ಯಾಸಿನ್ ಮಲಿಕ್ ಮತ್ತು ಅವರ ಪತ್ನಿ ಮುಶಾಲ್ ಮುಲ್ಲಿಕ್ ಹಳೆಯ ಚಿತ್ರ 
ದೇಶ

“ಅವಳು ವಿಧವೆಯಾಗಿ ಸಾಯೋದು ಬೇಡ…”: ಪಾಕಿಸ್ತಾನಿ ಪತ್ನಿಗೆ ವಿಚ್ಛೇದನ ನೀಡಲು ಯಾಸಿನ್ ಮಲಿಕ್ ನಿರ್ಧಾರ? Yasin Malik

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಪ್ರಮುಖ ಆರೋಪಿ ಹಾಗೂ ಜಮ್ಮು-ಕಾಶ್ಮೀರ ಲಿಬರೇಷನ್​ ಫ್ರಂಟ್​ ಮಖ್ಯಸ್ಥ ಯಾಸಿನ್​ ಮಲಿಕ್ (Yasin Malik)​, ತಮ್ಮ ಪಾಕಿಸ್ತಾನಿ ಪತ್ನಿ ಮುಷಾಲ್ ಮಲ್ಲಿಕ್​ಳಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ಕಾಶ್ಮೀರದಲ್ಲಿ ಭಯೋತ್ಪಾದನೆ,ಹಾಗೂ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಹತ್ತಾರು ದೇಶವಿರೋಧಿ ಮೊಕದ್ದಮೆಗಳನ್ನು ಎದುರಿಸುತ್ತಿರುವ ಯಾಸಿನ್​ ಮಲಿಕ್​ ಸದ್ಯ ದೆಹಲಿಯ ತಿಹಾರ್​ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ನನ್ನ ಹೆಂಡತಿ ಧ್ವನಿ ಕೇಳದೆ 8 ವರ್ಷವಾಗಿದೆ!

ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಹಿನ್ನಲೆ ಯಾಸಿನ್​ ಮಲಿಕ್​ಗೆ ಕುಟುಂಬ ವರ್ಗದವರೊಂದಿಗೆ ಮಾತನಾಡಲು ಅಥವಾ ಬೇಟಿಗೆ ಅವಕಾಶವನ್ನು ನೀಡಿಲ್ಲ. ನ್ಯಾಯಾಲಯಕ್ಕೆ ಯಾಸಿನ್​ ಮಲಿಕ್ ಸಲ್ಲಿಸಿರುವ ಅಫಿಡೇವಿಟ್​​ನಲ್ಲಿ ನಾನು ನನ್ನ ಹೆಂಡತಿ, ಮಕ್ಕಳ ಮಾತನ್ನು ಕೇಳಿಸಿಕೊಳ್ಳದೆ ಸುಮಾರು ಎಂಟು ವರ್ಷವಾಗಿದೆ.
ಕನಿಷ್ಟ ನನ್ನ ಹೆಂಡತಿ ವಿಧವೆಯಾಗಿ ಸಾಯುವುದು ಬೇಡ. ಆದ್ದರಿಂದ ನಾನು ನನ್ನ ಹೆಂಡತಿಗೆ ವಿಚ್ಛೇದನ ನೀಡುತ್ತೇನೆಂದು ಮಲಿಕ್​ ತಿಳಿಸಿದ್ದಾರೆ. ಅವಳು ನನ್ನನ್ನು ಮದುವೆಯಾಗಿ ಯಾವ ಸುಖವನ್ನು ಕಂಡಿಲ್ಲ, ಈಗಲಾದರೂ ಅವಳು ಉತ್ತಮವಾದ ಬದುಕನ್ನು ಕಟ್ಟುಕೊಳ್ಳಲಿ. ನನ್ನ ನೆನಪಿನಲ್ಲಿಯೇ ಕೊನೆವರೆಗೆ ಇರುವುದು ಬೇಡವೆಂದು ಯಾಸಿನ್​ ಮಲಿಕ್​ ಹೇಳಿದ್ದಾರೆಂದು ತಿಳಿದು ಬಂದಿದೆ.

ಮಕ್ಕಳ ಬಾಲ್ಯವನ್ನು ನೋಡಲಿಲ್ಲ!

ಕ್ರಾಂತಿ, ಹೋರಾಟ ಹಾಗೂ ದೀರ್ಫ ಜೈಲುವಾಸದ ಹಿನ್ನಲೆ ನನ್ನ ಮಕ್ಕಳ ಬಾಲ್ಯವನ್ನು ನಾನು ನೋಡಲಾಗಲಿಲ್ಲ. ಎಲ್ಲರ ತಂದೆಯಂತೆ ನಾನು ಸಂಜೆಯಾದ ಮೇಲೆ ಮನೆಗೆ ಬರುತ್ತಿರಲಿಲ್ಲ. ನನ್ನ ಕಾರಣದಿಂದ ನನ್ನ ಮಕ್ಕಳ ಬಾಲ್ಯ ಬಹಳ ಕಷ್ಟಕರವಾಗಿ ಸಾಗಿತು. ಅವರಿಗೆ ತಂದೆಯ ಮಾರ್ಗದರ್ಶನ ದೊರೆಯಲೇ ಇಲ್ಲ ಎಂದು ಅಫಿಡೇವಿಟ್​ನಲ್ಲಿ ಯಾಸಿನ್​ ಮಲಿಕ್​ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).