ಪತ್ರಕರ್ತನ ಮೈಕ್ ತಳ್ಳಿದ ಸಂಸದೆ ಜಯಾ ಬಚ್ಚನ್ ಮತ್ತು ಪ್ರತಿಕ್ರಿಯಿಸಿದ ಕಂಗನಾ ರಣಾವತ್ 
ದೇಶ

"ನಾನು ಹೇಳುವುದಿಲ್ಲ" ಎಂದ ಜಯಾ ಬಚ್ಚನ್​: ಪತ್ರಕರ್ತನ ಮೈಕ್​ ತಳ್ಳಿ ವಿವಾದ; ಸಂಸದೆ ದುರ್ವತನೆಗೆ ಕಂಗನಾ ಕೌಂಟರ್​! Jaya Bachchan Controversy

ಮಾಧ್ಯಮ ಪ್ರತಿನಿಧಿಯ ಮೈಕ್ ತಳ್ಳಿ ಆಕ್ರೋಶ ಹೊರಹಾಕಿದ ಸಂಸದೆ ಜಯಾ ಬಚ್ಚನ್ ವರ್ತನೆಗೆ ಕಂಗನಾ ರಣಾವತ್ ಕೌಂಟರ್ ನೀಡಿದ್ದಾರೆ. ಪೂರ್ಣ ವಿವರ ಇಲ್ಲಿದೆ.

ನವದೆಹಲಿ: ಮಂಗಳವಾರ (ಅ.6) ಚುನಾವಣಾ ಆಯೋಗದ ನೀತಿ, ನಿರೂಪಣೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಇಂಡಿ ಮೈತ್ರಿಕೂಟದ ಸದಸ್ಯರು ದೆಹಲಿಯಲ್ಲಿ ಬೃಹತ್​ ಪ್ರತಿಭಟನೆ ನಡೆಸಿದ್ದರು.

ಈ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ ಸಂಸದೆ, ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಪತ್ನಿ, ಜಯಾ ಬಚ್ಚನ್​ ಪತ್ರಕರ್ತರೊಬ್ಬರ ಜತೆ ತೋರಿದ ವರ್ತನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈಗ, ಜಯಾ ಬಚ್ಚನ್​ ವರ್ತನೆಗೆ ಬಿಜೆಪಿ ಸಂಸದೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ಕೌಂಟರ್​ ಕೊಟ್ಟಿದ್ದಾರೆ.

ಜಯಾ ಮಾಡಿದ್ದೇನು?

ಮಂಗಳವಾರ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ, ಇಂಡಿ ಮೈತ್ರಿಕೂಟದ ಸದಸ್ಯರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯುವುದು ಪ್ರಮುಖ ಉದ್ದೇಶವಾಗಿತ್ತು.

ಈ ಪ್ರತಿಭಟನೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್​ ಕೂಡ ಪಾಲ್ಗೊಂಡಿದ್ದರು. ಈ ವೇಳೆ, ಪತ್ರಕರ್ತರೊಬ್ಬರು, ಸಂಸದೆ ಬಳಿ, ಈ ಹೋರಾಟದ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಜಯಾ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಕೈಯಲ್ಲಿ "ಚುನಾವಣಾ ಆಯೋಗದ ಮತ್ತು ಬಿಜೆಪಿಯ ಕಚೇರಿ ಎರಡು ಒಂದೇ" ಎಂದು ಬರೆದಿರುವ ಫಲಕವಿತ್ತು.

ಇದನ್ನು ನೋಡಿದ ಪತ್ರಕರ್ತ, ಜಯಾ ಮೇಡಂ ಈ ಘೋಷಣೆಯ ಅರ್ಥವೇನು? ಹೇಳಿ ಎಂದು ಕೇಳಿದಾಗ, ತಾಳ್ಮೆ ಕಳೆದುಕೊಂಡ ರಾಜ್ಯಸಭಾ ಸಂಸದೆ, ಪತ್ರಕರ್ತನ ಮೈಕ್​ ಅನ್ನು ತಳ್ಳಿ, "ನಾನು ಹೇಳುವುದಿಲ್ಲ" ಎಂದು ನುಡಿದಿದ್ದಾರೆ. ಈಗ ಈ ಘಟನೆ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಪ್ರತಿಭಟನೆ ಏಕೆ ಮಾಡುತ್ತಾರೋ ಗೊತ್ತಿಲ್ಲ!

ಈಗ, ಈ ಘಟನೆಗೆ ಬಿಜೆಪಿ ಸಂಸದೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ಪ್ರತಿಯಿಸಿದ್ದು, ತಮ್ಮ ಇನ್​​ಸ್ಟಾಗ್ರಾಮ್​​ ಸ್ಟೋರಿಯಲ್ಲಿ, ನೀವು ಧರಣಿಗೆ ಕುಳಿತರೆ, ನಿಮ್ಮ ಅಭಿಪ್ರಾಯವನ್ನು ಪ್ರಪಂಚಕ್ಕೆ ತಿಳಿಸುವ ಅವಕಾಶ ದೊರೆಯುತ್ತದೆ. ಆದರೆ ಜಯಾ ಬಚ್ಚನ್​ಗೆ ನಿಮ್ಮ ಅಭಿಪ್ರಾಯ ಏನೆಂದು ಕೇಳಿದರೆ 'ನಾನು ಹೇಳುವುದಿಲ್ಲ' ಎನ್ನುತ್ತಾರೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಪ್ರತಿಭಟನೆ ಏಕೆ ನಡೆಯಿತು?

ಇತ್ತೀಚಿನ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಆಡಳಿತ ಶೈಲಿ ಬಗ್ಗೆ ಕೆಲ ಗಂಭೀರ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದು, ಅದರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತರ ಏಕಪಕ್ಷೀಯ ನಿರ್ಧಾರಗಳನ್ನು ವಿರೋಧಿಸಿ, ವಿರೋಧ ಪಕ್ಷದ ನಾಯಕರು ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಎಸ್​ಐಆರ್​ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವುದು ಇಂಡಿ ಮೈತ್ರಿಕೂಟದವರ ಒತ್ತಾಯವಾಗಿತ್ತು, (ಏಜೆನ್ಸೀಸ್​).