ಲಖನೌ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬ ಇನ್ಸ್ಟಾಗ್ರಾಂನಲ್ಲಿ ಭಾರಿ ಫಾಲೋವರ್ ಹೊಂದಿದ್ದ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದು(Husband kills wife), ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಶುಕ್ರವಾರ(ಜು. 03) ವರದಿಯಾಗಿದೆ.
ಮೀರತ್ ಜಿಲ್ಲೆಯ ಸರೂರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ರಾ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮೃತರನ್ನು ನಿಶಾ ಚೌಹಾಣ್ (45) ಎಂದು ಗುರುತಿಸಲಾಗಿದೆ. ಪತಿ ಪ್ರದೀಪ್ ಚಹೌಣ್. ನಿಶಾ ಚೌಹಾಣ್ ಎಂಬ ಮಹಿಳೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಾ ಸಕ್ರಿಯರಾಗಿದ್ದರು. ಬ್ಯೂಟಿಷಿಯನ್ ಆಗಿಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಪತಿ ಮತ್ತು ಪತ್ನಿ ಸೇರಿ ಇಬ್ಬರು ಆಸ್ತಿ ಖರೀದಿ ಮಾಡಿದ್ದರು ಎನ್ನಲಾಗಿದ್ದು, ಭೂಮಿಯನ್ನು ಯಾರ ಹೆಸರಿಗೆ ನೋಂದಾಯಿಸಬೇಕೆನ್ನುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಇಬ್ಬರ ಜಗಳ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಬಳಿಕ ಇದರಿಂದ ಕೋಪಗೊಂಡಿರುವ ಪತಿ ಪ್ರದೀಪ್, ನಿಶಾಳ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಇಬ್ಬರ ಗಲಾಟೆಯನ್ನು ಬಿಡಿಸಲು ಹೋದ ಅವರ 17 ವರ್ಷದ ಮಗನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಘಟನೆ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅವರು ಸ್ಥಳಕ್ಕೆ ಆಗಮಿಸಿ ನಿಶಾ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪ್ರದೀಪ್ ಜೊತೆಗೆ ಅವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್).