ದೇಶ

ಐಡಿಬಿಐ ಬ್ಯಾಂಕ್​ನ್ನು ಕೆಟ್ಟ ಸ್ಥಿತಿಯಲ್ಲಿ ನಮಗೆ ಹಸ್ತಾಂತರಿಸಲಾಗಿತ್ತು: ರಾಹುಲ್ ಗಾಂಧಿಗೆ ನಿರ್ಮಲಾ ಸೀತಾರಾಮನ್ ತಿರುಗೇಟು | Nirmala Sitharaman

ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಐಡಿಬಿಐ ಬ್ಯಾಂಕ್​ನ್ನು ನಮಗೆ ಹಸ್ತಾಂತರಿಸಲಾಗಿತ್ತು ಎಂದು ಹೇಳಿದ್ದಾರೆ.

ನವದೆಹಲಿ: ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಐಡಿಬಿಐ ಬ್ಯಾಂಕ್​ನ್ನು ನಮಗೆ ಹಸ್ತಾಂತರಿಸಲಾಗಿತ್ತು ಎಂದು ಹೇಳಿದ್ದಾರೆ.

ಐಡಿಬಿಐ ಬ್ಯಾಂಕ್ ಅನ್ನು ಕೆನಡಾದ 'ಫೇರ್‌ಫ್ಯಾಕ್ಸ್' ಕಂಪನಿಗೆ ಮಾರಾಟ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಹುಲ್ ಗಾಂಧಿಯವರು ಬ್ಯಾಂಕ್ ನೌಕರರಿಗೆ ಬೆಂಬಲ ವ್ಯಕ್ತಪಡಿಸಿದ ಪತ್ರ ಬರೆದಿದ್ದಾರೆ. ಮತ್ತು ಲಾಭದ ಹಾದಿಗೆ ಮರಳಿರುವ ಬ್ಯಾಂಕ್ ಅನ್ನು ಮಾರಾಟ ಮಾಡುವ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದ್ದರು.

ಈ ಕುರಿತು ರಾಹುಲ್ ಗಾಂಧಿಯವರ ಟ್ವೀಟ್​ಗೆ ರಿಟ್ವೇಟ್ ಮಾಡಿರುವ ನಿರ್ಮಲಾ ಸೀತಾರಾಮನ್, ಹಿಂದಿನ ಕಾಂಗ್ರೆಸ್ ಸರ್ಕಾರಗಳು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ರಾಜಕೀಯ ನಂಟಿರುವ ಉದ್ಯಮಗಳಿಗೆ ಸಾಲ ನೀಡಲು ಬಳಸಿಕೊಂಡಿದ್ದವು ಎಂದು ಆರೋಪಿಸಿದ್ದಾರೆ. ಮತ್ತು ಈ ನೀತಿಯಿಂದ ಐಡಿಬಿಐ ಬ್ಯಾಂಕ್ ಅತ್ಯಂತ ದುಸ್ಥಿತಿಯಲ್ಲಿ ಎನ್‌ಡಿಎ (NDA) ಸರ್ಕಾರದ ಕೈಗೆ ಬಂದಿತ್ತು ಎಂದು ಹೇಳಿದ್ದಾರೆ.

ವಿಡಿಯೋಕಾನ್, ವಿನ್ಸಮ್, ಎಬಿಜಿ ಶಿಪ್‌ಯಾರ್ಡ್ ಮತ್ತು ಕಿಂಗ್‌ಫಿಶರ್ ಮುಂತಾದ ಕಂಪನಿಗಳನ್ನು ಉಲ್ಲೇಖಿಸಿ, ಈ ಕಂಪನಿಗಳ ಸಾಲಗಳು ವಸೂಲಾಗದ ಸಾಲಗಳಾಗಿ ಪರಿಣಮಿಸಿದ್ದರಿಂದ ಬ್ಯಾಂಕ್‌ಗೆ ಭಾರಿ ನಷ್ಟ ಉಂಟಾಗಿತ್ತು. ಅತ್ಯಂತ ದುಸ್ಥಿತಿಯಲ್ಲಿ ನಮಗೆ ಹಸ್ತಾಂತರಗೊಂಡಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಸರ್ಕಾರವು, ವೃತ್ತಿಪರ ನಿರ್ವಹಣೆ, ವಿವೇಚನಾಶೀಲ ಸಾಲ ನೀಡಿಕೆ ಪದ್ಧತಿಗಳು ಮೂಲಕ 25,000 ಕೋಟಿ ರೂಪಾಯಿಗೂ ಹೆಚ್ಚಿನ ಬಂಡವಾಳ ಮರುಪೂರಣದ ಮೂಲಕ ಈ ಬ್ಯಾಂಕ್‌ಗೆ ಮರುಜೀವ ನೀಡಿದೆ. ಬ್ಯಾಂಕ್ ಈಗ ತನ್ನ ಮುಂದಿನ ಹಂತಕ್ಕೆ ಸಜ್ಜಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದೇನು?

ಐಡಿಬಿಐ ಬ್ಯಾಂಕ್ ಅನ್ನು ಕೆನಾಡ ಮೂಲದ ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್‌ಗೆ ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಶುಕ್ರವಾರ(ಅ. 30) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ದೇಶದ ಕೈಗಾರಿಕಾ ರಂಗವನ್ನು ಕಟ್ಟಲು ಐಡಿಬಿಐ ಅನ್ನು ಸ್ಥಾಪಿಸಲಾಯಿತು ಎಂದಿರುವ ಅವರು, ಕಾಂಗ್ರೆಸ್‌ನ ಅವಧಿಯಲ್ಲಿ ಬ್ಯಾಂಕುಗಳನ್ನು ಸೃಷ್ಟಿಸಲಾಗುತ್ತಿತ್ತು. ಮೋದಿ ಅವರ ಅವಧಿಯಲ್ಲಿ ಅವುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಅವರ ಅವಧಿಯಲ್ಲಿ, ಮೊದಲು ಬಿಡ್ಡಿಂಗ್ ನಡೆಯಿತು, ನಂತರ ಬೆಲೆಯನ್ನು ನಿಗದಿಪಡಿಸಲಾಯಿತು. ನಾನು ಐಡಿಬಿಐ ಬ್ಯಾಂಕ್ ನೌಕರರ ಪರವಾಗಿ ನಿಲ್ಲುತ್ತೇನೆ ಎಂದು ಅವರಿಗೆ ಬೆಂಬಲವಾಗಿ ಬಹಿರಂಗ ಪತ್ರವನ್ನು ಬರೆದಿದ್ದಾರೆ (ಏಜೆನ್ಸೀಸ್).