Lalit Modi 
ದೇಶ

ವಾರಕ್ಕೆ ₹10-12 ಕೋಟಿ ಖರ್ಚು ಮಾಡ್ತೀನಿ, ನಾನು ಹುಟ್ಟುತ್ತಲೇ ವಜ್ರದ ಚಮಚ ಬಾಯಲ್ಲಿಟ್ಟುಕೊಂಡು ಬಂದವನು: ಲಲಿತ್ ಮೋದಿ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿಯ ಜನಕ, ಉದ್ಯಮಿ ಲಲಿತ್ ಮೋದಿ( Lalit Modi) ತಮ್ಮ ಐಷಾರಾಮಿ ಜೀವನಶೈಲಿ ಮತ್ತು ಆದಾಯದ ಮೂಲದ ಕುರಿತು ಮತ್ತೊಮ್ಮೆ ಮುಕ್ತವಾಗಿ ಮಾತನಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಹೌದು, ಭಾರತದಲ್ಲಿ ಹಲವು ಕಾನೂನು ಪ್ರಕ್ರಿಯೆಗಳು ಹಾಗೂ ಪ್ರಕರಣಗಳನ್ನು ಎದುರಿಸುತ್ತಿದ್ದರೂ, ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮಗೆ ವಾರಕ್ಕೆ 10 ರಿಂದ 12 ಕೋಟಿ ರೂಪಾಯಿ ಖರ್ಚಾಗುತ್ತದೆ ಮತ್ತು ಈ ರಾಜವೈಭೋಗದ ಜೀವನವನ್ನು ಯಾರಿಗಾಗಿಯೂ ಬದಲಾಯಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸುದ್ದಿ ಸಂಸ್ಥೆ 'ಎಎನ್ಐ' ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಲಲಿತ್ ಮೋದಿ, "ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಮೊದಲೇ ಹೇಳಿದಂತೆ, ಹುಟ್ಟುವಾಗಲೇ ವಜ್ರದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವನು (ಶ್ರೀಮಂತ ಕುಟುಂಬದಲ್ಲಿ ಜನಿಸಿದವನು). ಕೆಲವರು ನನ್ನ ಮೇಲೆ ಕೆಲವು ಕೋಟಿ ರೂಪಾಯಿಗಳ ಅಕ್ರಮದ ಆರೋಪ ಮಾಡಿದಾಗ ನನಗೆ ನಗು ಬರುತ್ತದೆ. ಏಕೆಂದರೆ ನಾನು ಒಂದೇ ದಿನದಲ್ಲಿ ಅದಕ್ಕಿಂತ ಹೆಚ್ಚಿನ ಹಣವನ್ನು ಸಂಪಾದಿಸುತ್ತೇನೆ. ನಮ್ಮದು ಜಗತ್ತಿನ ಅತಿ ದೊಡ್ಡ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 2.5 ಲಕ್ಷ ಕೋಟಿ ರೂಪಾಯಿಗಳಷ್ಟಿದೆ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಕುಟುಂಬದ ಉದ್ಯಮವೇ ಆದಾಯದ ಮೂಲ

ತಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಿದ ಲಲಿತ್ ಮೋದಿ, "ನನ್ನ ಆದಾಯದ ಪ್ರಮುಖ ಮೂಲ ನಮ್ಮ ಕೌಟುಂಬಿಕ ವ್ಯವಹಾರ ಮತ್ತು ಇತರ ಕೆಲವು ಉದ್ಯಮಗಳು. ನಾನು ಆ ವ್ಯವಹಾರದ ಪ್ರಮುಖ ಭಾಗವಾಗಿದ್ದೇನೆ ಮತ್ತು ಅದರ ಮಾಲೀಕತ್ವವನ್ನು ಹೊಂದಿದ್ದೇನೆ. ಸದ್ಯ ನಾನು ಅದನ್ನು ನನ್ನ ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದು, ಈಗ ಅವರೇ ಅದರ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಎಲ್ಲಾ ಖರ್ಚು-ವೆಚ್ಚಗಳನ್ನು ನನ್ನ ಮಕ್ಕಳೇ ಭರಿಸುತ್ತಾರೆ. ನಾನು ಲಂಡನ್‌ನಲ್ಲಿ ಅತ್ಯಂತ ಸುಂದರವಾದ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಅಸಾಧಾರಣ ಜೀವನಶೈಲಿಯನ್ನು ಆನಂದಿಸುತ್ತಿದ್ದೇನೆ" ಎಂದು ವಿವರಿಸಿದ್ದಾರೆ.
ತಮ್ಮ ಅತಿರೇಕದ ಖರ್ಚುಗಳ ಬಗ್ಗೆ ಮತ್ತಷ್ಟು ಮಾತನಾಡಿದ ಅವರು, "ನನಗೆ ಇಷ್ಟಬಂದ ಜಾಗಕ್ಕೆ ನಾನು ಪ್ರಯಾಣಿಸುತ್ತೇನೆ. ನಾನು ವಾರಕ್ಕೆ ಕನಿಷ್ಠ 10 ರಿಂದ 12 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತೇನೆ, ಕೆಲವು ಬಾರಿ ಆ ಹಣ ಒಂದು ವಾರವೂ ಪೂರ್ತಿ ಬರುವುದಿಲ್ಲ. ಆದರೆ, ಇದು ಹೊಸದೇನಲ್ಲ, ನಾನು ಮೊದಲಿನಿಂದಲೂ ಹೀಗೆಯೇ ಬದುಕುತ್ತಾ ಬಂದಿದ್ದೇನೆ. ಬೇರೆಯವರಿಗಾಗಿ ನಾನು ನನ್ನ ಜೀವನಶೈಲಿಯನ್ನು ಏಕೆ ಬದಲಾಯಿಸಿಕೊಳ್ಳಬೇಕು? ಇತರರ ಮೆಚ್ಚುಗೆಗಾಗಿ ಬದುಕಲು ನಾನೇನು ಸಾಮಾನ್ಯನಲ್ಲ. ನನ್ನ ತಾತ ಅಥವಾ ನನ್ನ ತಂದೆ ಇಬ್ಬರೂ ಎಂದಿಗೂ ಬೇರೆಯವರಿಗಾಗಿ ಬದುಕಿದವರಲ್ಲ, ನಾನು ಕೂಡ ಹಾಗೆಯೇ" ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಜಯ್ ಮಲ್ಯ ನನ್ನ ಗೆಳೆಯ, ಆದರೆ ಅವರ ಕಥೆಯೇ ಬೇರೆ

ಇದೇ ವೇಳೆ, ಭಾರತದಿಂದ ಪಲಾಯನ ಮಾಡಿರುವ ಮತ್ತೊಬ್ಬ ಉದ್ಯಮಿ ವಿಜಯ್ ಮಲ್ಯ ಅವರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮೋದಿ, "ವಿಜಯ್ ಮಲ್ಯ ನನ್ನ ಆಪ್ತ ಗೆಳೆಯ. ಆದರೆ ಅವರ ಕಥೆಯೇ ಬೇರೆ, ಅವರ ಸಮಸ್ಯೆಗಳೇ ಬೇರೆ. ಅವರ ಪ್ರಕರಣವು ಬ್ಯಾಂಕುಗಳು ಮತ್ತು ಸಾಲದ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ. ಆದರೆ ನಾವು ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಒಂದು ರೂಪಾಯಿ ಸಾಲ ಪಡೆದಿಲ್ಲ. ನಮಗೆ ಅದರ ಅಗತ್ಯವೂ ಬಿದ್ದಿಲ್ಲ. ನಾವು ಯಾವಾಗಲೂ ಜನರಿಗೆ ಹಣ ನೀಡಿದ್ದೇವೆಯೇ ಹೊರತು ಪಡೆದಿಲ್ಲ. ನಮ್ಮ ಯಾವುದೇ ಉದ್ಯಮಗಳ ಮೇಲೆ ಬ್ಯಾಂಕ್ ಸಾಲಗಳಾಗಲಿ ಅಥವಾ ಇನ್ಯಾವುದೇ ಹೊಣೆಗಾರಿಕೆಗಳಾಗಲಿ ಇಲ್ಲ. ನಾವು ಸರ್ಕಾರದ ಯಾವುದೇ ಗುತ್ತಿಗೆಗಳನ್ನು (ಕಾಂಟ್ರಾಕ್ಟ್) ಅವಲಂಬಿಸಿಲ್ಲ. ನಾವು ಜಾಗತಿಕ ಮಟ್ಟದ ಗ್ರಾಹಕ ಬ್ರ್ಯಾಂಡ್ ಕಂಪನಿಯಾಗಿದ್ದು, ವಿಶ್ವದ ನಂಬರ್ ಒನ್ ಸಿಗರೇಟ್ ಬ್ರ್ಯಾಂಡ್ ಆದ 'ಮಾರ್ಲ್ಬೋರೊ' (Marlboro) ಅನ್ನು ನಾವೇ ಉತ್ಪಾದಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್​).