Vijay In Karur | ಸಿಎಂ ವಿಜಯ್! 
ದೇಶ

ನಾನು ಪೊಲೀಸರನ್ನು ನಂಬಿದ್ದೆ, ಆದ್ರೆ ಅವರು ನನ್ನ ಮೇಲೆಯೇ ಗೂಬೆ ಕೂರಿಸಿದ್ರು!...ಅಧಿಕಾರಿಗಳ ವೈಫಲ್ಯದ ವಿರುದ್ಧ ಸಿಎಂ ವಿಜಯ್ ಕಿಡಿ | Vijay In Karur

ಕರೂರ್: ಕರೂರ್‌ನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದ ಒಂಬತ್ತು ತಿಂಗಳ ನಂತರ, ಮುಖ್ಯಮಂತ್ರಿ ವಿಜಯ್ ಶುಕ್ರವಾರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಲ್ಲದೆ, ಅಂದಿನ ಡಿಎಂಕೆ ಸರ್ಕಾರದ ಪೊಲೀಸ್ ಇಲಾಖೆಯ ತೀವ್ರ ವೈಫಲ್ಯವೇ ದುರಂತಕ್ಕೆ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಕರೂರ್‌ಗೆ ನೀಡಿದ ಮೊದಲ ಭೇಟಿಯಲ್ಲಿ, ಸಂಪೂರ್ಣ ಕಪ್ಪು ಉಡುಪು ಧರಿಸಿ ಬಂದಿದ್ದ ವಿಜಯ್ ಅವರು ತೀವ್ರ ಭಾವುಕರಾಗಿ ದುರಂತವನ್ನು ಸ್ಮರಿಸಿದರು. ಕರೂರ್ ಕಾಲ್ತುಳಿತ ನನಗೆ ಅಪಾರ ನೋವನ್ನು ಉಂಟುಮಾಡಿದೆ. ಈ ದುರಂತದಲ್ಲಿ ನಾವು ನಮ್ಮ ಸಹೋದರಿಯರ ಮಕ್ಕಳನ್ನು ಕಳೆದುಕೊಂಡಿದ್ದೇವೆ. ಆ ಭೀಕರ ನಷ್ಟದ ಭಾರ ಇಂದಿಗೂ ನನ್ನ ಮನಸ್ಸನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದುರಂತದ ಹಿನ್ನೆಲೆ

ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನಡೆದಿದ್ದ ಟಿವಿಕೆ ರ್ಯಾಲಿಯಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ನೆಚ್ಚಿನ ನಟನನ್ನು ನೋಡಲು ಹರಿದುಬಂದಿದ್ದ ಸಾವಿರಾರು ಅಭಿಮಾನಿ ಮತ್ತು ಕಾರ್ಯಕರ್ತರ ನಿಯಂತ್ರಣ ತಪ್ಪಿ ನಡೆದ ಈ ಘಟನೆಯಲ್ಲಿ 41 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ದುರಂತಕ್ಕೆ ತಮ್ಮ ಪಕ್ಷವೇ ಕಾರಣ ಎಂಬ ವಿರೋಧ ಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ವಿಜಯ್, ಜನಸಂದಣಿಯನ್ನು ನಿಯಂತ್ರಿಸುವುದು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದು ಸಂಪೂರ್ಣವಾಗಿ ಪೊಲೀಸರ ಜವಾಬ್ದಾರಿಯಾಗಿತ್ತು. ನಾನು ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಂಬಿದ್ದೆ, ಆದರೆ ಅಂತಿಮವಾಗಿ ಸಾವಿಗೆ ನನ್ನನ್ನೇ ಹೊಣೆಗಾರನನ್ನಾಗಿ ಮಾಡಲಾಯಿತು ಎಂದು ಆಕ್ರೋಶ ಹೊರಹಾಕಿದರು.
ರಾಲಿಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆ ಎತ್ತಿದ ಸಿಎಂ ವಿಜಯ್​, ಅಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎಂಬ ಕನಿಷ್ಠ ಎಚ್ಚರಿಕೆಯನ್ನಾದರೂ ಅಧಿಕಾರಿಗಳು ನಮ್ಮ ತಂಡಕ್ಕೆ ನೀಡಬಹುದಿತ್ತು. ಹಾಗೆ ಮಾಡಿದ್ದರೆ ಈ ದೊಡ್ಡ ದುರಂತವನ್ನು ತಡೆಯಬಹುದಿತ್ತು. ಆದರೆ ಅಂದಿನ ಸರ್ಕಾರ ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸುವ ಬದಲು, ನಾಟಕವಾಡಿ ನಮ್ಮ ಮೇಲೆ ಗೂಬೆ ಕೂರಿಸಲು ಯತ್ನಿಸಿದರು ಎಂದು ತರಾಟೆಗೆ ತೆಗೆದುಕೊಂಡರು.
ಸಿಎಂ ವಿಜಯ್ ಕರೂರ್‌ಗೆ ಭೇಟಿ ನೀಡುವುದನ್ನು ತಡೆಯಲು ಡಿಎಂಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಜಯ್ ಮುಖ್ಯಮಂತ್ರಿಯಾಗಿ ಅಲ್ಲಿಗೆ ಹೋದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂಬುದು ಡಿಎಂಕೆಯ ವಾದವಾಗಿತ್ತು. ಆದರೆ ಸುಪ್ರೀಂ ಕೋರ್ಟ್, ನ್ಯಾಯಾಲಯವನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಬೇಡಿ ಎಂದು ಡಿಎಂಕೆಗೆ ಎಚ್ಚರಿಕೆ ನೀಡಿದ ತಕ್ಷಣ ಪಕ್ಷವು ತನ್ನ ಅರ್ಜಿಯನ್ನು ಹಿಂಪಡೆದಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ವಿಜಯ್, ನಾನು ಕರೂರ್‌ಗೆ ಹೋಗಬಾರದು ಎಂದು ಹೇಳಲು ನೀವಿನ್ನೂ ಅಧಿಕಾರದಲ್ಲಿದ್ದೀರಾ..? ಇನ್ನು ಕನಸು ಕಾಣುವುದನ್ನು ಬಿಟ್ಟುಬಿಡಿ. ನಿಮ್ಮ ಪಕ್ಷ ಈಗ ಮನೆಗೆ ಹೋಗಿದೆ, ತಮಿಳುನಾಡಿನಲ್ಲಿ ಟಿವಿಕೆ ಆಡಳಿತದಲ್ಲಿದೆ ಎಂದು ನೇರವಾಗಿ ಚಾಟಿ ಬೀಸಿದ್ದಾರೆ.

ಸಂತ್ರಸ್ತರ ಕುಟುಂಬಗಳಿಗೆ ನೆರವು

ತಮ್ಮ ಈ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್, ದುರಂತದಲ್ಲಿ ಮೃತಪಟ್ಟ 41 ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳುವುದಲ್ಲದೆ, ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸುವ ಸಾಧ್ಯತೆ ಇದೆ(ಏಜೆನ್ಸೀಸ್​).