ತಾನು ಅಜಿತ್ ದೋವಲ್ ಅವರ ರಹಸ್ಯ ಏಜೆಂಟ್ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿ ಅರೆಸ್ಟ್ 
ದೇಶ

ನಾನು ಅಜಿತ್​ ದೋವಲ್​ ರಹಸ್ಯ ಏಜೆಂಟ್​: ಟೆಸ್ಲಾ ಮೇಲೆ 'ಭಾರತ ಸರ್ಕಾರ' ಸ್ಟಿಕ್ಕರ್​; ಬಿಹಾರದಲ್ಲಿ ನಕಲಿ ಐಎಎಸ್​ ಅಧಿಕಾರಿ ಅರೆಸ್ಟ್​​! Fake IAS Officer

ಪ್ರಮುಖ ಮುಖ್ಯಾಂಶಗಳು

  • ಹಾರದಲ್ಲಿ ನಕಲಿ ಐಎಎಸ್ ಅಧಿಕಾರಿಯಾಗಿ ಮೆರೆಯುತ್ತಿದ್ದ ವ್ಯಕ್ತಿ ಬಂಧನ
  • ತಾನು ಅಜಿತ್ ದೋವಲ್ ಅವರ ರಹಸ್ಯ ಏಜೆಂಟ್ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿ ಅರೆಸ್ಟ್
  • ಟೆಸ್ಲಾ ಕಾರು ಮತ್ತು 'ಭಾರತ ಸರ್ಕಾರ' ಸ್ಟಿಕ್ಕರ್ ಸೇರಿ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳ ಜಪ್ತಿ
ಬಿಹಾರ​​: ಕಾರಿನ ಮೇಲೆ ಭಾರತ ಸರ್ಕಾರ ಎಂದು ಬರೆಸಿಕೊಂಡು, ತಾನೊಬ್ಬ ಐಎಎಸ್ ಅಧಿಕಾರಿ (Fake IAS Officer) ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ರಹಸ್ಯ ಏಜೆಂಟ್ ಎಂದು ಬಿಂಬಿಸಿಕೊಂಡು ವಂಚನೆ ಮಾಡುತ್ತಿದ್ದ ಖದೀಮನೊಬ್ಬನನ್ನು ಬಿಹಾರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಆರೋಪಿಯಿಂದ ಐಷಾರಮಿ ಟೆಸ್ಲಾ ಕಾರು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾನು ಅಜಿತ್​ ದೋವಲ್​ ಆಪ್ತ!

ಟೆಸ್ಲಾ ಕಾರಿನ ಮೇಲೆ ಭಾರತ ಸರ್ಕಾರ ಎಂಬ ಸ್ಟಿಕ್ಕರ್​ ಅಂಟಿಸಿಕೊಂಡು, ಸುತ್ತ ಮುತ್ತಲಿನ ಜನರನ್ನು ಹೆದರಿಸುತ್ತಾ, ಅಡ್ಡಾಡುತ್ತಿದ್ದ ಖದೀಮನೊಬ್ಬನನ್ನು ಬಿಹಾರ್​ ಪೊಲೀಸರು ಬಂಧಿಸಿದ್ದಾರೆ. ನಕಲಿ ಏಜೆಂಟ್​​ನನ್ನು ಬಂಧಿಸಿರುವ ಖಗಾರಿಯಾ ಎಸ್‌ಪಿ ಭಾನು ಪ್ರತಾಪ್ ಸಿಂಗ್, ಆರೋಪಿಯನ್ನು ಮನೀಶ್ ಗುಪ್ತಾ ಎಂದು ಹೆಸರಿಸಿದ್ದಾರೆ.

ಇತನ ಚಲನ-ವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಇಂದು ಇತನ ಮನೆ ಮೇಲೆ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ. ವಿಚಾರಣೆ ವೇಳೆ ಈ ವ್ಯಕ್ತಿ ತಾನೊಬ್ಬ ಹಿರಿಯ ಐಎಎಸ್ ಅಧಿಕಾರಿ ಎಂದೂ, ಕೇಂದ್ರ ಜಾಗೃತ ಆಯೋಗದ ನಕಲಿ ಕಾರ್ಡ್ ತೋರಿಸಿ ಪ್ರಭಾವ ಬೀರಲು ಯತ್ನಿಸಿದ್ದಾನೆ.


