ತಿಹಾರ್ ಜೈಲಿನ ಜಿಡ್ಡು ಆಹಾರ ತಿನ್ನಲು ಸಾಧ್ಯವಿಲ್ಲ ಎಂದು ಅಮೆರಿಕನ್ ಪ್ರಜೆ
- ಭಾರತದ ತಿಹಾರ್ ಜೈಲಿನ ಊಟ ಬೇಡ, ನನಗಾಗಿ ಪ್ರತ್ಯೇಕ ಕಿಚನ್ ಕೊಡಿ ಎಂದು ಅಮೆರಿಕದ ಕೈದಿ
- 19 ಐಟಂಗಳ ಲಿಸ್ಟ್ ಹಿಡಿದು ಕೋರ್ಟ್ ಮೆಟ್ಟಿಲೇರಿದ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್
- ತಿಹಾರ್ ಜೈಲಿನ ಜಿಡ್ಡು ಆಹಾರ ತಿನ್ನಲು ಸಾಧ್ಯವಿಲ್ಲ ಎಂದು ಅಮೆರಿಕನ್ ಪ್ರಜೆ
- ಸೀಗಡಿ, ಪಾಸ್ತಾ, ಚಿಕನ್ ಒಳಗೊಂಡ 19 ವಸ್ತುಗಳ ಮೆನು ಕೇಳಿದ ಭಯೋತ್ಪಾದನಾ ಆರೋಪಿ!
ನವದೆಹಲಿ: ಭಾರತದ ಅತ್ಯಂತ ಕಠಿಣ ಮತ್ತು ಭದ್ರತೆಯುಳ್ಳ ಜೈಲೆಂದೇ ಖ್ಯಾತಿಗಳಿಸಿರುವ ತಿಹಾರ್ ಜೈಲು ಈಗ ಮತ್ತೊಂದು ವಿಚಿತ್ರ ಸಂಗತಿಯಿಂದ ಸುದ್ದಿಯಲ್ಲಿದೆ. ಭಯೋತ್ಪಾದನಾ ಆರೋಪದಡಿ ಜೈಲು ಸೇರಿರುವ ಅಮೆರಿಕದ ಪ್ರಜೆಯೊಬ್ಬ, ತಿಹಾರ್ ಜೈಲಿನಲ್ಲಿ ಕೊಡುವ ಜಿಡ್ಡಿನ ಮತ್ತು ಮಸಾಲೆಯುಕ್ತ ಆಹಾರ ತಿನ್ನಲು ನನ್ನ ಕೈಲಿ ಆಗುತ್ತಿಲ್ಲ (American Prisoner on Tihar Food) ಎಂದು ಕೋರ್ಟ್ ಮೆಟ್ಟಿಲೇರಿದ್ದಾನೆ. ಅಷ್ಟೇ ಅಲ್ಲದೆ, ತನಗಾಗಿ ಜೈಲಿನಲ್ಲೇ ಪ್ರತ್ಯೇಕ ಕಿಚನ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಬರೋಬ್ಬರಿ 19 ಐಟಂಗಳ ಲಿಸ್ಟ್ ಕೊಟ್ಟಿದ್ದಾನೆಂದು ವರದುಯಾಗಿದೆ.
ಏನಿದು ಅಮೆರಿಕನ್ ಖೈದಿಯ ಡಿಮ್ಯಾಂಡ್?
ಭಯೋತ್ಪಾದನಾ ಪ್ರಕರಣದಲ್ಲಿ ಸಿಲುಕಿ ಏಪ್ರಿಲ್‌ನಿಂದ ತಿಹಾರ್ ಜೈಲಿನಲ್ಲಿರುವ ಮ್ಯಾಥ್ಯೂ ಆರನ್ ವ್ಯಾನ್‌ಡೈಕ್ (Matthew Aaron VanDyke) ಎಂಬ ಅಮೆರಿಕ ಪ್ರಜೆ ದೆಹಲಿ ನ್ಯಾಯಾಲಯಕ್ಕೆ ವಿಚಿತ್ರ ಅರ್ಜಿಯೊಂದನ್ನು ಸಲ್ಲಿಸಿದ್ದಾನೆ.
