ಕಾಂಗ್ರೆಸ್ ಸಂಸದ ಶಶಿ ತರೂರ್ 
ದೇಶ

ಆಪರೇಷನ್ ಸಿಂಧೂರ ಹೊರತುಪಡಿಸಿ ಕಾಂಗ್ರೆಸ್​ ಪಕ್ಷದ ಯಾವುದೇ ರೇಖೆಯನ್ನು ನಾನು ಉಲ್ಲಂಘಿಸಿಲ್ಲ; ಶಶಿ ತರೂರ್ | Shashi Tharoor

ತಿರುವನಂತಪುರಂ: ಕಾಂಗ್ರೆಸ್ ಹೈಕಮಾಂಡ್ ಮತ್ತು ಕೇರಳ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಳ್ಳಲಾಗ್ತಿದೆ ಎಂಬ ವಿಚಾರದ ಮಧ್ಯೆಯೂ ತಿರುವಂತನಪುರಂ ಸಂಸದ ಮತ್ತು ಕಾಂಗ್ರೆಸ್​ ಹಿರಿಯ ನಾಯಕ ಶಶಿ ತರೂರ್, ಆಪರೇಷನ್ ಸಿಂಧೂರ ಹೊರತುಪಡಿಸಿ ಕಾಂಗ್ರೆಸ್​ ಪಕ್ಷದ ರೇಖೆಯನ್ನು ಯಾವುದೇ ಹಂತದಲ್ಲೂ ನಾನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳ ಸಾಹಿತ್ಯ ಉತ್ಸವದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಈ ಬಗ್ಗೆ ಉತ್ತರಿಸಿರುವ ಅವರು, ನಾನು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಯಾವುದೇ ನಿಲುವುಗಳನ್ನು, ಯಾವುದೇ ಹಂತದಲ್ಲೂ ಉಲ್ಲಂಘಿಸಿಲ್ಲ. ಸಾರ್ವಜನಿಕವಾಗಿ ತಾತ್ವಿಕವಾಗಿ ಭಿನ್ನಾಭಿಪ್ರಾಯವಿರುವ ಏಕೈಕ ವಿಷಯವೆಂದರೆ ಅದು ಆಪರೇಷನ್ ಸಿಂಧೂರ್ ಬಗ್ಗೆ, ಅಲ್ಲಿ ನಾನು ಬಲವಾದ ನಿಲುವನ್ನು ತೆಗೆದುಕೊಂಡಿದ್ದೇನೆ. ಮತ್ತು ನಾನು ಅದರ ಬಗ್ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
ಪಹಲ್ಗಾಮ್ ಘಟನೆಯ ಬಳಿಕ ವೀಕ್ಷಕ ಮತ್ತು ಬರಹಗಾರನಾಗಿ ಪತ್ರಿಕೆಯಲ್ಲಿ ಅಂಕಣ ಬರೆದಿದ್ದೇನೆ. ದಾಳಿಗೆ ಶಿಕ್ಷೆಯಾಗದಂತೆ ಬಿಡಬಾರದು, ಪ್ರತಿಕ್ರಿಯೆ ಇರಬೇಕು ಎಂದಿದ್ದೇನೆ. ಭಾರತವು ಅಭಿವೃದ್ಧಿಯತ್ತ ಗಮನಹರಿಸಿದ್ದರೂ, ಪಾಕಿಸ್ತಾನದೊಂದಿಗೆ ದೀರ್ಘಕಾಲದ ಸಂಘರ್ಷಕ್ಕೆ ಅದನ್ನು ಎಳೆಯಬಾರದು. ಯಾವುದೇ ಕ್ರಮವು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸುವುದಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ತಿಳಿಸಿದ್ದಾರೆ.
ಭಾರತ ಸತ್ತರೆ ಯಾರು ಬದುಕುತ್ತಾರೆ? ಎಂಬ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಮಾತನ್ನು ಉಲ್ಲೇಖಿಸಿ, ಭಾರತ ಅಪಾಯದಲ್ಲಿದ್ದಾಗ ಅದರ ಭದ್ರತೆ ಮತ್ತು ಜಗತ್ತಿನಲ್ಲಿ ಅದರ ಸ್ಥಾನ ತೊಡಗಿಸಿಕೊಂಡಾಗ, ಭಾರತವು ಮೊದಲು ಬರುತ್ತದೆ. ಉತ್ತಮ ಭಾರತವನ್ನು ನಿರ್ಮಿಸುವ ಪ್ರಕ್ರಿಯೆಯ ಭಾಗವಾಗಿ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಹೊಂದಿರಬೇಕು. ಆದರೆ ರಾಷ್ಟ್ರೀಯ ಹಿತಾಸಕ್ತಿಗಳು ಅಂತ ಬಂದಾಗ, ಭಾರತ ಮೇಲುಗೈ ಸಾಧಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್​ ನಾಯಕತ್ವದೊಂದಿಗೆ ಶಶಿ ತರೂರ್ ಭಿನ್ನಾಭಿಪ್ರಾಯ ಹೊಂದಿದ್ದು, ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎನ್ನುವ ವರದಿಗಳಿವೆ. ಇತ್ತೀಚೆಗೆ ರಾಹುಲ್ ಗಾಂಧಿ ಕೇರಳಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಉದ್ದೇಶಪೂರ್ವಕವಾಗಿ ತರೂರ್ ಹೆಸರನ್ನು ಪ್ರಸ್ತಾಪಿಸಿಲ್ಲ ಎನ್ನಲಾಗಿದೆ. ಜೊತೆಗೆ ಕೇರಳ ಕಾಂಗ್ರೆಸ್ ಕೂಡ ಅವರಿಂದ ಅಂತರ ಕಾಯ್ದುಕೊಳ್ತಿದೆ ಎನ್ನಲಾಗಿದೆ (ಏಜೆನ್ಸೀಸ್).