5 ಲಕ್ಷ ರೂ. ಬಹುಮಾನ, ಜಾಬ್​ ಆಫರ್​... ವೃದ್ಧನ ಸೈಕಲ್​ ಕದ್ದ ಕಳ್ಳನಿಗೆ ಬಂಪರ್​ ಆಫರ್​ ನೀಡಿದ ಉದ್ಯಮಿ ಬಾಬಿ ಚೆಮ್ಮಣೂರ್! Bobby Chemmanur  
ದೇಶ

5 ಲಕ್ಷ ರೂ. ಬಹುಮಾನ, ಜಾಬ್​ ಆಫರ್​... ವೃದ್ಧನ ಸೈಕಲ್​ ಕದ್ದ ಕಳ್ಳನಿಗೆ ಬಂಪರ್​ ಆಫರ್​ ನೀಡಿದ ಉದ್ಯಮಿ ಬಾಬಿ ಚೆಮ್ಮಣೂರ್! Bobby Chemmanur

ಪ್ರಮುಖ ಮುಖ್ಯಾಂಶಗಳು

  • 70 ವರ್ಷ ಹಳೆಯ ಸೈಕಲ್ ಹುಡುಕಿಕೊಟ್ರೆ ₹5 ಲಕ್ಷ ಬಹುಮಾನ, ಕಳ್ಳನಿಗೆ ಕೆಲಸದ ಆಫರ್!
  • ತಂದೆ ನೀಡಿದ್ದ ಅಪರೂಪದ ಸೈಕಲ್ ಕಳೆದುಕೊಂಡು ಕಣ್ಣೀರಿಟ್ಟ ವೃದ್ಧ
  • ವೃದ್ಧನಿಗ ಸೈಕಲ್​ ಮರಳಿ ತಂದು ಕೊಡಲು ಪಣ ತೊಟ್ಟ ಉದ್ಯಮಿ ಬಾಬಿ ಚೆಮ್ಮಣೂರ್
  • ಸೈಕಲ್​ ವಾಪಸ್​ ತಂದುಕೊಟ್ಟರೆ ಕಳ್ಳನಿಗೆ ಸಿಗಲಿದೆ ₹5 ಲಕ್ಷ ನಗದು ಮತ್ತು ಕೆಲಸ
ತಿರುವನಂತಪುರಂ: ಕೊಚ್ಚಿಯ ಎಡಪ್ಪಳ್ಳಿ ಟೋಲ್ ಪ್ಲಾಜಾ ಬಳಿ ಕಳುವಾಗಿರುವ ಪ್ರಕಾಶನ್ ಚೇಟ್ಟನ್ ಎಂಬುವರ ಸೈಕಲ್ ಅನ್ನು ಮರಳಿ ತಂದುಕೊಟ್ಟರೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮಣೂರ್ ( Bobby Chemmanur ) ಘೋಷಿಸಿದ್ದಾರೆ.
ತಮ್ಮ ಫೇಸ್‌ಬುಕ್ ವಿಡಿಯೋ ಮೂಲಕ ಈ ವಿಭಿನ್ನ ಆಫರ್ ನೀಡಿರುವ ಬಾಬಿ, ಕೇವಲ ಹಣ ಮಾತ್ರವಲ್ಲದೆ ಒಂದು ವೇಳೆ ಕಳ್ಳನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾದರೆ ಆತನಿಗೆ ಉತ್ತಮ ಉದ್ಯೋಗವನ್ನೂ ನೀಡುವುದಾಗಿ ತಿಳಿಸಿದ್ದಾರೆ.
ಈ ವಿಶಾಲ ಮನಸ್ಸಿನ ಆಫರ್‌ನೊಂದಿಗೆ ಬಾಬಿ, ಕಳ್ಳನಿಗೊಂದು ರಹಸ್ಯ ಹಾದಿಯನ್ನೂ ತೆರೆದಿಟ್ಟಿದ್ದಾರೆ. ಸೈಕಲ್ ಕದ್ದ ವ್ಯಕ್ತಿಯು ಯಾರದೇ ಭಯವಿಲ್ಲದೆ ನೇರವಾಗಿ ತಮ್ಮ ಮೊಬೈಲ್ ಸಂಖ್ಯೆಗೆ (7994811116) ಕರೆ ಮಾಡಿ ಸೈಕಲ್ ಹಸ್ತಾಂತರಿಸಿದರೆ, ಈ ವಿಷಯವನ್ನು ಸಂಪೂರ್ಣವಾಗಿ ರಹಸ್ಯವಾಗಿಟ್ಟು ಹಣ ಮತ್ತು ಕೆಲಸ ಎರಡನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ.