ಅದರಲ್ಲಿ, ನಾನು ಕಳೆದ ಮೇ 6 ರಿಂದ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇನೆ. ಇಂದಿಗೆ ನನ್ನ ಉಪವಾಸ 50 ದಿನ ದಾಟಿದೆ. ನನಗೆ ಇಲ್ಲಿನ ಎಣ್ಣೆಯುಕ್ತ, ಡೀಪ್-ಫ್ರೈ ಮಾಡಿದ ಮಸಾಲೆ ಆಹಾರ ತಿನ್ನಲು ಆಗುತ್ತಿಲ್ಲ. ಇದರಿಂದ ನನ್ನ ಆರೋಗ್ಯ ಕೆಟ್ಟಿದ್ದು, 14 ಕೆಜಿ ತೂಕ ಇಳಿದಿದ್ದೇನೆ ಮತ್ತು ಕಣ್ಣಿನ ದೃಷ್ಟಿ ಮಂದವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾನೆ.
ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಪತ್ರ ಬರೆದಿರುವ ವ್ಯಾನ್‌ಡೈಕ್, ತನಗೆ ಜೈಲಿನಲ್ಲಿ ಸ್ವತಃ ಅಡುಗೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಮತ್ತು ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಒದಗಿಸಬೇಕು ಎಂದು ಕೇಳಿದ್ದಾನೆ.
ಮೆನುವಿನಲ್ಲಿ ಏನೇನಿದೆ ಗೊತ್ತಾ?
ಸಾಮಾನ್ಯವಾಗಿ ಜೈಲಿನಲ್ಲಿ ರೊಟ್ಟಿ, ದಾಲ್, ಅನ್ನ ಸಿಗುತ್ತದೆ. ಆದರೆ ಈ ಅಮೆರಿಕನ್ ಖೈದಿಯ ಬೇಡಿಕೆಯ ಲಿಸ್ಟ್ ನೋಡಿದರೆ ಫೈವ್ ಸ್ಟಾರ್ ಹೋಟೆಲ್ ಮೆನುವಿನಂತಿದೆ. ಆತ ಕೇಳಿರುವ 19 ವಸ್ತುಗಳ ಪಟ್ಟಿಯಲ್ಲಿ ಸೀಗಡಿ (Shrimp), ಕೋಳಿ ಮಾಂಸ, ಕೆಂಪು ಮಾಂಸ, ಮೀನು, ಆಲಿವ್ ಎಣ್ಣೆ, ಸೋಯಾ ಹಾಲು, ಟೋನ್ಡ್ ಮಿಲ್ಕ್, ಬೆಣ್ಣೆ, ಬ್ರೆಡ್, ಪಾಸ್ತಾ, ನೂಡಲ್ಸ್, ಬೀನ್ಸ್, ಆಲೂಗಡ್ಡೆ, ಈರುಳ್ಳಿ ಮತ್ತು ಮಿನರಲ್ ಬಾಟಲ್ ನೀರನ್ನು ಕೇಳಿದ್ದಾನೆ. ಇದರ ಜೊತೆಗೆ ಅಡಿಗೆ ಮಾಡಿಕೊಳ್ಳಲು ಪಾತ್ರೆ ಪಗಡೆಗಳನ್ನು ಸಹ ಒದಗಿಸುವಂತೆ ಅರ್ಜಿಯಲ್ಲಿ ನಮೂದಿಸಿದ್ದಾನೆ.
ಅಷ್ಟಕ್ಕೂ ಈ ವ್ಯಾನ್‌ಡೈಕ್ ಮಾಡಿರುವ ತಪ್ಪೇನು?
