ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್
ಡೆಹ್ರಾಡೂನ್: ಜಾರಿ ನಿರ್ದೇಶನಾಲಯವು(ED) ಅವರ ಆಪ್ತ ಸಹಾಯಕನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಂಡ ಉತ್ತರಾಖಂಡ್ ಮಾಜಿ ಸಿಎಂ ಹರೀಶ್ ರಾವತ್(Harish Rawat) ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಅಲ್ಲಗೆಳೆದಿರುವ ಅವರು, ನಾನು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಕೆಲವು ಮಾಧ್ಯಮಗಳು ಹರೀಶ್ ರಾವತ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ. ಸಹೋದರರೇ, ಕಾಂಗ್ರೆಸ್ ಪಕ್ಷದ ಸದಸ್ಯತ್ವವು ನನ್ನ ರಕ್ತದಲ್ಲೇ ಬೆರೆತುಹೋಗಿದೆ. ಹರೀಶ್ ರಾವತ್ ಎಂಬ ವ್ಯಕ್ತಿಯ ಅಸ್ತಿತ್ವವನ್ನೇ ರೂಪಿಸಿರುವುದು ಇದೇ ಪಕ್ಷ. ಇದು ನನ್ನೊಂದಿಗೆ ಸ್ವರ್ಗಕ್ಕೂ ಬರುತ್ತದೆ ಎಂದು ಹೇಳಿದ್ದಾರೆ.
ಡೆಹ್ರಾಡೂನ್ನಲ್ಲಿ ನಿನ್ನೆ ಅಥವಾ ಮೊನ್ನೆ ನಡೆದ ಇಡಿಯ ನಾಟಕೀಯ ಪ್ರದರ್ಶನದಿಂದ ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ನಿಲುವಿನ ಮೇಲೆ ಏನಾದರೂ ಪರಿಣಾಮ ಬೀರಿದ್ದೇ ಆದರೆ, ಪಕ್ಷದಲ್ಲಿ ನಾನು ಹೊಂದಿರುವ ಹುದ್ದೆಗಳಿಗೆ ಅಂದರೆ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಮತ್ತು ಎಐಸಿಸಿ(AICC) ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಲು ನಾನು ಬಯಸುತ್ತೇನೆ. ಆದ್ದರಿಂದ, ಮಾಧ್ಯಮದಲ್ಲಿರುವ ನನ್ನ ಸ್ನೇಹಿತರು ನನ್ನ ಪೋಸ್ಟ್ ಅಥವಾ ಟ್ವೀಟ್ ಅನ್ನು ಸಂಪೂರ್ಣವಾಗಿ ಓದಿ, ತಮ್ಮ ಸುದ್ದಿಯನ್ನು ಸರಿಪಡಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಗುರುವಾರ ಹರೀಶ್ ರಾವತ್ ಅವರು ಸಿಎಂ ಆಗಿದ್ದ 2014-17ರ ಅವಧಿಯಲ್ಲಿ ಅವರ ಓಎಸ್ಡಿ ಆಗಿದ್ದ ಚಂದನ್ ಸಿಂಗ್ ಜೀನಾ ಅವರ ಮನೆ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಒಂದು ಡಜನ್ ಐಷಾರಾಮಿ ಕೈಗಡಿಯಾರಗಳು ಮತ್ತು 32 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದರು.
ರಾಜ್ಯ ಸೇವಾ ಆಯ್ಕೆ ಆಯೋಗವು 2016ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, ದೀರ್ಘಕಾಲದ ತಮ್ಮ ಸಹವರ್ತಿಯಾದ ಜೀನಾ ಅವರ ವಿರುದ್ಧದ ಆರೋಪಗಳನ್ನು ನಾನು ನಂಬುವುದಿಲ್ಲ. ಈ ವಿಷಯವು ಪಕ್ಷದ ಪ್ರಚಾರವನ್ನು ದುರ್ಬಲಗೊಳಿಸುವುದನ್ನು ತಾವು ಖಂಡಿತವಾಗಿಯೂ ಬಯಸುವುದಿಲ್ಲ ಎಂದು ತಿಳಿಸಿದ್ದರು (ಏಜೆನ್ಸೀಸ್).