Revanth Reddy > ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ
ಬೆಂಗಳೂರು/ಹೈದರಾಬಾದ್: ತೆಲಂಗಾಣದ ಒತ್ತುವರಿ ವಿರೋಧಿ ವಿಶೇಷ ಕಾರ್ಯಪಡೆಗೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನಿಂದ ಪ್ರೇರಣೆ ಪಡೆದು ಹೆಸರಿಡಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ನೀಡಿರುವ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಬಿಆರ್‌ಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಆಸ್ತಿ ರಕ್ಷಣೆ ಸಂಸ್ಥೆಗೆ (HYDRAA) ಜರ್ಮನ್ ಸರ್ವಾಧಿಕಾರಿ ಹಿಟ್ಲರ್‌ನಿಗೆ ಹೈಡ್ರಾ ಎಂಬ ಪದದ ಮೇಲಿದ್ದ ಅತಿಯಾದ ಒಲವೇ ಕಾರಣ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಂವಾದದ ಸಂದರ್ಶನದಲ್ಲಿ ಮಾತನಾಡಿದ ಸಿಎಂ ರೆಡ್ಡಿ, ಹೈಡ್ರಾ ಎಂಬುದು ಹಿಟ್ಲರ್‌ನ ಅತ್ಯಂತ ನೆಚ್ಚಿನ ಪದವಾಗಿತ್ತು. ಯಾರನ್ನಾದರೂ ಹತ್ಯೆ ಮಾಡಬಲ್ಲ ಸಾಮರ್ಥ್ಯವಿದ್ದ ಅವನ ಪ್ರಮುಖ ಕೋರ್ ತಂಡವನ್ನು ಹೈಡ್ರಾ ಎಂದು ಕರೆಯಲಾಗುತ್ತಿತ್ತು. ಹಾಗಾಗಿ, ನಾನು ಹಿಟ್ಲರ್‌ನಿಂದ ಪ್ರೇರಣೆ ಪಡೆದು ಇದಕ್ಕೆ ಹೈಡ್ರಾ ಎಂದು ಹೆಸರಿಟ್ಟಿದ್ದೇನೆ. ಇತಿಹಾಸ ತಜ್ಞರು ಮುಖ್ಯಮಂತ್ರಿಗಳ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ಹಿಟ್ಲರ್‌ನ ಆಪ್ತ ವಲಯಕ್ಕೂ ಹೈಡ್ರಾ ಪದಕ್ಕೂ ಯಾವುದೇ ಸಂಬಂಧವಿರಲಿಲ್ಲ. ಬದಲಿಗೆ ನಾಜಿ ಜರ್ಮನಿಯ ವಿರುದ್ಧ ಬ್ರಿಟಿಷ್ ರಾಯಲ್ ಏರ್ ಫೋರ್ಸ್ ನಡೆಸಿದ ಬಾಂಬ್ ದಾಳಿಯ ಕಾರ್ಯಾಚರಣೆಗೆ ಈ ಹೆಸರಿಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್‌ನ ತುರ್ತು ಪರಿಸ್ಥಿತಿಯ ಮಾನಸಿಕತೆ ಮತ್ತೆ ಬಯಲಾಗಿದೆ; ಶೆಹಜಾದ್ ಪೂನಾವಾಲಾ ವಾಗ್ದಾಳಿ
ರೇವಂತ್ ರೆಡ್ಡಿ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ಪಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರೇವಂತ್ ರೆಡ್ಡಿ ಹಿಟ್ಲರ್ ಮತ್ತು ತುರ್ತು ಪರಿಸ್ಥಿತಿಯ ಅಪಾಯಕಾರಿ ಮಾನಸಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ, ಇದರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪೂನಾವಾಲಾ, ಕಾಂಗ್ರೆಸ್‌ನ ಅಪಾಯಕಾರಿ ಹಿಟ್ಲರ್ ಮತ್ತು ತುರ್ತು ಪರಿಸ್ಥಿತಿಯ ಮಾನಸಿಕತೆ ಮತ್ತೊಮ್ಮೆ ಸಾರ್ವಜನಿಕವಾಗಿ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ. ಹೈಡ್ರಾ (HYDRAA) ರಚಿಸಲು ತಮಗೆ ಹಿಟ್ಲರ್ ಪ್ರೇರಣೆ ಎಂದು ರೇವಂತ್ ರೆಡ್ಡಿ ಈಗ ಬಹಿರಂಗವಾಗಿಯೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಿಂದ ಹಿಡಿದು ರೇವಂತ್ ರೆಡ್ಡಿ ಅವರು ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದವರೆಗೆ ಇದು ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.
ಉತ್ತರ-ದಕ್ಷಿಣ ವಿಭಜನೆ ಹಾಗೂ ಜಿನ್ನಾ ಪ್ರವೃತ್ತಿ ಆರೋಪ
ಪ್ರಾದೇಶಿಕ ಅಸಮಾನತೆ ಹಾಗೂ ದಕ್ಷಿಣ ರಾಜ್ಯಗಳ ಮೇಲಿನ ಹೆಚ್ಚಿನ ತೆರಿಗೆ ಹೊರೆ ಮತ್ತು ರಾಷ್ಟ್ರೀಯ ನಾಯಕತ್ವದ ಕೇಂದ್ರೀಕರಣದ ಕುರಿತು ರೇವಂತ್ ರೆಡ್ಡಿ ನೀಡಿದ್ದ ಹೇಳಿಕೆಗಳನ್ನು ಕೂಡ ಬಿಜೆಪಿ ವಕ್ತಾರರು ತೀವ್ರವಾಗಿ ಖಂಡಿಸಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು...?
ಸಂವಾದದಲ್ಲಿ ಸಿಎಂ ರೇವಂತ್ ರೆಡ್ಡಿ, ದೇಶದ ರಾಷ್ಟ್ರಪತಿಗಳು ಉತ್ತರ ಭಾರತದವರು, ಪ್ರಧಾನ ಮಂತ್ರಿಗಳೂ ಉತ್ತರ ಭಾರತದವರು. ನಾವು ತೆರಿಗೆಯನ್ನು ಮಾತ್ರ ಪಾವತಿಸುತ್ತಾ, ದೆಹಲಿಗೆ ಸದಾ ಸೆಲ್ಯೂಟ್ ಹೊಡೆಯುವ ದ್ವಿತೀಯ ದರ್ಜೆ ನಾಗರಿಕರಾಗಿ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ದೇಶವನ್ನು ಒಡೆಯುವ ಯತ್ನ ಎಂದು ಕರೆದಿರುವ ಪೂನಾವಾಲಾ, ರೇವಂತ್ ರೆಡ್ಡಿ ಅವರು ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು(ಏಜೆನ್ಸೀಸ್).