I Hate India (ಚಿತ್ರ Instagram)
- ಭಾರತದ ಪ್ರವಾಸಿ ತಾಣವಾದ ಗೋವಾಕ್ಕೆ ಏಕವ್ಯಕ್ತಿ ಪ್ರಯಾಣ ಕೈಗೊಂಡಿದ್ದ ಭಾರತೀಯ ಮಹಿಳೆ
- ಅಲ್ಲಿನ ಪುರುಷರ ವರ್ತನೆಯಿಂದ ಬೇಸತ್ತು, ನಾನು ಭಾರತವನ್ನು ದ್ವೇಷಿಸಲು ಪ್ರಾರಂಭಿಸಿದ್ದೇನೆ ಎಂದಿದ್ದಾರೆ
- ಅಲ್ಲಿನ ಟ್ಯಾಕ್ಸಿ ಚಾಲಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ಇದರಿಂದ ನಾನು ಭಯಗೊಂಡಿದ್ದೆ
- ರಸ್ತೆಯಲ್ಲಿ ಹೋಗುವಾಗ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಮಸಾಜ್ ಪಾರ್ಲರ್ ಎಲ್ಲಿದೆ ಎಂದು ಕೇಳಿದ
ಪಣಜಿ: ಭಾರತದ ಪ್ರವಾಸಿ ತಾಣವಾದ ಗೋವಾಕ್ಕೆ ಏಕವ್ಯಕ್ತಿ ಪ್ರಯಾಣ ಕೈಗೊಂಡಿದ್ದ ಭಾರತೀಯ ಮಹಿಳೆಯರೊಬ್ಬರು ಅಲ್ಲಿನ ಪುರುಷರ ವರ್ತನೆಯಿಂದ ಬೇಸತ್ತು, ನಾನು ಭಾರತವನ್ನು ದ್ವೇಷಿಸಲು ಪ್ರಾರಂಭಿಸಿದ್ದೇನೆ (I Hate India) ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯು ಸೋಷಿಯಲ್ ಮೀಡಿಯಾದಲ್ಲಿ ತಾವು ಅನುಭವಿಸಿದ ಮೂರು ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ.
ಟ್ಯಾಕ್ಸಿ ಚಾಲಕರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ಇದರಿಂದ ನಾನು ಭಯಗೊಂಡಿದ್ದೆ ಆಗ ಅವರು ನನ್ನನ್ನು ಅಪಹಾಸ್ಯ ಮಾಡುವುದರ ಜೊತೆಗೆ ನನ್ನನ್ನು ಹೊಡೆಯುವ ಹಂತಕ್ಕೂ ಬಂದಿದ್ದರು ಎಂದು ಹೇಳಿದರು. ಇದಾದ ಬಳಿಕ ರಸ್ತೆಯಲ್ಲಿ ಹೋಗುವ ಸಮಯದಲ್ಲಿ ವ್ಯಕ್ತಿಯೊಬ್ಬ ನನ್ನ ಬಳಿ ಬಂದು ಮಸಾಜ್ ಪಾರ್ಲರ್ ಎಲ್ಲಿದೆ ಎಂದು ಕೇಳಿದ. ಮತ್ತೊಂದು ಘಟನೆಯಲ್ಲಿ, ಒಬ್ಬ ವ್ಯಕ್ತಿ ಈಕೆಯ ಸಮೀಪ ಬಂದು ಕಿವಿಯಲ್ಲಿ ಏನೋ ಅಸಭ್ಯವಾಗಿ ಪಿಸುಗುಟ್ಟಿ ಕೀಟಲೆ ಮಾಡಿದ್ದಾನೆ. ಇಂತಹ ಸರಣಿ ಕಿರುಕುಳಗಳಿಂದಾಗಿ ನಾನು ಮಾನಸಿಕವಾಗಿ ಹಿಂಸೆ ಅನುಭವಿಸಿದೆ ಎಂದು ಹೇಳಿದರು.
