ವೈರಲ್​ ವಿಡಿಯೋ ದೃಶ್ಯ  
ದೇಶ

E20 ಪೆಟ್ರೋಲ್​ ಹಾಕಿಸಿದ್ರೆ​ ಇರುವೆಗಳು ಬರುತ್ತಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು | Fact Check

ಪ್ರಮುಖ ಮುಖ್ಯಾಂಶಗಳು

  • E20 ಪೆಟ್ರೋಲ್​ ಹಾಕಿಸಿದ್ರೆ​ ಇರುವೆಗಳು ಬರುತ್ತಾ?
  • ವೈರಲ್​ ವಿಡಿಯೋ ನೋಡಿ ವಾಹನ ಸವಾರರು ಶಾಕ್​
  • ವಿಡಿಯೋ ಅಸಲಿಯತ್ತು ಬಿಚ್ಚಿಟ್ಟ ಭಾರತ್ ಪೆಟ್ರೋಲಿಯಂ
Fact Check: ಕಳೆದ ಒಂದು ತಿಂಗಳಿನಿಂದ E20 ಪೆಟ್ರೋಲ್‌ ಬಗ್ಗೆ ಸಾಕಷ್ಟು ವಿಷಯಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅನೇಕರು, ಈ20 ಪೆಟ್ರೋಲ್​ ವಾಹನಗಳ ಮೈಲೇಜ್​ಗೆ ಹೊಡೆತ ಎಂದರೆ, ಇನ್ನೂ ಕೆಲವರು ಇದರಿಂದ ಸಮಸ್ಯೆಯೇ ಹೆಚ್ಚು ಎಂದು ವಾದಿಸಿದ್ದಾರೆ. ಈ ಮಧ್ಯೆ, ಎಥೆನಾಲ್‌ ಬೆರೆಸಿದ ಇಂಧನ ಬಳಸುವುದರಿಂದ ವಾಹನಗಳ ಫ್ಯೂಲ್​ ಕ್ಯಾಪ್ ಸುತ್ತಲೂ ಇರುವೆಗಳು ಸೇರುತ್ತಿವೆ ಎಂಬ ವಿಡಿಯೋವೊಂದು ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಈಗಾಗಲೇ ಅನೇಕರ ಗಮನ ಸೆಳೆದಿರುವ ಈ ವಿಡಿಯೋ, ವಾಹನ ಚಾಲಕರಲ್ಲಿ ಆತಂಕ ಹಾಗೂ ಅನುಮಾನಗಳನ್ನು ಹುಟ್ಟುಹಾಕಿವೆ. ಎಥೆನಾಲ್​ ಬೆರೆಸಿದ ಪೆಟ್ರೋಲ್ ಅನ್ನು ತಮ್ಮ ವಾಹನಗಳಿಗೆ ಹಾಕಿಸಿರುವ ಗ್ರಾಹಕರು, ಇಂಧನ ಕ್ಯಾಪ್​ನ ಸುತ್ತಲೂ ಇರುವೆಗಳು ಮುತ್ತಿಕೊಂಡಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದಾರೆ. ಕಬ್ಬಿನಿಂದ ತಯಾರಾದ ಕಾರಣ, ಸಕ್ಕರೆ ಅಂಶವನ್ನು ಹುಡುಕಿ ಇರುವೆಗಳು ಬಂದಿವೆ ಎಂದು ಹಲವರು ಹೇಳಿದ್ದಾರೆ.

ಅಷ್ಟಕ್ಕೂ ಇದು ನಿಜವೇ?

ನಿಜವಾಗಿಯೂ ಎಥೆನಾಲ್​ ಬೆರೆಸಿದ ಇಂಧನವು ಇರುವೆಗಳನ್ನು ಆಕರ್ಷಿಸುವ ಗುಣವನ್ನು ಹೊಂದಿದೆಯೇ ಅಥವಾ ಇದೊಂದು ಸುಳ್ಳಾ? ಎಂಬ ಪ್ರಶ್ನೆಗಳು ಹಲವರನ್ನು ಬೆಂಬಿಡದೆ ಕಾಡಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಇತ್ತೀಚೆಗೆ ಈ ವಿಚಾರಕ್ಕೆ ವೈಜ್ಞಾನಿಕ ಸಾಕ್ಷಿಗಳನ್ನು ಮುಂದಿಟ್ಟು ಸ್ಪಷ್ಟಪಡಿಸಿದೆ. ಈ ವೈರಲ್ ವಿಡಿಯೋದಲ್ಲಿ ಯಾವುದೇ ಸತ್ಯಾಂಶವು ಇಲ್ಲ. ಇದು ಕೇವಲ ಊಹಾಪೋಹ ಅಷ್ಟೇ ಎಂದಿದೆ.

