Gold  
ದೇಶ

ಕಣ್ಣು ಮುಚ್ಚಿ ಪ್ರಾರ್ಥಿಸಿ ಅಂದ... ಕಣ್ಣು ಬಿಡುವಷ್ಟರಲ್ಲಿ ಮಾಯವಾಯ್ತು ಮೈಮೇಲಿದ್ದ ಬಂಗಾರ! | Gold

ನವದೆಹಲಿ: ದೆಹಲಿಯ ಪಿತಾಂಪುರದಲ್ಲಿ ಸನ್ಯಾಸಿಯಂತೆ ನಟಿಸಿ 65 ವರ್ಷದ ವೃದ್ಧೆಯೊಬ್ಬರ ಚಿನ್ನಾಭರಣಗಳನ್ನು(Gold) ದೋಚಿದ್ದ ಖತರ್ನಾಕ್ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ನಿಮ್ಮ ಜೀವನದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ನಂಬಿಸಿ ಈ ಕೃತ್ಯ ಎಸಗಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಿಥುನ್ ಎಂದು ಗುರುತಿಸಲಾಗಿದ್ದು, ಈತನಿಂದ ಸಂತ್ರಸ್ತೆಗೆ ಸೇರಿದ ಒಂದು ಚಿನ್ನದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಡೆದಿದ್ದೇನು?

ಪೊಲೀಸರ ಮಾಹಿತಿ ಪ್ರಕಾರ, ಈ ಘಟನೆಯು ಮಾರ್ಚ್ 3 ರಂದು ನಡೆದಿದೆ. ದೂರುದಾರೆ ರಾಜ್ ರಾಣಿ (65) ಅವರು ಪಿತಾಂಪುರದ ಹತ್ತಿರದ ಮನೆಯೊಂದರಲ್ಲಿ ಮನೆಗೆಲಸ ಮುಗಿಸಿ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಈ ವೇಳೆ ಸನ್ಯಾಸಿಯ ವೇಷದಲ್ಲಿದ್ದ ಮಿಥುನ್ ಅವಳನ್ನು ತಡೆದಿದ್ದಾನೆ.
ತಾನು ದೊಡ್ಡ ಸನ್ಯಾಸಿಯೆಂದು ಬಿಂಬಿಸಿಕೊಂಡ ಆತ, ಮಹಿಳೆಗೆ ಮನೆಯಲ್ಲಿ ತೊಂದರೆಗಳಿವೆ ಮತ್ತು ಅದನ್ನು ನಿವಾರಿಸಲು ತಾನು "ವಿಶೇಷ ಪೂಜೆ" ಮಾಡುವುದಾಗಿ ನಂಬಿಸಿದ್ದಾನೆ. ಪೂಜೆಯ ನೆಪದಲ್ಲಿ ಅವಳ ಮೈಮೇಲಿದ್ದ ಚಿನ್ನದ ಆಭರಣಗಳನ್ನು ತೆಗೆಯುವಂತೆ ಹೇಳಿದ್ದಾನೆ. ಆಕೆಯ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ಆಭರಣಗಳನ್ನು ಒಂದು ಪೊಟ್ಟಣದಲ್ಲಿ ಕಟ್ಟುವಂತೆ ನಟಿಸಿ, ಕಣ್ಣು ಮುಚ್ಚಿ ಪ್ರಾರ್ಥಿಸುವಂತೆ ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ಬಂಧನ

ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ಕಣ್ಗಾವಲು ಮತ್ತು ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಆರೋಪಿ ಮಿಥುನ್‌ನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಪ್ರಸ್ತುತ ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ ವಂಚನೆ ಪ್ರಕರಣ ದಾಖಲಿಸಲಾಗಿದ್ದು, ಈತ ಈ ಹಿಂದೆ ಇಂತಹ ಎಷ್ಟು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಬಗ್ಗೆ ವಿಚಾರಣೆ ಮುಂದುವರಿದಿದೆ,(ಏಜೆನ್ಸೀಸ್).