ಇಂಧನ ಬೆಲೆ 
ದೇಶ

ಕಚ್ಚಾ ತೈಲ ಬೆಲೆ ಕುಸಿದರೂ ದೇಶದಲ್ಲಿ ಇನ್ನೂ ಇಳಿಯದ ಪೆಟ್ರೋಲ್-ಡೀಸೆಲ್ ಬೆಲೆ! ಹೀಗಿದೆ ಅಸಲಿ ಕಾರಣ

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತ
  • ಇಷ್ಟಾದರೂ ಏರಿಸಿರುವ ಇಂಧನ ಬೆಲೆಯಲ್ಲಿ ಇಲ್ಲ ಯಾವುದೇ ಇಳಿಕೆ
ನವದೆಹಲಿ: ಇರಾನ್-ಅಮೆರಿಕ ನಡುವಿನ ಭೀಕರ ಯುದ್ಧಕ್ಕೂ ಮುನ್ನ ಕನಿಷ್ಠ ಮಟ್ಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಗಳು ಕುಸಿದಿವೆ. ಶಾಂತಿ ಒಪ್ಪಂದದ ಬಳಿಕ ಜಾಗತಿಕವಾಗಿ ತೈಲ ದರ ಇಳಿಕೆಯಾಗಿರುವುದು ಸದ್ಯ ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದ ಸುಧಾರಣೆ ತಂದಿದ್ದೇ ಆದರೂ ಪೆಟ್ರೋಲ್​-ಡಿಸೇಲ್​ ಬೆಲೆಯಲ್ಲಿ ಸಣ್ಣ ಇಳಿಕೆ ಕೂಡ ಕಾಣದಿರುವುದು ಬಳಕೆದಾರರಲ್ಲಿ ಗೊಂದಲ ಮೂಡಿಸಿದೆ.
ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಿ ಸರ್ಕಾರದ ಹಣಕಾಸಿನ ಮುನ್ನೋಟವನ್ನು ಸುಧಾರಿಸಿದೆ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ದೇಶಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮಾತ್ರ ಯುದ್ಧ ಸಮಯದಲ್ಲಿ ಕಂಡ ಏರಿಕೆಗಿಂತ ಕಡಿಮೆಯಾಗದೆ ಅದೇ ದರದಲ್ಲಿ ಮುಂದುವರಿದಿದೆ.

ಕುಸಿದ ಕಚ್ಚಾ ತೈಲ ದರ

ಜಾಗತಿಕ ತೈಲ ದರದ ಮಾನದಂಡವಾಗಿರುವ ‘ಬ್ರೆಂಟ್ ಕ್ರೂಡ್’ ಸದ್ಯ ಪ್ರತಿ ಬ್ಯಾರೆಲ್‌ಗೆ 72ರಿಂದ 73 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇತ್ತ ಅಮೆರಿಕದ ಕಚ್ಚಾ ತೈಲದ (US Crude) ಬೆಲೆಯೂ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಿಂತ ತಳಮಟ್ಟಕ್ಕೆ ಕುಸಿದಿದೆ. ಈ ವರ್ಷದ ಆರಂಭದಲ್ಲಿ ಇರಾನ್ ಸಂಘರ್ಷ ತಾರಕಕ್ಕೇರಿದ್ದಾಗ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭೀತಿ ಸೃಷ್ಟಿಯಾಗಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ 120 ಡಾಲರ್ ತಲುಪಿತ್ತು. ಆದರೀಗ ಸಂಘರ್ಷದ ಪ್ರಭಾವ ತಗ್ಗಿರುವುದರಿಂದ ತೈಲ ಬೆಲೆಗಳು ತೀವ್ರವಾಗಿ ಕುಸಿಯುತ್ತಿವೆ. ಮಧ್ಯಪ್ರಾಚ್ಯ ಉದ್ವಿಗ್ನತೆಗೂ ಮುನ್ನ, ಅಂದರೆ ಕಳೆದ ಫೆಬ್ರವರಿ ಅಂತ್ಯದಲ್ಲಿದ್ದ ಕನಿಷ್ಠ ಮಟ್ಟಕ್ಕೆ ದರಗಳು ಮರಳಿವೆ.

ದರ ಇಳಿಸದಿರಲು ಕಾರಣವೇನು?

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಷ್ಟೊಂದು ಕುಸಿದಿದ್ದರೂ, ದೇಶದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ಬಂಕ್​ಗಳಲ್ಲಿ ಇಂಧನ ದರವನ್ನು ಪರಿಷ್ಕರಿಸಿಲ್ಲ. ಈ ಹಿಂದೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಹೆಚ್ಚಾದಾಗ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ಸುಮಾರು 7.50 ರೂ. ಹೆಚ್ಚಿಸಲಾಯಿತು. ಆದರೀಗ ಜಾಗತಿಕ ದರ ಇಳಿಕೆಯಾಗಿದ್ದರೂ ಯಾವುದೇ ಕಡಿತ ಘೋಷಿಸಿಲ್ಲ.
ಪ್ರಸ್ತುತ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮಾರಾಟದಲ್ಲಿ ಉತ್ತಮ ಲಾಭವನ್ನೇ ಗಳಿಸುತ್ತಿವೆ. ಆದರೆ, ಡೀಸೆಲ್ ಇನ್ನೂ ಸಲ್ಪ ಮಟ್ಟಿನ ನಷ್ಟದಲ್ಲೇ ಮಾರಾಟವಾಗುತ್ತಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರುತ್ತಿದ್ದಾಗಲೂ ದೇಶದಲ್ಲಿ ಸುಮಾರು ಎರಡೂವರೆ ತಿಂಗಳ ಕಾಲ ಇಂಧನ ದರವನ್ನು ಏರಿಕೆ ಮಾಡದೆ ಸ್ಥಿರವಾಗಿಡಲಾಗಿತ್ತು. ಬಳಿಕ ಬೆಲೆ ಪರಿಷ್ಕರಿಸಿದಾಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾದ ಪೂರ್ಣ ಪ್ರಮಾಣದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಈ ನಿಟ್ಟಿನಲ್ಲಿ, ಕಂಪನಿಗಳ ಹಿಂದಿನ ನಷ್ಟವನ್ನು ಭರಿಸಲು ಇನ್ನೂ ಇಂಧನ ಬೆಲೆ ಇಳಿಸದೆ ಮುಂದುವರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).