ಉಪ್ಪಿನ ವಿಚಾರಕ್ಕೆ ಪತಿ-ಪತ್ನಿ ಜಗಳ ಕೊಲೆಯಲ್ಲಿ ಅಂತ್ಯ
- ಬಿರಿಯಾನಿಯಲ್ಲಿ ಉಪ್ಪು ಕಡಿಮೆ ಅನ್ನೋ ವಿಷಯಕ್ಕೆ ಜಗಳ
- ಉಪ್ಪಿಗೆ ಶುರುವಾದ ಜಗಳ ಬರ್ಬರ ಕೊಲೆಯಲ್ಲಿ ಅಂತ್ಯ
- ಇದು ಒಂದು ದಿನದ ವಿಷಯವಲ್ಲ ಎಂದ ಮಹಿಳೆಯ ಹೆತ್ತವರು
ಮುಂಬೈ: ಬಿರಿಯಾನಿಯಲ್ಲಿ ಉಪ್ಪು ಹೆಚ್ಚಾಯ್ತು ಎಂಬ ವಿಚಾರಕ್ಕೆ ದಂಪತಿ ನಡುವೆ ಶುರುವಾದ ಜಗಳ, ಬರ್ಬರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮುಂಬೈನ ಬೈಂಗನ್ವಾಡಿ ಪ್ರದೇಶದಲ್ಲಿ ವರದಿಯಾಗಿದೆ.
ಬಿರಿಯಾನಿಯಲ್ಲಿ ಉಪ್ಪು ಹೆಚ್ಚಾಗಿದೆ ಎಂಬ ಕಾರಣಕ್ಕೆ ಹೆಂಡತಿಯನ್ನು ಅಮಾನುಷವಾಗಿ ಥಳಿಸಿ, ಕೊಂದಿರುವ ಹುಚ್ಚು ಪತಿರಾಯ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮೃತ ಮಹಿಳೆಯನ್ನು ನಾಜಿಯಾ ಪರ್ವೀನ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇದು ಉಪ್ಪಿನ ವಿಷಯಕ್ಕೆ ನಡೆದಿರುವ ಕೊಲೆ ಎಂದು ಪೊಲೀಸರು ಶಂಕಿಸಿದ್ದರು. ಆದರೆ, ಮಹಿಳೆಯ ಕುಟುಂಬಸ್ಥರು ಮಾತ್ರ, ಇದು ಕೇವಲ ಒಂದು ರಾತ್ರಿಯಲ್ಲಿ ನಡೆದ ವಿಷಯವಲ್ಲ ಎಂದು ಗಂಭೀರವಾಆಗಿ ಆರೋಪಿಸಿದ್ದಾರೆ.
"ನಾಜಿಯಾ ಮತ್ತು ಪತಿ ಮಂಜರ್ ಎರಡು ವರ್ಷಗಳ ಹಿಂದೆ, ಪರಸ್ಪರ ಪ್ರೀತಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ಮದುವೆಯ ಬಳಿಕ ದಂಪತಿ ನಡುವೆ ಯಾವುದು ಸರಿಯಿರಲಿಲ್ಲ. ಆತನ ನಡುವಳಿಕೆ ದಿನ ಕಳೆದಂತೆ ಬದಲಾಯಿತು. ಸಣ್ಣಪುಟ್ಟ ವಿಷಯಗಳಿಗೂ ಆಗಾಗ್ಗೆ ನಾಜಿಯಾ ಮೇಲೆ ಕೂಗಾಡಿ, ಹೊಡೆಯುತ್ತಿದ್ದ. ಸುಮಾರು ಮೂರು ತಿಂಗಳ ಹಿಂದೆ, ಹೀನಾಯವಾಗಿ ಮಗಳ ಮೇಲೆ ಹಲ್ಲೆ ನಡೆಸಿದ ಆತ, ನಾಜಿಯಾ ಹಲ್ಲು ಮುರಿದಿದ್ದನು" ಎಂದು ಮೃತ ಮಹಿಳೆಯ ಪೋಷಕರ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಕೊಲೆ ಡಿ.20ರ ರಾತ್ರಿ ಸಂಭವಿಸಿದೆ. ನಾಜಿಯಾ ಮನೆಯಲ್ಲಿ ಬಿರಿಯಾನಿ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಂಜರ್ ಊಟಕ್ಕೆ ಕುಳಿತಾಗ, ಬಿರಿಯಾನಿಯಲ್ಲಿ ಉಪ್ಪಿನ ಬಗ್ಗೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಜಗಳ ತಾರಕಕ್ಕೇರಿದ ಬೆನ್ನಲ್ಲೇ ಮಂಜರ್ ತಾಳ್ಮೆ ಕಳೆದುಕೊಂಡು, ನಾಜಿಯಾ ತಲೆಯನ್ನು ಗೋಡೆಗೆ ಜಜ್ಜಿದ್ದಾನೆ. ತಲೆಗೆ ಗಂಭೀರವಾದ ಗಾಯ ಮತ್ತು ಅತಿಯಾದ ರಕ್ತಸ್ರಾವದಿಂದಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ನಡೆದ ಕೂಡಲೇ ಖಾಕಿ ಕಣ್ಣು ತಪ್ಪಿಸಲು ಯತ್ನಿಸಿದ ಮಂಜರ್ನನ್ನು ಬಂಧಿಸಿ, ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).