ವಿವಾದ ಹೇಗೆ?

ಇತ್ತೀಚೆಗೆ, ಕೇಂದ್ರ ಸರ್ಕಾರ E100 ಇಂಧನದ ಕಾನೂನು ಅನುಮೋದನೆಯ ಬೆನ್ನಲ್ಲೇ ಎಥೆನಾಲ್ ಮಿಶ್ರಣದ ಕುರಿತು ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಶುರುಮಾಡಿವೆ. ಈ ಮಧ್ಯೆ, ಇರುವೆಗಳು ಕಬ್ಬಿನಾಂಶದಿಂದ ತಯಾರಾದ ಈ20 ಪೆಟ್ರೋಲ್​ ವಾಸನೆಗೆ ಹುಡುಕಿ ಬರುತ್ತಿವೆ ಎಂಬ ವಿಡಿಯೋ ವೈರಲ್​ ಆಯಿತು. ಇದನ್ನು ತಳ್ಳಿಹಾಕಿದ ಬಿಪಿಸಿಎಲ್​, ಪೆಟ್ರೋಲ್‌ನೊಂದಿಗೆ ಬೆರೆಸುವ ಇಂಧನ ದರ್ಜೆಯ ಎಥೆನಾಲ್ ಅನ್ನು ವಿಶೇಷ ಪ್ರಕ್ರಿಯೆಯ ಮೂಲಕ ತಯಾರಿಸಲಾಗುತ್ತದೆ. ಹೀಗಾಗಿ, ಅಂತಿಮ ಇಂಧನದಲ್ಲಿ ಯಾವುದೇ ಸಕ್ಕರೆ ಶೇಷ ಉಳಿಯುವುದಿಲ್ಲ ಎಂದಿದೆ.
ಇದಲ್ಲದೆ, ಈ20 ಪೆಟ್ರೋಲ್​ಗೆ 'ಡಿನಾಚುರಂಟ್‌' ಎಂಬ ಕೆಮಿಕಲ್​ ಅನ್ನು ಕೂಡ ಸೇರಿಸಲಾಗುತ್ತದೆ. ಇವು ಕೀಟಗಳು ಮತ್ತು ಹುಳುಗಳನ್ನು ದೂರವಿಡುತ್ತವೆ ಎಂಬುದು ಮತ್ತೊಂದು ಅಚ್ಚರಿ ಸಂಗತಿ. ಇದನ್ನೆಲ್ಲ ಗಮನಿಸಿದರೆ, ಎಥೆನಾಲ್​ ಬೆರೆಸಿದ ಇಂಧನವು ಇರುವೆಗಳನ್ನು ಆಕರ್ಷಿಸುವ ಯಾವುದೇ ಗುಣಗಳನ್ನು ಹೊಂದಿಲ್ಲ. ಪೆಟ್ರೋಲ್‌ಗೆ ಎಥೆನಾಲ್ ಸೇರಿಸಲ್ಪಟ್ಟರೂ, ಸಾಮಾನ್ಯ ಹೈಡ್ರೋಕಾರ್ಬನ್‌ಗಳ ವಾಸನೆ ಇನ್ನೂ ಉಳಿದಿರುತ್ತದೆ. ಎಥೆನಾಲ್ ಇರುವೆಗಳನ್ನು ಆಕರ್ಷಿಸುವ ವಿಶಿಷ್ಟ ವಾಸನೆಯನ್ನು ಹೊಂದಿಲ್ಲ ಎಂದು ಬಿಪಿಸಿಎಲ್ ಸ್ಪಷ್ಟಪಡಿಸಿದೆ,(ಏಜೆನ್ಸೀಸ್).