ನಾನು ಮಹಿಳೆ ನಿನ್ನ ಮೇಲೆ ಸುಳ್ಳು ಕೇಸ್ ಹಾಕಿ ಸಿಲುಕಿಸುತ್ತೇನೆ... ಯುವಕನಿಗೆ ಅಂಚೆ ಕಚೇರಿ ಉದ್ಯೋಗಿಯ ಬೆದರಿಕೆ! Woman Threatens
- ಕಚೇರಿಗೆ ಬಂದಿದ್ದ ಯುವಕನಿಗೆ ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ ಸರ್ಕಾರಿ ಮಹಿಳಾ ಉದ್ಯೋಗಿ
- ಉತ್ತರಾಖಂಡದ ಅಂಚೆ ಕಚೇರಿಯಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
- ನಾನೊಬ್ಬ ಮಹಿಳೆ, ಮನಸ್ಸು ಮಾಡಿದರೆ ನಿನ್ನ ಮೇಲೆ ಸುಳ್ಳು ಕೇಸ್ ಹಾಕಿ ಸಿಲುಕಿಸುತ್ತೇನೆಂದ ಉದ್ಯೋಗಿ
- ವಿಡಿಯೋ ವೈರಲ್ ಬೆನ್ನಲ್ಲೇ ಆಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ
Woman Threatens : ಉತ್ತರಾಖಂಡದ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರೊಬ್ಬರು ತಮ್ಮ ಕಚೇರಿಗೆ ಬಂದಿದ್ದ ಯುವಕನಿಗೆ ಸಾರ್ವಜನಿಕವಾಗಿಯೇ ಬೆದರಿಕೆ ಹಾಕುತ್ತಿರುವ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ನಾನೊಬ್ಬ ಮಹಿಳೆ, ನಾನು ಮನಸ್ಸು ಮಾಡಿದರೆ ನಿನ್ನ ಮೇಲೆ ಸುಳ್ಳು ಕೇಸ್ ಹಾಕಿ ಸಿಲುಕಿಸುತ್ತೇನೆ ಎಂಬ ಉದ್ಧಟತನದ ಮಾತುಗಳನ್ನಾಡಿ ಯುವಕನನ್ನು ಹೆದರಿಸುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ತನ್ನ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ ದೃಶ್ಯಾವಳಿಗಳು ಇಂಟರ್ನೆಟ್‌ನಲ್ಲಿ ಬಿಡುಗಡೆಯಾಗುತ್ತಿದ್ದಂತೆ, ಆ ಮಹಿಳಾ ಉದ್ಯೋಗಿಯ ವರ್ತನೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ಮತ್ತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
ಸಂತ್ರಸ್ತ ಯುವಕನು ಕಚೇರಿಯ ಅಧಿಕೃತ ಕೆಲಸದ ನಿಮಿತ್ತ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿದ್ದನು. ಆದರೆ, ಅಲ್ಲಿನ ಸೇವೆಗಳಿಗೆ ಸಂಬಂಧಿಸಿದಂತೆ ಉದ್ಯೋಗಿ ಮತ್ತು ಯುವಕನ ನಡುವೆ ದಿಢೀರ್ ವಾಗ್ವಾದ ಆರಂಭವಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ತನ್ನ ವಿರುದ್ಧ ಮಾತನಾಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಹಾಗೂ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಆಕೆ ಬಹಿರಂಗವಾಗಿ ಯುವಕನಿಗೆ ಬೆದರಿಕೆ ಹಾಕಿದ್ದಾಳೆ.
ಮಹಿಳಾ ಸುರಕ್ಷತೆಗಾಗಿ ಇರುವ ಕಾನೂನನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತೇನೆ ಎಂದು ಸರ್ಕಾರಿ ನೌಕರಳೊಬ್ಬಳು ಇಷ್ಟೊಂದು ಬಹಿರಂಗವಾಗಿ ಮತ್ತು ಧೈರ್ಯವಾಗಿ ಹೇಳಿರುವುದು ಸಾರ್ವಜನಿಕರಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಕಾನೂನಿನ ದುರುಪಯೋಗದ ಕುರಿತಾದ ಈ ಆಘಾತಕಾರಿ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಆ ನೌಕರಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ.
ಈ ವಿಡಿಯೋವನ್ನು ವೀಕ್ಷಿಸಿದ ಸಾರ್ವಜನಿಕರು ಇದು ಅಧಿಕಾರದ ದುರುಪಯೋಗ ಮತ್ತು ಮಹಿಳಾ ಸುರಕ್ಷತಾ ಕಾನೂನುಗಳ ದುರ್ಬಳಕೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ನೌಕರರು ಸಾಮಾನ್ಯ ಜನರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಮತ್ತು ಈ ಮಹಿಳಾ ಅಧಿಕಾರಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅನೇಕರು ರೈಲ್ವೆ ಹಾಗೂ ಅಂಚೆ ಇಲಾಖೆ ಸಚಿವಾಲಯಗಳನ್ನು ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕೆಲವು ಮಹಿಳೆಯರು ತಮಗಿರುವ ಕಾನೂನಿನ ರಕ್ಷಣೆಯನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಪುರುಷರ ಆತ್ಮವಿಶ್ವಾಸವನ್ನು ಮತ್ತು ಕಾನೂನಿನ ಮೇಲಿರುವ ನಂಬಿಕೆಯನ್ನು ಧ್ವಂಸಗೊಳಿಸುತ್ತಿದೆ ಎಂದು ಕೆಲ ನೆಟ್ಟಿಗರು ಕಳಕಳಿ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).