ಕೋಲ್ಕತ್ತಾ: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಎಜೆಯುಪಿ ಮುಖ್ಯಸ್ಥ ಮತ್ತು ನೌಡಾ ಶಾಸಕ ಹುಮಾಯೂನ್ ಕಬೀರ್ಗೆ ಎಚ್ಚರಿಕೆ ನೀಡಿರುವ ಸಿಎಂ ಸುವೇಂದು ಅಧಿಕಾರಿ(CM Suvendu Adhikari), ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಂತೆ ದುರ್ಬಲ ಮತ್ತು ಹೇಡಿ ಮುಖ್ಯಮಂತ್ರಿಯಲ್ಲ ನಾನು ಎಂದು ಹೇಳಿದ್ದಾರೆ.
ವಿಧಾನಸಭಾ ಉಪಚುನಾವಣೆಗೆ ಮುನ್ನ ಮುರ್ಷಿದಾಬಾದ್‌ನ ರೆಜಿನಗರದಲ್ಲಿ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ಇತ್ತೀಚೆಗೆ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗಿರುವ ಆಮ್ ಜನತಾ ಉನ್ನಾಯನ್ ಪಕ್ಷದ ಮುಖ್ಯಸ್ಥ ಮತ್ತು ನೌಡಾ ಶಾಸಕ ಹುಮಾಯೂನ್ ಕಬೀರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ನಾನು ಮಮತಾ ಬ್ಯಾನರ್ಜಿಯವರಂತೆ ದುರ್ಬಲ ಮತ್ತು ಹೇಡಿ ಮುಖ್ಯಮಂತ್ರಿಯಲ್ಲ, ತಪ್ಪು ಮಾಡಬೇಡಿ. ಚುನಾಯಿತ ಪ್ರತಿನಿಧಿಗಳಿಂದ ಬರುವ ಅಜಾಗರೂಕ ಹೇಳಿಕೆಗಳನ್ನು ನಾನು ಸಹಿಸುವುದಿಲ್ಲ. ದೇಶದ ಸಂವಿಧಾನವನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಶಾಸಕರು ತಮ್ಮ ಪದಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮುಂದಿನ 30ರಿಂದ 45 ದಿನಗಳಲ್ಲಿ ರೆಜಿನಗರ ಉಪಚುನಾವಣೆ ನಡೆಯಲಿದೆ. ಈ ಪ್ರದೇಶದಲ್ಲಿ ಬಹಳ ದಿನಗಳಿಂದ ಆಚರಣೆಯಲ್ಲಿರುವ ಹಿಂದೂ-ಮುಸ್ಲಿಂ ರಾಜಕೀಯಕ್ಕೆ ವಿರುದ್ಧವಾಗಿ ಇಲ್ಲಿನ ಮತದಾರರು ಯಾವುದೇ ಬೇಡಿಕೆಗಳನ್ನು ಹೊಂದಿರಲಿ. ಬಿಜೆಪಿ ಕೋಮು ರಾಜಕೀಯಕ್ಕಿಂತ ಅಭಿವೃದ್ಧಿಯತ್ತ ಗಮನ ಹರಿಸುತ್ತದೆ ಎಂದು ತಿಳಿಸಿದ್ದಾರೆ.
ಹಿಂದಿನ ಟಿಎಂಸಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಪ್ರಸ್ತಾವಿತ ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ) ಮತ್ತು ವಕ್ಫ್ ಕಾಯ್ದೆಯಂತಹ ವಿಷಯಗಳ ವಿರುದ್ಧದ ಪ್ರತಿಭಟನೆಗಳ ಹೆಸರಿನಲ್ಲಿ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಅಶಾಂತಿ ಉಂಟಾಗಿ ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೆಜಿನಗರ ಮತ್ತು ನೌಡಾ ಎರಡೂ ಕ್ಷೇತ್ರದಲ್ಲಿ ಗೆದ್ದ ಹುಮಾಯೂನ್ ಕಬೀರ್, ರೆಜಿನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಸಿಎಂ ಸಹ ತಮ್ಮ ಸ್ವಕ್ಷೇತ್ರ ನಂದಿಗ್ರಾಮ್ ಮತ್ತು ಭವಾನಿಪುರ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರು ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದು, ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ (ಏಜೆನ್ಸೀಸ್).