ನವದೆಹಲಿ: ಗುಜರಾತ್‌ನ ಮೋರ್ಬಿ ನಿವಾಸಿ ಸಾಹಿಲ್ ಮೊಹಮ್ಮದ್ ಹುಸೇನ್ ಮಜೋಠಿ (23 ವರ್ಷ) ಉಕ್ರೇನ್‌ನಲ್ಲಿ ಸೆರೆಯಾಗಿದ್ದು, ಇತ್ತೀಚಿನ ವೀಡಿಯೊ ಸಂದೇಶದಲ್ಲಿ "ನಾನು ಮನೆಗೆ ಮರಳಲು ಬಯಸುತ್ತೇನೆ" ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಾಯ ಕೋರಿದ್ದಾರೆ.
"ನಾನು ಇದೀಗ ಉಕ್ರೇನ್‌ನಲ್ಲಿ ಯುದ್ಧ ಅಪರಾಧಿಯಾಗಿ ಸಿಲುಕಿಕೊಂಡಿದ್ದೇನೆ. ನಾನು ಹತಾಶನಾಗಿದ್ದೇನೆ ಮತ್ತು ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿದಿಲ್ಲ" ಎಂದು ಅವರು ವೀಡಿಯೊವೊಂದರಲ್ಲಿ ಹೇಳುತ್ತಾರೆ. "ಉನ್ನತ ಅಧ್ಯಯನ ಅಥವಾ ಕೆಲಸಕ್ಕಾಗಿ ರಷ್ಯಾಕ್ಕೆ ಬರುವವರು ಬಹಳ ಜಾಗರೂಕರಾಗಿರಬೇಕು. ಇಲ್ಲಿ ಅನೇಕ ವಂಚಕರಿದ್ದಾರೆ. ನೀವು ಕ್ರಿಮಿನಲ್, ಮಾದಕ ದ್ರವ್ಯ ಅಥವಾ ಅಕ್ರಮ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಸಾಧ್ಯವಾದಷ್ಟು, ಇದೆಲ್ಲದರಿಂದ ದೂರವಿರಿ" ಎಂದು ಅವರು ಹೇಳಿದರು.
ಸಾಹಿಲ್ ಓದಿಗೆ ರಷ್ಯಾಕ್ಕೆ ಹೋಗಿದ್ದರು. ಅಲ್ಲಿ ನಕಲಿ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡು ಜೈಲು ಶಿಕ್ಷೆಗೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಗಾಗಿ ರಷ್ಯಾ ಸೈನ್ಯಕ್ಕೆ ಸೇರ್ಪಡೆಯಾಗುವಂತೆ ಒತ್ತಡ ಹೇರಲಾಯಿತು ಎಂದು ಅವರು ಆರೋಪಿಸಿದ್ದಾರೆ.ಕೇವಲ 15-16 ದಿನಗಳ ತರಬೇತಿಯ ನಂತರ ಉಕ್ರೇನ್ ಫ್ರಂಟ್‌ಲೈನ್‌ಗೆ ಕಳುಹಿಸಲಾಯಿತು. ಅಲ್ಲಿ ಕಮಾಂಡರ್‌ನೊಂದಿಗೆ ವಿವಾದದ ನಂತರ ಶಸ್ತ್ರಾಸ್ತ್ರಗಳನ್ನು ಇಳಿಸಿ ಉಕ್ರೇನ್ ಸೈನ್ಯಕ್ಕೆ ಶರಣಾಗತರಾದರು.
ಡಿಸೆಂಬರ್ 21ರಂದು ಉಕ್ರೇನ್ ಅಧಿಕಾರಿಗಳು ಬಿಡುಗಡೆ ಮಾಡಿದ ಹೊಸ ವೀಡಿಯೊದಲ್ಲಿ (ಇಂಗ್ಲಿಷ್ ಮತ್ತು ಹಿಂದಿಯಲ್ಲಿ) "ದಯವಿಟ್ಟು ಸಹಾಯ ಮಾಡಿ, ನಾನು ಮನೆಗೆ ಹಿಂದಿರುಗಲು ಬಯಸುತ್ತೇನೆ ಎಂದು ಅವರು ಭಾರತ ಸರ್ಕಾರ, ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.
ರಷ್ಯಾದಲ್ಲಿ ಭಾರತೀಯರನ್ನು ಮೋಸದಿಂದ ಸೈನ್ಯಕ್ಕೆ ಸೇರಿಸುವ ಪ್ರಕರಣಗಳು ಹಲವು. ಈ ವಿಷಯವನ್ನು ಪ್ರಧಾನಿ ಮೋದಿ ಅವರು ಪುಟಿನ್ ಅವರೊಂದಿಗೆ ಚರ್ಚಿಸಿದ್ದು, ಹಲವಾರು ಭಾರತೀಯರನ್ನು ಹಿಂದಿರುಗಿಸಲಾಗಿದೆ ಎಂದು ವರದಿ ಆಗಿದೆ,(ಏಜೆನ್ಸೀಸ್).