Virat Kohli 
ದೇಶ

825 ಅಲ್ಲ, ಬರೋಬ್ಬರಿ 1,547 ದಿನಗಳ ಕಾಲ ನಂ.1 ಪಟ್ಟದಲ್ಲಿದ್ದರು ವಿರಾಟ್ ಕೊಹ್ಲಿ! Virat Kohli

ನವದೆಹಲಿ: ( Virat Kohli) ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಮತ್ತೆ ವಿಶ್ವದ ನಂ.1 ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದಾಗ, ಐಸಿಸಿ ಅವರು ಈ ಹಿಂದೆ ಒಟ್ಟು 825 ದಿನಗಳ ಕಾಲ ಮಾತ್ರ ನಂ.1 ಸ್ಥಾನದಲ್ಲಿದ್ದರು ಎಂದು ತಿಳಿಸಿತ್ತು. ಆದರೆ, ಈ ಅಂಕಿ-ಅಂಶ ತಪ್ಪಾಗಿದ್ದು, ಈಗ ಅದನ್ನು ಐಸಿಸಿ ಅಧಿಕೃತವಾಗಿ ಸರಿಪಡಿಸಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಾಡಿದ್ದ ಒಂದು ದೊಡ್ಡ ಎಡವಟ್ಟು ಈಗ ಸರಿಹೋಗಿದೆ. ಕೊಹ್ಲಿ ಅವರು ನಂ.1 ಪಟ್ಟದಲ್ಲಿ ಕಳೆದ ದಿನಗಳ ಸಂಖ್ಯೆಯನ್ನು ಐಸಿಸಿ ಈಗ ಸುಮಾರು ಎರಡರಷ್ಟು ಹೆಚ್ಚಿಸಿದೆ.
ಜನವರಿ 14, 2026 ರಂದು ಐಸಿಸಿ ಹೊಸ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದಾಗ, ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಒಟ್ಟು 825 ದಿನಗಳ ಕಾಲ ಮಾತ್ರ ನಂ.1 ಸ್ಥಾನದಲ್ಲಿದ್ದರು ಎಂದು ವರದಿ ಮಾಡಿತ್ತು. ಈ ಅಂಕಿ-ಅಂಶದ ಪ್ರಕಾರ ಅವರು ಸಾರ್ವಕಾಲಿಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದರು. ಆದರೆ ಕ್ರಿಕೆಟ್ ಅಂಕಿ-ಅಂಶ ಪ್ರಿಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನಂತರ, ಐಸಿಸಿ ತನ್ನ ದತ್ತಾಂಶವನ್ನು ಮರುಪರಿಶೀಲಿಸಿ ಈಗ ತಿದ್ದುಪಡಿ ಮಾಡಿದೆ.
ಹೊಸ ದಾಖಲೆಯ ಅಂಕಿ-ಅಂಶಗಳುಐಸಿಸಿ ನೀಡಿರುವ ತಾಜಾ ಮಾಹಿತಿಯ ಪ್ರಕಾರ, ವಿರಾಟ್ ಕೊಹ್ಲಿ ಅವರು ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ ಒಟ್ಟು ದಿನಗಳು 1,547. ಈ ತಿದ್ದುಪಡಿಯೊಂದಿಗೆ ಕೊಹ್ಲಿ ಅವರು ವಿಶ್ವದಲ್ಲೇ ಅತಿ ಹೆಚ್ಚು ಕಾಲ ನಂ.1 ಆಗಿದ್ದ ಬ್ಯಾಟರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಪರ ಅತಿ ಹೆಚ್ಚು ಕಾಲ ಅಗ್ರಸ್ಥಾನದಲ್ಲಿದ್ದ ದಾಖಲೆ ಈಗ ಮತ್ತಷ್ಟು ಗಟ್ಟಿಯಾಗಿದೆ.

ಸಾರ್ವಕಾಲಿಕ ಪಟ್ಟಿಯಲ್ಲಿ ಟಾಪ್ 3 ಆಟಗಾರರು:

ವಿವಿಯನ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)2,306 ದಿನಗಳು
ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)2,079 ದಿನಗಳು
ವಿರಾಟ್ ಕೊಹ್ಲಿ (ಭಾರತ)1,547 ದಿನಗಳು

ಕೊಹ್ಲಿ ಈ ಸಾಧನೆ ಮಾಡಿದ್ದು ಹೇಗೆ?

