ನೋಯ್ಡಾ: ಮದುವೆಯ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿ ವಂಚಿಸಿದ ಆರೋಪದ ಮೇಲೆ ನೋಯ್ಡಾದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಪತಿಯು ತನಗೆ ದಟ್ಟವಾದ ಕೂದಲಿದೆ ಎಂದು ನಂಬಿಸಿ, ವಾಸ್ತವದಲ್ಲಿ ತನ್ನ ಬೋಳು(Bald Head) ತಲೆಯನ್ನು 'ಹೇರ್ ಪ್ಯಾಚ್' (ವಿಗ್) ಮೂಲಕ ಮುಚ್ಚಿಟ್ಟಿದ್ದ ಎನ್ನುವುದು ಮಹಿಳೆಯ ಪ್ರಮುಖ ಆರೋಪವಾಗಿದೆ.
ಘಟನೆಯ ಹಿನ್ನೆಲೆ
ನೋಯ್ಡಾದ ಗೌರ್ ಸಿಟಿ ನಿವಾಸಿಯಾದ ಲವಿಕಾ ಗುಪ್ತಾ ಮತ್ತು ಸಂಯಮ್ ಜೈನ್ ಅವರ ವಿವಾಹವು ಜನವರಿ 16, 2024 ರಂದು ನಡೆದಿತ್ತು. ಮದುವೆಯ ಮಾತುಕತೆಯ ಸಮಯದಲ್ಲಿ, ಸಂಯಮ್ ತನಗೆ ದಟ್ಟವಾದ ಕೂದಲಿದೆ ಎಂದು ಹೇಳಿಕೊಂಡಿದ್ದನು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆತನಿಗೆ ಸಂಪೂರ್ಣ ಬೋಳು ತಲೆ ಇರುವುದು ಮತ್ತು ಆತ ಕೃತಕ ಕೂದಲನ್ನು ಬಳಸುತ್ತಿರುವುದು ಪತ್ನಿಗೆ ತಿಳಿದುಬಂದಿದೆ.
ಗಂಭೀರ ಆರೋಪಗಳು
ಕೇವಲ ಬೋಳು ತಲೆ ಮಾತ್ರವಲ್ಲದೆ, ಪತಿ ತನ್ನ ಶಿಕ್ಷಣ ಮತ್ತು ಆದಾಯದ ಬಗ್ಗೆಯೂ ಸುಳ್ಳು ಹೇಳಿದ್ದಾನೆ ಎಂದು ಲವಿಕಾ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ವಿದೇಶ ಪ್ರವಾಸದ ಸಮಯದಲ್ಲಿ ಪತಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದನೆನ್ನಲಾಗಿದೆ.
ಬಿಸ್ರಖ್ ಪೊಲೀಸ್ ಠಾಣೆಯಲ್ಲಿ ಪತಿ ಸಂಯಮ್ ಜೈನ್ ಮತ್ತು ಆತನ ನಾಲ್ವರು ಸಂಬಂಧಿಕರ ವಿರುದ್ಧ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ,(ಏಜೆನ್ಸೀಸ್).