ಈ ವರ್ಷದ ಮಾರ್ಚ್ 13 ರಂದು ಕೋಲ್ಕತ್ತಾ ಏರ್‌ಪೋರ್ಟ್‌ನಲ್ಲಿ ಎನ್‌ಐಎ (NIA) ಅಧಿಕಾರಿಗಳು ಈತನನ್ನು ಬಂಧಿಸಿದ್ದರು. ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆ ನಡೆಸಲು ಸ್ಕೆಚ್ ಹಾಕಿದ ಆರೋಪ ಈತನ ಮೇಲಿದೆ. ಈತ ಮತ್ತು ಈತನ ಜೊತೆಗಿದ್ದ ಆರು ಜನ ಉಕ್ರೇನ್ ಪ್ರಜೆಗಳು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು, ಗುವಾಹಟಿ ಮೂಲಕ ಮಿಜೋರಾಂ ತಲುಪಿದ್ದರು.
ಅಲ್ಲಿನ ನಿಷೇಧಿತ ದಂಗೆಕೋರ ಗುಂಪುಗಳಿಗೆ AK-47 ರೈಫಲ್ ಒದಗಿಸುವುದು, ಅವರಿಗೆ ಯುದ್ಧ ತರಬೇತಿ ನೀಡುವುದು ಮತ್ತು ಯುರೋಪ್‌ನಿಂದ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸರಬರಾಜು ಮಾಡಲು ನೆರವಾದ ಗಂಭೀರ ಆರೋಪಗಳನ್ನು ಇವರು ಎದುರಿಸುತ್ತಿದ್ದಾರೆ.
ತಿಹಾರ್ ಜೈಲಿನ ನಿಯಮ ಏನು ಹೇಳುತ್ತೆ?
ದೆಹಲಿ ಜೈಲು ನಿಯಮಗಳು-2018 ರ ಪ್ರಕಾರ, ವಿಚಾರಣಾಧೀನ ಖೈದಿಗಳಿಗೆ ಜೈಲಿನ ಮೆನುವಿನ ಪ್ರಕಾರವೇ ಊಟ ನೀಡಲಾಗುತ್ತದೆ. ಯಾರಿಗೂ ಅವರ ವೈಯಕ್ತಿಕ ಇಷ್ಟ-ಕಷ್ಟಗಳ ಪ್ರಕಾರ ಹೊರಗಿನ ಆಹಾರ ಅಥವಾ ಸ್ವಂತ ಅಡುಗೆಗೆ ಅವಕಾಶ ಇರುವುದಿಲ್ಲ. ಆದರೆ, ಖೈದಿಗೆ ಮಧುಮೇಹ, ಕಿಡ್ನಿ ಸಮಸ್ಯೆ ಅಥವಾ ಅಪೌಷ್ಟಿಕತೆ ಇದ್ದು, ಜೈಲು ವೈದ್ಯರು ಲಿಖಿತವಾಗಿ ಪ್ರಮಾಣೀಕರಿಸಿದರೆ ಮಾತ್ರ ವಿಶೇಷ ಆಹಾರ ನೀಡಬಹುದು.
ಸದ್ಯ ಪಟಿಯಾಲ ಹೌಸ್ ಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಜುಲೈ 21 ಕ್ಕೆ ಮುಂದೂಡಿದೆ. ಜೈಲು ಅಧಿಕಾರಿಗಳು ಈ ಅಮೆರಿಕನ್ ಖೈದಿಯ ಡಿಮ್ಯಾಂಡ್‌ಗೆ ಏನು ಉತ್ತರ ಕೊಡುತ್ತಾರೆ ಮತ್ತು ಕೋರ್ಟ್ ಸೀಗಡಿ-ಪಾಸ್ತಾ ತಿನ್ನಲು ಬಿಡುತ್ತಾ ಇಲ್ಲವೇ ಜೈಲೂಟದ ರೊಟ್ಟಿ ತಿನ್ನಲು ಆದೇಶಿಸುತ್ತಾ ಎಂಬುದನ್ನು ಕಾದು ನೋಡಬೇಕು, (ಏಜನ್ಸೀಸ್).