2013ರಲ್ಲಿ ಮೊದಲ ಬಾರಿಗೆ ನಂ.1 ಪಟ್ಟಕ್ಕೇರಿದ್ದ ವಿರಾಟ್ ಕೊಹ್ಲಿ, ಇದುವರೆಗೆ ಒಟ್ಟು 11 ಬಾರಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. 2017 ರಿಂದ 2021ರ ನಡುವೆ ಅವರು ಸತತವಾಗಿ 1,257 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು. ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ಅವರು ಸಿಡಿಸಿದ 93 ರನ್ ಸಿಡಿಸುವ ಮೂಲಕ ನಾಲ್ಕು ವರ್ಷಗಳ ನಂತರ ಮತ್ತೆ ಸಿಂಹಾಸನವನ್ನು ವಶಪಡಿಸಿಕೊಂಡಿದ್ದಾರೆ.
ಐಸಿಸಿಯ ಈ ಅಧಿಕೃತ ತಿದ್ದುಪಡಿಯು ಕೊಹ್ಲಿ ಅಭಿಮಾನಿಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. "ಕಿಂಗ್ ಕೊಹ್ಲಿ" ಅವರ ದೀರ್ಘಕಾಲದ ಪ್ರಾಬಲ್ಯಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಐಸಿಸಿಯಿಂದ ಈ ತಪ್ಪು ಸಂಭವಿಸಿದ್ದು ಹೇಗೆ?

ಐಸಿಸಿ ತನ್ನ ಆರಂಭಿಕ ವರದಿಯಲ್ಲಿ ಕೊಹ್ಲಿ ಅವರ ಕೇವಲ ಒಂದು ನಿರ್ದಿಷ್ಟ ಅವಧಿಯ ದಿನಗಳನ್ನು ಮಾತ್ರ ಲೆಕ್ಕ ಹಾಕಿತ್ತು. ಆದರೆ ಕೊಹ್ಲಿ ಅವರು 2013 ರಿಂದ ಇಲ್ಲಿಯವರೆಗೆ ಒಟ್ಟು 11 ಬಾರಿ ನಂ.1 ಪಟ್ಟಕ್ಕೆ ಏರಿ ಇಳಿದಿದ್ದಾರೆ. ಈ ಎಲ್ಲಾ ಅವಧಿಗಳನ್ನು ಒಟ್ಟಾಗಿ ಸೇರಿಸಿದಾಗ (Cumulative Total) ಅದು 1,547 ದಿನಗಳಾಗುತ್ತದೆ.
ಈ ಹೊಸ ಅಂಕಿ-ಅಂಶದೊಂದಿಗೆ ವಿರಾಟ್ ಕೊಹ್ಲಿ ಅವರು ಅತಿ ಹೆಚ್ಚು ಕಾಲ ನಂ.1 ಸ್ಥಾನದಲ್ಲಿದ್ದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಸೌರವ್ ಗಂಗೂಲಿ, ಎಂ.ಎಸ್. ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ದಂತಕಥೆಗಳಿಗಿಂತಲೂ ಕೊಹ್ಲಿ ಬಹಳ ಮುಂದಿದ್ದಾರೆ.

ದಾಖಲೆಗಳ ಸರದಾರ

ಈ ಶ್ರೇಯಾಂಕದ ಜೊತೆಗೆ ಕೊಹ್ಲಿ ಇನ್ನು ಕೆಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇದು 11ನೇ ಬಾರಿಗೆ ಅವರು ಅಗ್ರಸ್ಥಾನಕ್ಕೇರಿರುವುದು ವಿಶೇಷ. ಐಸಿಸಿ ಶ್ರೇಯಾಂಕದ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಂ.1 ಸ್ಥಾನದಲ್ಲಿದ್ದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಇದೇ ಸರಣಿಯಲ್ಲಿ ಕೊಹ್ಲಿ ಹಿಂದಿಕ್ಕಿದ್ದಾರೆ.