ಕಾನ್ಪುರ: "ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ. ನಿಮಗೆ ಅಭಿನಂದನೆಗಳು..." – ಇದು ಜೀವನದ ಆರಂಭಿಕ ಹಂತದಲ್ಲೇ ಸಾವಿಗೆ(Suicide) ಶರಣಾದ 23 ವರ್ಷದ ಯುವ ವಕೀಲನೊಬ್ಬ ಬರೆದ ಕಡೆಯ ಸಾಲುಗಳು.
ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿಯಾದ ಕಟ್ಟುನಿಟ್ಟುಗಳಿಂದ ಬೇಸತ್ತ ಪ್ರಿಯಾಂಶು ಶ್ರೀವಾಸ್ತವ ಎಂಬ ಯುವ ವಕೀಲ, ಕಾನ್ಪುರ ನ್ಯಾಯಾಲಯದ ಸಂಕೀರ್ಣದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಅವರು ಬರೆದಿಟ್ಟಿರುವ ಸುದೀರ್ಘ ಡೆತ್‌ನೋಟ್ ಹಾಗೂ ವಾಟ್ಸಾಪ್ ಸ್ಟೇಟಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಘಟನೆಯ ವಿವರ
ವೃತ್ತಿಯಲ್ಲಿ ವಕೀಲರಾಗಿದ್ದ ಪ್ರಿಯಾಂಶು, ಕಾನ್ಪುರ ನ್ಯಾಯಾಲಯದ ಆವರಣದಲ್ಲೇ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಗೂ ಮುನ್ನ ಅವರು ಐದನೇ ಮಹಡಿಯಲ್ಲಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಮಾತು ಮುಗಿಯುತ್ತಿದ್ದಂತೆಯೇ ಏಕಾಏಕಿ ಕೆಳಕ್ಕೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
6ನೇ ವಯಸ್ಸಿನಿಂದಲೇ ನರಕಯಾತನೆ
ತನ್ನ ಆತ್ಮಹತ್ಯೆಗೆ ತಂದೆಯೇ ನೇರ ಕಾರಣ ಎಂದು ಪ್ರಿಯಾಂಶು ತಮ್ಮ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. "ನನಗೆ ಕೇವಲ ಆರು ವರ್ಷವಿದ್ದಾಗ, ಅನುಮತಿ ಪಡೆಯದೆ ಫ್ರಿಡ್ಜ್‌ನಿಂದ ಮ್ಯಾಂಗೋ ಜ್ಯೂಸ್ ಕುಡಿದೆ ಎಂಬ ಕಾರಣಕ್ಕೆ ನನ್ನ ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಹಾಕಿದ್ದರು. ಪೋಷಕರು ಶಿಸ್ತು ಪಾಲಿಸುವುದು ಸರಿ, ಆದರೆ ಅದು ಮಗುವಿನ ಉಸಿರು ಗಟ್ಟಿಸುವಂತಿರಬಾರದು," ಎಂದು ಬಾಲ್ಯದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಪ್ರತಿಯೊಂದು ಹೆಜ್ಜೆಯಲ್ಲೂ ತಂದೆಯ ಹಸ್ತಕ್ಷೇಪ
ಪ್ರಿಯಾಂಶು ಅವರಿಗೆ ದೈಹಿಕ ಶಿಕ್ಷಣದ (Physical Education) ಮೇಲೆ ಆಸಕ್ತಿ ಇತ್ತು. ಆದರೆ, ಅವರ ತಂದೆ ಬಲವಂತವಾಗಿ ಕಂಪ್ಯೂಟರ್ ಸೈನ್ಸ್ ಓದುವಂತೆ ಒತ್ತಾಯಿಸಿದ್ದರು. "ನನ್ನ ಇಷ್ಟದ ವಿಷಯ ಓದಲು ಬಿಡಲಿಲ್ಲ. ಪ್ರತಿಯೊಂದು ಸಣ್ಣ ವಿಷಯಕ್ಕೂ ನನ್ನನ್ನು ಪ್ರಶ್ನಿಸಲಾಗುತ್ತಿತ್ತು. ಯಾರ ಜೊತೆ ಮಾತನಾಡುತ್ತಿದ್ದೇನೆ? ಎಲ್ಲಿಗೆ ಹೋಗುತ್ತಿದ್ದೇನೆ? ಎಂದು ಸದಾ ಕಣ್ಗಾವಲು ಇಡುತ್ತಿದ್ದರು. ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರು. ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುವುದಕ್ಕಿಂತ ಒಮ್ಮೆಲೆ ಸಾಯುವುದು ಲೇಸು," ಎಂದು ಅವರು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
‘ನನ್ನ ಶವವನ್ನು ತಂದೆಗೆ ಮುಟ್ಟಲು ಬಿಡಬೇಡಿ’
ಪ್ರಿಯಾಂಶು ಅವರ ಕೊನೆಯ ಇಚ್ಛೆ ಓದಿದವರ ಕಣ್ಣಲ್ಲಿ ನೀರು ತರಿಸುವಂತಿದೆ. "ನನ್ನ ಸಾವಿನ ನಂತರ ತಂದೆ ನನ್ನ ದೇಹವನ್ನು ಮುಟ್ಟಬಾರದು. ಆದರೆ, ನನ್ನ ಕುಟುಂಬದ ಮೇಲೆ ಯಾವುದೇ ತೊಂದರೆ ಬರಬಾರದು ಎಂಬ ಕಾರಣಕ್ಕೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಬೇಡಿ. ನನ್ನಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಬಾರದು," ಎಂದು ಬರೆಯುವ ಮೂಲಕ ತಂದೆಯ ಮೇಲಿದ್ದ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ.
ಪೋಷಕರಿಗೆ ಕಿವಿಮಾತು
ತನ್ನ ಸಾವಿನ ಮೂಲಕ ಎಲ್ಲ ಪೋಷಕರಿಗೂ ಒಂದು ಸಂದೇಶ ರವಾನಿಸಿರುವ ಪ್ರಿಯಾಂಶು, "ಮಕ್ಕಳನ್ನು ಶಿಸ್ತಿನ ಹೆಸರಿನಲ್ಲಿ ಚಿತ್ರಹಿಂಸೆ ನೀಡಬೇಡಿ. ಅವರು ತಡೆದುಕೊಳ್ಳುವಷ್ಟು ಮಾತ್ರ ಒತ್ತಡ ಹೇರಿ. ಮಕ್ಕಳ ಜೀವನವನ್ನು ಅವರ ಇಷ್ಟದಂತೆ ಬದುಕಲು ಬಿಡಿ," ಎಂದು ಮನವಿ ಮಾಡಿದ್ದಾರೆ.
ಪೊಲೀಸರ ತನಿಖೆ
ಪ್ರಿಯಾಂಶು ಅವರ ತಂದೆಯೂ ಒಬ್ಬ ವಕೀಲರಾಗಿದ್ದು, ಮಗನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಸದ್ಯಕ್ಕೆ ಅವರು ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ತಿಳಿದುಬಂದಿದೆ. "ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಇತರ ವಕೀಲರ ಪ್ರಕಾರ ಪ್ರಿಯಾಂಶು ಬಹಳ ಮೌನಿ ಹಾಗೂ ಮೃದು ಸ್ವಭಾವದವನಾಗಿದ್ದ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದೇವೆ," ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯದ ಆವರಣದಲ್ಲೇ ನಡೆದ ಈ ದುರ್ಘಟನೆ ಇಡೀ ವಕೀಲರ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ,(ಏಜೆನ್ಸೀಸ್).