ಹೈದರಾಬಾದ್: ನಗರದ ಚಾರ್ಮಿನಾರ್‌ನಂತಹ ಜನನಿಬಿಡ ಪ್ರದೇಶದಲ್ಲೇ ಒಂಟಿ ಯುವತಿಯನ್ನು ಗುರಿಯಾಗಿಸಿಕೊಂಡು 'ರ‍್ಯಾಪಿಡೋ' (Rapido) ಚಾಲಕನೆಂದು ನಂಬಿಸಲು ಯತ್ನಿಸಿದ ಶಂಕಿತ ನಕಲಿ ಚಾಲಕನೊಬ್ಬ, ಯುವತಿಯ ಸಮಯಪ್ರಜ್ಞೆ ಮತ್ತು ವಿಚಾರಣೆಗೆ ಬೆಚ್ಚಿಬಿದ್ದು ಕಾಲ್ಕಿತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಈ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ವಿಷಯ ಯುವತಿ ಸಿದ್ಧೇಶ್ವರಿ ಸುಗಂಧ್, ಶನಿವಾರ ರಾತ್ರಿ 9 ಗಂಟೆಯ ಸುಮಾರಿಗೆ ನಾನು ಚಾರ್ಮಿನಾರ್ ಬಳಿ ಆಟೋಗಾಗಿ ಕಾಯತ್ತಿದ್ದೆ. ಈ ವೇಳೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ, "ಮೇಡಂ, ಎಲ್ಲಿಗೆ ಹೋಗಬೇಕು? ನಾನು ರ‍್ಯಾಪಿಡೋ ಚಾಲಕ, ರೈಡ್ ಬೇಕೇ?" ಎಂದು ವಿಚಾರಿಸಿದ್ದಾನೆ.
ಆತನ ನಡವಳಿಕೆಯಿಂದ ಅನುಮಾನಗೊಂಡ ಸಿದ್ಧೇಶ್ವರಿ, ತಕ್ಷಣವೇ ಚಾಲಕ ಗುರುತಿನ ಚೀಟಿ ತೋರಿಸುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಆತನ ಸ್ಕೂಟರ್ಗೆ ಯಾವುದೇ ನೋಂದಣಿ ಸಂಖ್ಯೆಯ ಪ್ಲೇಟ್ ಇಲ್ಲದಿರುವುದನ್ನು ಗಮನಿಸಿ ಪ್ರಶ್ನಿಸಿದ್ದಾರೆ.
ಸತ್ಯಾ ಸತ್ಯತೆ ಬಯಲು
ತನ್ನ ಗುರುತಿನ ಚೀಟಿ ತೋರಿಸುವ ಬದಲಿಗೆ, ತಾನು ‘ಇರ್ಫಾನ್’ ಎಂದು ಪರಿಚಯಿಸಿಕೊಂಡ ಆ ವ್ಯಕ್ತಿ ಮೊಬೈಲ್‌ನಲ್ಲಿ 'ಪ್ಲೇ ಸ್ಟೋರ್' ಮೂಲಕ ರ‍್ಯಾಪಿಡೋ ಆ್ಯಪ್ ಡೌನ್‌ಲೋಡ್ ಮಾಡಲು ಮುಂದಾಗಿದ್ದಾನೆ. ಇದರಿಂದ ಆತ ನಕಲಿ ವ್ಯಕ್ತಿ ಎಂಬುದು ಸಿದ್ಧೇಶ್ವರಿಗೆ ಸ್ಪಷ್ಟವಾಗಿದೆ. ನಂತರ ಆ ವ್ಯಕ್ತಿ ವಾಹನ ಸ್ಟಾರ್ಟ್ ಆಗುತ್ತಿಲ್ಲ ಎಂದು ನೆಪ ಹೇಳಲು ಯತ್ನಿಸಿದಾಗ, ಸ್ಟಾರ್ಟ್ ಆಗದ ವಾಹನದಲ್ಲಿ ಹೇಗೆ ರೈಡ್ ನೀಡುತ್ತೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಆತನ ಮೊಬೈಲ್ ಪರಿಶೀಲಿಸಿದಾಗ ಆ್ಯಪ್‌ನಲ್ಲಿ ಒಟಿಪಿ (OTP) ನಮೂದಿಸುವ ಪುಟ ಕಾಣಿಸಿದೆ. ಆತನ ಹೆಸರು ಮತ್ತು ವಿವರಗಳಿಂದ ಅಸಮಾಧಾನಗೊಂಡ ಸಿದ್ಧೇಶ್ವರಿ, ಇಲ್ಲಿಂದ ತಕ್ಷಣವೇ ಹೊರಡು ಇಲ್ಲದಿದ್ದರೆ ಪರಿಣಾಮ ಸರಿ ಇರುವುದಿಲ್ಲ ಎಂದು ಹೇಳಿದ್ದಾಗಿ ಸಿದ್ಧೇಶ್ವರಿಗ ತಿಳಿಸಿದ್ದಾರೆ.
ಜಾಗೃತಿ ಮತ್ತು ರ‍್ಯಾಪಿಡೋ ಸಂಸ್ಥೆಯ ಸ್ಪಷ್ಟನೆ
ಯಾವುದೇ ಪೂರ್ವ ಬುಕಿಂಗ್ ಅಥವಾ ಪರಿಶೀಲನೆ ಇಲ್ಲದೆ ರಾತ್ರಿ 9 ಗಂಟೆಗೆ ಒಬ್ಬಂಟಿ ಹುಡುಗಿಯನ್ನು ನೇರವಾಗಿ ಬಂದು ರೈಡ್ಗೆ ಕರೆಯುವ ಧೈರ್ಯ ಆತನಿಗೆ ಹೇಗೆ ಬಂತು ಎಂಬುದು ನಮಗೆ ಆಘಾತ ತಂದಿದೆ. ರ‍್ಯಾಪಿಡೋ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಂಬಿಕೆಗಳಿಸಲು ಯತ್ನಿಸಿದ್ದರಿಂದ ಈ ಜಾಗೃತಿ ವೀಡಿಯೊ ಹಂಚಿಕೊಳ್ಳುತ್ತಿದ್ದೇನೆ, ಎಂದು ಸಿದ್ಧೇಶ್ವರಿ ಬರೆದುಕೊಂಡಿದ್ದಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ 'ರ‍್ಯಾಪಿಡೋ ' ಸಂಸ್ಥೆಯು, ಘಟನೆಯನ್ನು ಗಮನಕ್ಕೆ ತಂದಿದ್ದಕ್ಕೆ ಸಿದ್ಧೇಶ್ವರಿ ಅವರಿಗೆ ಧನ್ಯವಾದ ತಿಳಿಸಿದೆ. "ಗ್ರಾಹಕರು ವಾಹನ ಏರುವ ಮುನ್ನ ಆ್ಯಪ್‌ನಲ್ಲಿ ಚಾಲಕನ ವಿವರ, ವಾಹನ ಸಂಖ್ಯೆ ಮತ್ತು ಒಟಿಪಿ (OTP) ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಬುಕಿಂಗ್ ಇಲ್ಲದೆ ನೇರವಾಗಿ ಬಂದು ಚಾಲಕರೆಂದು ಹೇಳಿಕೊಳ್ಳುವವರನ್ನು ಯಾವುದೇ ಕಾರಣಕ್ಕೂ ನಂಬಬಾರದು," ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದೆ (ಏಜೆನ್ಸೀಸ್).