ಪಾಕಿಸ್ತಾನ ಟೀಂ 
ದೇಶ

ಐಸಿಸಿ ಟಿ20 ವಿಶ್ವಕಪ್-2026; ಫೆ. 15ರಂದು ಭಾರತದ ವಿರುದ್ಧ ಆಡಬೇಕಿದ್ದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ | ICC T20 World Cup

ನವದೆಹಲಿ: ಐಸಿಸಿ ಟಿ20 ವಿಶ್ವಕಪ್-2026 ಪಂದ್ಯಾವಳಿಯಲ್ಲಿ ಫೆ. 15ರಂದು ನಡೆಯಬೇಕಿರುವ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾಗಿಯಾಗ್ತೇವೆ, ಆದರೆ ಭಾರತದ ಜೊತೆ ಆಡಲ್ಲ ಎಂದಿದೆ. ಆದರೆ ಬಹಿಷ್ಕರಿಸುವ ಬಗ್ಗೆ ಯಾವುದೇ ಕಾರಣವನ್ನು ನೀಡಿಲ್ಲ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಸರ್ಕಾರ, ಐಸಿಸಿ ಟಿ20 ವಿಶ್ವಕಪ್​-2026ರಲ್ಲಿ ನಮ್ಮ ತಂಡಕ್ಕೆ ಭಾಗವಹಿಸಲು ಅನುಮತಿ ನೀಡಲಾಗಿದೆ. ಆದಾಗ್ಯೂ, 2026 ಫೆಬ್ರವರಿ 15ರಂದು ಭಾರತದ ವಿರುದ್ಧ ನಿಗದಿಯಾಗಿರುವ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಹೇಳಿದೆ.
ಭದ್ರತಾ ಕಾರಣಗಳನ್ನು ನೀಡಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಬಾಂಗ್ಲಾದೇಶ ತಂಡವನ್ನು ಹೊರಗಟ್ಟಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡಿದ ಬಳಿಕ ಈ ಘಟನೆ ನಡೆದಿದೆ. ಬಾಂಗ್ಲಾವನ್ನು ಬದಲಾಯಿಸಿದ ಬಳಿಕ ಟೂರ್ನಿಯಲ್ಲಿ ಪಾಕಿಸ್ತಾನ ಭಾಗವಹಿಸುವಿಕ್ಕೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಈ ಹಿಂದೆ ಪಾಕ್ ಸಚಿವ ಮತ್ತು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದರು.
ಫೆಬ್ರವರಿ 15ರ ಪಂದ್ಯವನ್ನು ಆಡದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿರ್ಧಾರವನ್ನು ಇನ್ನೂ ಐಸಿಸಿಗೆ ತಿಳಿಸಿಲ್ಲ ಎನ್ನಲಾಗಿದೆ. ಇನ್ನೂ ಪಾಕ್ ತಂಡ ನಾಳೆ ಕೋಲಂಬೊಗೆ ಪ್ರಯಾಣ ಬೆಳಸಲಿದ್ದು, ಫೆ. 4ರಂದು ಕೊಲಂಬೊದಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ. ಫೆ. 07ರಂದು ನೆದರ್ಲ್ಯಾಂಡ್ಸ್​ ವಿರುದ್ಧ ಪಂದ್ಯ ಆರಂಭಿಸಲಿದೆ. ಫೆ. 10ರಂದು ಅಮೆರಿಕಾ, ಫೆ. 18ರಂದು ನಮೀಬಿಯಾ ವಿರುದ್ಧ ಆಡಲಿದೆ. ಭಾರತದ ವಿರುದ್ಧ ಪಂದ್ಯಗಳನ್ನು ಬಹಿಷ್ಕರಿಸಿದ್ರೆ ಪಾಕಿಸ್ತಾನ 2 ಅಂಕ ಕಳೆದುಕೊಳ್ಳಲಿದೆ (ಏಜೆನ್ಸೀಸ್).