ಪಂಜಾಬ್ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ
- ಪಂಜಾಬ್ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿ
- ಕೃಪಾಣ್ ಮೂಲಕ ಹಲ್ಲೆ ನಡೆಸಿದ ಜಸ್ಪಾಲ್ ಸಿಂಗ್ ಬಂಧನ
- ಚುಚ್ಚಬೇಕೆನ್ನಿಸಿತು, ಚುಚ್ಚಿಬಿಟ್ಟೆ: ಆರೋಪಿ ಪ್ರತಿಕ್ರಿಯೆ
- ಬಾದಲ್ ಪತ್ನಿಗೆ ಕರೆಮಾಡಿ ಸುಖ್ಬೀರ್ ಸಿಂಗ್ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
ಮುಂಬೈ: ಗುರುವಾರ (ಆ.13) ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್ಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ಪಂಜಾಬ್ನ ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್
(Sukhbir Singh Badal) ಮೇಲೆ ಮಾರಣಾಂತಿಕ ದಾಳಿ ನಡೆದಿದೆ.
ಗುರುದ್ವಾರಾ ಹೊರಗಡೆ ಅಕಾಲಿ ನಾಯಕನ ಮೇಲೆ ಏಕಾಏಕಿ ದಾಳಿ ನಡೆಸಿದ ನಿಹಾಂಗ್ ಸಿಖ್ ಜಸ್ಪಾಲ್ ಸಿಂಗ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಚುಚ್ಚ ಬೇಕೆನ್ನಿಸಿತು ಚುಚ್ಚಿಬಿಟ್ಟೆ!
ಗುರುದ್ವಾರಾದ ದರ್ಶನಕ್ಕಾಗಿ ಪಂಜಾಬ್ನ ಮಾಜಿ ಡಿಸಿಎಂ ಹಾಗೂ ಅಕಾಲಿ ದಳದ ನಾಯಕನಾಗಿರುವ ಸುಖ್ಬೀರ್ ಸಿಂಗ್ ಬಾದಲ್ ಆಗಮಿಸಿದ್ದಾಗ, ಈ ಜಸ್ಪಾಲ್ ಸಿಂಗ್ ತನ್ನ ಕೃಪಾಣ್ (ಚಾಕು) ಹೊರ ತೆಗೆದು ಬಾದಲ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರ ಅಂಗರಕ್ಷಕನಿಗೆ ಸಹ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ, ಸದ್ಯ ಬಾದಲ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದು ಕಡೆ ಪೊಲೀಸರು ಈ ಜಸ್ಪಾಲ್ ಸಿಂಗ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಜಸ್ಪಾಲ್ ಸಿಂಗ್, ಬಾದಲ್ ಮೇಲೆ ಏಕೆ ದಾಳಿ ನಡೆಸಿದೆ ಎಂದು ಕೇಳಿದಕ್ಕೆ, ಬಾದಲ್ ಮೇಲೆ ದಾಳಿ ಮಾಡಬೇಕೆಂದು ನನಗೆ ಅನ್ನಿಸಿತು, ಹೀಗಾಗಿ ಕೃಪಾಣ್ನಿಂದ ದಾಳಿ ಮಾಡಿದೆ ಎಂದು ಹೇಳಿದ್ದಾನೆ. ಆದರೆ ಪೊಲೀಸರು ಈ ಉತ್ತರದಿಂದ ಸಂತುಷ್ಟರಾದಂತೆ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಜಸ್ಪಾಲ್ ಸಿಂಗ್ ಕಳೆದ ಎರಡು ವರ್ಷಗಳಿಂದ ಗುರುದ್ವಾರ ಮಾತಾ ಸಾಹಿಬ್ ಕೌರ್ನಲ್ಲಿ ಸೇವೆ ಮಾಡುತ್ತಿದ್ದಾಗಿ ತಿಳಿದು ಬಂದಿದೆ. ಪೊಲೀಸರು ಈ ಜಸ್ಪಾಲ್ ಸಿಂಗ್ನ ಹಿನ್ನಲೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಬಾದಲ್ ಪತ್ನಿಗೆ ಪ್ರಧಾನಿ ಕರೆ!
ಪಂಜಾಬ್ನ ಮಾಜಿ ಡಿಸಿಎಂ ಮೇಲೆ ದಾಳಿ ನಡೆದ ಸುದ್ದಿ ಕೇಳಿದ ಪ್ರಧಾನಿ ನರೇಂದ್ರ ಮೋದಿ, ಸುಖ್ಬೀರ್ ಸಿಂಗ್ ಬಾದಲ್ ಪತ್ನಿ, ಹರ್ಸಿಮ್ರತ್ ಕೌರ್ ಬಾದಲ್ ಅವರಿಗೆ ಫೋನ್ ಕರೆ ಮೂಲಕ ಸಂಪರ್ಕಿಸಿ, ಬಾದಲ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆಂದು ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ, ಸುಖ್ಬೀರ್ ಸಿಂಗ್ ಬಾದಲ್, ಪ್ರಧಾನಿ ನರೇಂದ್ರ ಮೋದಿಯನ್ನು ಬೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು.
ಈಗ ಮೋದಿ ಬೇಟಿ ಮಾಡಿದ ನಂತರ, ಬಾದಲ್ ಮೇಲೆ ದಾಳಿ ನಡೆದಿದ್ದು, ಪಂಜಾಬ್ ರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳ ಮೇಲಿನ ದ್ವೇಷ ಇನ್ನೂ ಕಡಿಮೆಯಾಗಿಲ್ಲ ಎಂಬುದರ ಸೂಚನೆ ಎನ್ನುವುದು ಕೆಲ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್).