ರಾಯ್ಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ವೇಳೆ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟಗೊಂಡು 11 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೋಮವಾರ(ಜ. 26) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭಾನುವಾರ ಕೂಂಬಿಂಗ್ ಕಾರ್ಯಾಚರಣೆ ವೇಳೆ ಕರ್ರೆಗುಟ್ಟ ಬೆಟ್ಟಗಳ ಕಾಡುಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಘಟನೆಯಲ್ಲಿ 10 ಡಿಆರ್‌ಜಿ ಸಿಬ್ಬಂದಿ, ಓರ್ವ ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಗಾಯಗೊಂಡ ಕೋಬ್ರಾ ಸಿಬ್ಬಂದಿ ರುದ್ರೇಶ್ ಸಿಂಗ್ 210ನೇ ಬೆಟಾಲಿಯನ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾರೆ ಎನ್ನಲಾಗಿದೆ. ಸಿಂಗ್ ಮತ್ತು ಇಬ್ಬರು ಡಿಆರ್‌ಜಿ ಸಿಬ್ಬಂದಿಯ ಕಾಲುಗಳಿಗೆ ಗಾಯಗಳಾಗಿದ್ದು, ಇತರ ಮೂವರ ಕಣ್ಣುಗಳಿಗೆ ಗಾಯಗಳಾಗಿವೆ. ರಾಯ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯ ನಕ್ಸಲರ ನಾಯಕ ಸುರಕ್ಷಿತ ತಾಣ ಎಂದು ಭಾವಿಸಿದ್ದ ಕರ್ರೆಗುಟ್ಟಾದ ಉಸೂರ್ ಪೊಲೀಸ್ ಠಾಣೆ ವ್ಯಾಪ್ತಿಯ ತಡ್ಪಲ ಎಂಬ ಗ್ರಾಮದಲ್ಲಿ ಕಳೆದ ವರ್ಷ ನವೆಂಬರ್ನಲ್ಲಿ ಭದ್ರತಾ ಪಡೆಗಳು ಬೀಡುಬಿಟ್ಟಿದ್ದವು. ಅದಕ್ಕೂ ಮುಂಚೆ ಏಪ್ರಿಲ್ -ಮೇ ತಿಂಗಳಲ್ಲಿ ಸುಮಾರು 21 ದಿನಗಳ ಕಾಲ ಕಾರ್ಯಾಚರಣೆ ನಡೆಸಿ 31 ನಕ್ಸಲರನ್ನು ಹೊಡೆದುರುಳಿಸಿದ್ದವು ಎಂದು ವರದಿಗಳು ಉಲ್ಲೇಖಿಸಿವೆ (ಏಜೆನ್ಸೀಸ್).