ಈ ಮಹಿಳೆಯು ತಮ್ಮ ಪೋಸ್ಟ್ನಲ್ಲಿ ಮುಂಬೈಯನ್ನು "ಒಂದು ಅಪವಾದ" ಎಂದು ಕರೆದಿದ್ದಾರೆ. ಆದಾಗ್ಯೂ, ದೇಶದ ಉಳಿದ ಭಾಗಗಳಲ್ಲಿರುವ ಭಾರತೀಯ ಪುರುಷರು ಮಹಿಳೆಯರಿಗೆ ಕಿರುಕುಳ ನೀಡುವ ಮೂಲಕ ಭಾರತದ ಶ್ರೀಮಂತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ತೋರಿಸುತ್ತಾರೆ. ಮಹಿಳೆಯನ್ನು ತಿಳಿಯುವ ಮೊದಲೇ ಆಕೆಯ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಒಬ್ಬ ಪುರುಷನು ತನ್ನ ಕಣ್ಣುಗಳಲ್ಲಿ ಭಯಾನಕ ನೋಟದೊಂದಿಗೆ ನಮ್ಮ ಕಡೆಗೆ ಬರಲು ಪ್ರಾರಂಭಿಸಿದಾಗ ಮಾತ್ರ ನಮಗೆ ದೇವರ ನೆನಪಾಗುತ್ತದೆ. ಆದರೆ ದುರಂತವೆಂದರೆ, ನಾವು ಪ್ರಾರ್ಥಿಸುವ ಆ ದೇವರೂ ಕೂಡ ಒಬ್ಬ ಪುರುಷನೇ. ಇದನ್ನು ಓದುವಾಗ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ, ಮುಂದಿನ ಬಾರಿ ನೀವು ಹೆಣ್ಣಾಗಿ ಹುಟ್ಟಲು ಪ್ರಯತ್ನಿಸಿ. ಆಗ ಪ್ರತಿದಿನ ನಿಮ್ಮನ್ನು ದಿಟ್ಟಿಸಿ ನೋಡುವುದು, ಅನುಮತಿ ಇಲ್ಲದೆ ಮುಟ್ಟುವುದು ಮತ್ತು ಭಯಪಡಿಸುವುದು ಎಂತಹ ಅನುಭವ ಎಂದು ನಿಮಗೆ ತಿಳಿಯುತ್ತದೆ ಎಂದು ಕಿಡಿಕಾರಿದ್ದಾರೆ.
ಗುಜರಾತಿ ಮಹಿಳೆಯ ಈ ಸುದೀರ್ಘ ಪೋಸ್ಟ್ ಮತ್ತು ಆಕೆಯ ಕಟುವಾದ ಟೀಕೆಗಳು ಕೇವಲ ಒಂದು ವೈಯಕ್ತಿಕ ನೋವಲ್ಲ, ಬದಲಾಗಿ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿರುವ 'ಪುರುಷ ಪ್ರಧಾನ ಮನೋಭಾವ' ಮತ್ತು ಮಹಿಳಾ ಸುರಕ್ಷತೆಯ ವೈಫಲ್ಯದ ವಿರುದ್ಧದ ಆಕ್ರೋಶವಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಹಲವಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಮಹಿಳಾ ಹಕ್ಕುಗಳೊಂದಿಗೆ ಭಾರತದ ಮಹಾನ್ ಸಾಮಾಜಿಕ ಕ್ರಾಂತಿ ಸಂಭವಿಸುತ್ತದೆ ಎಂದು ಬರೆದಿದ್ದರೆ, ಇನ್ನೊಬ್ಬ ಬಳಕೆದಾರರು ವಿಪರ್ಯಾಸವೆಂದರೆ.. ಭಾರತವು ಧಾರ್ಮಿಕ ದೇಶ," ಎಂದು ಬರೆದಿದ್ದಾರೆ (ಏಜೆನ್ಸೀಸ್).