೊಯ್ ಮತ್ತು ಅವರ ಬ್ರಿಟಿಷ್ ಪತ್ನಿ ಎಲಿಜಬೆತ್, ಪಾಕಿಸ್ತಾನಿ ಏಜೆಂಟ್ ಅಲಿ ತೌಕೀರ್ ಶೇಖ್ ಅವರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಿದರು. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ 2010 ರಿಂದ 2013 ರವರೆಗೆ ಶೇಖ್ ಭಾರತಕ್ಕೆ 13 ಬಾರಿ ಭೇಟಿ ನೀಡಿದ್ದರು ಎಂದು ಶರ್ಮಾ ತಿಳಿಸಿದರು.
ಅಸ್ಸಾಂ ಸರ್ಕಾರ ತನಿಖೆ ಆರಂಭಿಸಿದ ಬಳಿಕ ಶೇಖ್ ಯಾರನ್ನೋ ರಕ್ಷಿಸಲು ತಮ್ಮ ಎಲ್ಲಾ ಎಕ್ಸ್ (ಟ್ವಿಟರ್) ಪೋಸ್ಟ್‌ಗಳನ್ನು ಅಳಿಸಿದ್ದು, ಸಂಸದರ ಪತ್ನಿ ಎಲಿಜಬೆತ್‌ಗೆ ಪಾಕಿಸ್ತಾನಿ ಸಂಸ್ಥೆಯೊಂದು ಕೆಲಸ ನೀಡಿ, ಅದನ್ನು ಭಾರತಕ್ಕೆ ವರ್ಗಾಯಿಸಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ ಆಳ್ವಿಕೆಯಲ್ಲಿ ಶೇಕ್​​ಗೆ ಎಲ್ಲಾ ವೀಸಾಗಳನ್ನು ನೀಡಲಾಗುತ್ತಿತ್ತು, ಭಾರತ ಭೇಟಿಗಳ ಸಮಯದಲ್ಲಿ ಅವರು ತಮ್ಮೊಂದಿಗೆ ಉನ್ನತ ಮಟ್ಟದ ಪಾಕಿಸ್ತಾನಿ ಅಧಿಕಾರಿಗಳನ್ನು ಸಹ ಕರೆತಂದಿದ್ದರು, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಶೇಕ್​ ದೇಶಕ್ಕೆ ಭೇಟಿ ನೀಡುವುದನ್ನು​ ನಿಲ್ಲಿಸಿದ್ದಾರೆ ಎಂದು ಶರ್ಮಾ ಹೇಳಿದರು.
ಭಾರತೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಎಲಿಜಬೆತ್ ಆರು ಬಾರಿ ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಮತ್ತೊಂದು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸೇರಿದ ಬಳಿಕ ಮತ್ತೆ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಸ್ಸಾಂ ಮುಖ್ಯಮಂತ್ರಿ ಆರೋಪಿಸಿದ್ದು, ಎಲಿಜಬೆತ್ ಯಾರಿಗೂ ತಿಳಿಯದಂತೆ ಪಂಜಾಬ್‌ನ ಅಟ್ಟಾರಿ ಗಡಿಯನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ ಎಂದರು.

ಆರೋಪವೇನು..?

ಪಾಕಿಸ್ತಾನದ ಗೂಢಚಾರ ಸಂಸ್ಥೆಯಾದ ಐಎಸ್‌ಐ ಜೊತೆ ಗೊಗೊಯ್ ಪತ್ನಿಯ ಸಂಪರ್ಕದ ಆರೋಪದ ಮೇಲೆ ಸಂಸದ ಗೊಗೊಯ್ ವಿರುದ್ಧ ತನಿಖೆ ನಡೆಯುತ್ತಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕಾಂಗ್ರೆಸ್​​ ಸಂಸದರ ಬ್ರಿಟಿಷ್ ಪತ್ನಿ ಎಲಿಜಬೆತ್ ಕೋಲ್ಬರ್ನ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಹೇಳಲಾದ ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಹಸ್ತಕ್ಷೇಪದ ಪ್ರಕರಣವನ್ನು ತನಿಖೆ ಮಾಡಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚಿಸಿತ್ತು(ಏಜೆನ್ಸೀಸ್​​).