ಸೈಕಲ್ ಕಳೆದುಕೊಂಡು ಕಂಗಾಲಾಗಿದ್ದ ಪ್ರಕಾಶನ್ ಚೇಟ್ಟನ್ ಅವರಿಗೆ ಬಾಬಿ ಅವರ ಈ ಸಾಂತ್ವನ ಮತ್ತು ಕಳ್ಳನಿಗೆ ಸುಧಾರಿಸಿಕೊಳ್ಳಲು ನೀಡಿದ ಈ ಅವಕಾಶ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸಾಪ್ರದಾಯಿಕವಾಗಿ ತಮಗೆ ಬಳುವಳಿಯಾಗಿ ಬಂದಿದ್ದ 70 ವರ್ಷ ಹಳೆಯ ರ‍್ಯಾಲಿ ಸೈಕಲ್ ಬುಧವಾರ ಸಂಜೆ ಕಳುವಾದಾಗ ಎಂ.ಬಿ. ಪ್ರಕಾಶನ್ ಚೇಟ್ಟನ್ ಅವರಿಗೆ ತೀವ್ರ ಆಘಾತವಾಯಿತು. ಅಲ್ಲದೆ, ಪ್ರೀತಿಯ ಸೈಕಲ್​ ಅನ್ನು ಕಳೆದುಕೊಂಡು ಚೇಟ್ಟನ್​ ಅವರು ಕಣ್ಣೀರು ಸುರಿಸಿದರು. ಇದಕ್ಕೆ ಸಂಬಂಧಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಯಿತು.
ಈ ಬಗ್ಗೆ ಮಾತನಾಡಿದ ಚೇಟ್ಟನ್​, ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿದ್ದ ಆ ಮೌಲ್ಯಯುತ ಸೈಕಲ್ ಕಳೆದುಕೊಂಡ ಬೇಸರವೇ ಅತಿ ದೊಡ್ಡದಾಗಿತ್ತು. ಆದರೆ, ಈ ಕಷ್ಟದ ಸಮಯದಲ್ಲಿ ಉದ್ಯಮಿ ಬಾಬಿ ಚೆಮ್ಮಣೂರ್ ಅವರು ಸೈಕಲ್ ಹುಡುಕಿಕೊಡಲು 5 ಲಕ್ಷ ರೂ. ಬಹುಮಾನ ಹಾಗೂ ಕೆಲಸದ ಆಫರ್ ನೀಡಿದ ಬೆಂಬಲದ ಭರವಸೆಯನ್ನು ಕೇಳಿ ನನಗೆ ತೀವ್ರ ಸಂತಸವಾಗಿದೆ ಎಂದು ಹೇಳಿದ್ದಾರೆ.
ಪ್ರಕಾಶ್ ಅವರಿಗೆ ಅವರ 10ನೇ ವಯಸ್ಸಿನಲ್ಲಿ, ಪ್ರೀಮಿಯರ್ ಟೈರ್ಸ್ ಉದ್ಯೋಗಿಯಾಗಿದ್ದ ತಂದೆ ಎಂ. ಆರ್. ಬಾಲಕೃಷ್ಣನ್ ಅವರು ತಾವೇ ಪ್ರಯಾಣಕ್ಕೆ ಬಳಸುತ್ತಿದ್ದ ಸೈಕಲ್ ಅನ್ನು ಪ್ರೀತಿಯ ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೆ, ಈ ಸೈಕಲ್ ಅನ್ನು ಯಾವುದೇ ಕಾರಣಕ್ಕೂ ಹಾಳುಮಾಡಬೇಡ ಅಥವಾ ಬೇರೆಯವರಿಗೆ ಮಾರಾಟ ಮಾಡಬೇಡ ಎಂದು ತಂದೆ ನಿಧನರಾಗುವ ಮುನ್ನ ಕೇಳಿಕೊಂಡಿದ್ದ ಆ ಒಂದು ಮಾತನ್ನು ಪ್ರಕಾಶ್ ಅವರು ಇದುವರೆಗೂ ಚಾಚೂ ತಪ್ಪದೆ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದರು.
ಸೈಕಲ್​ ಜೊತೆಗೆ ಚೇಟ್ಟನ್​ ಅವರಿಗೆ ಒಂದು ಭಾವನಾತ್ಮಕ ಸಂಬಂಧವಿತ್ತು. ಇದೀಗ ಆ ಸೈಕಲ್​ ಕಳುವಾಗಿದ್ದು, ಅದು ಮರಳಿ ಚೇಟ್ಟನ್​ ಅವರ ಕೈ ಸೇರುತ್ತಾ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).