ಅಷ್ಟೇ ಅಲ್ಲದೆ, ದೇಶದ ಪ್ರಮುಖ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಅವರ ಅಡಿಯಲ್ಲಿ ತಾನು ರಹಸ್ಯ ಏಜೆಂಟ್ ಆಗಿ ಕೆಲಸ ಮಾಡುತ್ತಿರುವುದಾಗಿ ಪೊಲೀಸರನ್ನು ನಂಬಿಸಲು ವಿಫಲ ಯತ್ನ ನಡೆಸಿದ್ದಾನೆ. ಆದರೆ, ಆತನ ಎಲ್ಲಾ ದಾಖಲೆಗಳು ಮತ್ತು ಗುರುತಿನ ಚೀಟಿಗಳು ಸಂಪೂರ್ಣ ನಕಲಿ ಎಂಬುದು ತನಿಖೆಯಿಂದ ಬಯಲಾಗಿದೆ.

ಬೆಲೆಬಾಳುವ ವಸ್ತುಗಳ ಜಫ್ತಿ!

ಜಮಾಲ್ಪುರದಲ್ಲಿರುವ ಮನೀಶ್ ಗುಪ್ತಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಬಂಗಾರದ ಗಣಿಯೇ ಸಿಕ್ಕಿದಂತಾಗಿದೆ. ಇತನ ಮನೆಯಿಂದ ಅತ್ಯಾಧುನಿಕ ಸ್ವಯಂ ಚಾಲನಾ ವ್ಯವಸ್ಥೆ ಹೊಂದಿರುವ ಟೆಸ್ಲಾ ಹಾಗೂ ಟಾಟಾ ಸಫಾರಿ ಕಾರು ದೊರೆತಿದೆ. ಅಷ್ಟೇ ಅಲ್ಲದೆ ಆಮದು ಮಾಡಿಕೊಂಡ ಸುಮಾರು 31 ಲೀಟರ್ ವಿದೇಶಿ ಮದ್ಯದ ಜೊತೆಗೆ ಕ್ರಟ್​ಗಟ್ಟಲೆ ಬಿಯರ್​ ದೊರೆತಿವೆ.

ಹಾಗೆಯೇ ಇತನ ಬಳಿ 5 ಆಪಲ್ ಐಫೋನ್‌ಗಳು, 20 ಕ್ರೆಡಿಟ್ ಕಾರ್ಡ್‌ಗಳು, 8 ಡೆಬಿಟ್ ಕಾರ್ಡ್‌ಗಳು ಹಾಗೂ 4 ಚೆಕ್ ಪುಸ್ತಕಗಳು ಸಿಕ್ಕಿದ್ದು, ಚಿಂಕೆಯ ಎರಡು ಕೊಂಬುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದುವರಿದ ತನಿಖೆ!

ಮನೀಶ್ ಗುಪ್ತಾ ಇಷ್ಟು ದೊಡ್ಡ ಮಟ್ಟದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಐಷಾರಮಿ ಕಾರುಗಳನ್ನು ಹೇಗೆ ಸಂಪಾದಿಸಿದ? ಈ ಹಿಂದೆ ಯಾರಿಗೆಲ್ಲಾ ವಂಚನೆ ಮಾಡಿದ್ದಾನೆ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇವನ ಮೇಲೆ ವಂಚನೆ ಹಾಗೂ ವೈನ್ಯಜೀವಿ ವಿರೋಧಿ ಚಟುವಟಿಕೆಯಲ್ಲಿ ತೊಡಗಿದಕ್ಕಾಗಿ ಎಫ್​ಐಆರ್​ ದಾಖಲಾಗಿದ್ದು, ಮುಂದೇನಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ, (ಏಜನ್ಸೀಸ್).