ಪತ್ನಿಯ ಅದೊಂದು ತಪ್ಪಿಗೆ... ಕನಸಿನ ಮನೆ ಕಟ್ಟಲು ಕೂಡಿಟ್ಟಿದ್ದ ವರ್ಷಗಳ ಹಣವನ್ನೆಲ್ಲ ಸುರಿದು ಬೆಂಕಿಯಿಟ್ಟ ಪತಿ! Viral Video 
ದೇಶ

ಪತ್ನಿಯ ಅದೊಂದು ತಪ್ಪಿಗೆ... ಕನಸಿನ ಮನೆ ಕಟ್ಟಲು ಕೂಡಿಟ್ಟಿದ್ದ ವರ್ಷಗಳ ಹಣವನ್ನೆಲ್ಲ ಸುರಿದು ಬೆಂಕಿಯಿಟ್ಟ ಪತಿ! Viral Video

ಜೈಪುರ: ಸಂಪಾದನೆಯ ಹಣವನ್ನು ಉಳಿಸಿ, ಅದರಿಂದ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಜನರು ಹಗಲಿರುಳು ಎಂದು ನೋಡದೆ, ಬೆವರರಿಸುತ್ತಾರೆ. ಅದರಲ್ಲೂ, ಈ ಸೈಟ್​ ಕೊಳ್ಳಬೇಕು, ಒಂದು ಸ್ವಂತ ಮನೆ ಕಟ್ಟಬೇಕು, ಕುಟುಂಬದ ಭವಿಷ್ಯ ಭದ್ರಪಡಿಸಬೇಕು ಎಂಬ ಚಿಂತೆಯಲ್ಲಿ, ಅದೆಷ್ಟೋ ಮಂದಿ, ಬರುವ ಅಲ್ಪ-ಸ್ವಲ್ಪ ಸಂಬಳದಲ್ಲಿ ತಮ್ಮ ಹಲವು ಆಸೆಗಳನ್ನೆಲ್ಲ ಬದಿಗಿಟ್ಟು ವರ್ಷಗಳಿಂದ ಜೋಪಾನವಾಗಿ ಕೂಡಿಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ಪತ್ನಿ ಮೇಲಿರುವ ಸಿಟ್ಟಿಗೆ ಲಕ್ಷಾಂತರ ರೂ. ಹಣವನ್ನು ಕೆಲವೇ ನಿಮಿಷದಲ್ಲಿ ಬೂದಿ ಮಾಡಿದ್ದಾನೆ.

ಮನ್ಜೀತ್ ಠಾಕತ್ ಎಂಬ ವ್ಯಕ್ತಿಗೆ ತನ್ನ ಹೆಂಡತಿ ಬರೋಬ್ಬರಿ 22 ಸಾವಿರ ರೂ. ಮೌಲ್ಯದ ಕೋಟ್ ಸೂಟ್ ಖರೀದಿಸಿ, ಅದನ್ನು ಗಿಫ್ಟ್ ಆಗಿ ಕೊಟ್ಟಿದ್ದರು. ಈ ವಿಷಯ ಕೇಳಿ ಮನಸ್ಸಿಗೆ ವಿಪರೀತ ನೋವು ಮಾಡಿಕೊಂಡ ಗಂಡ, ಮನೆ ಕಟ್ಟಲು ವರ್ಷಗಳಿಂದ ನಾನು ಇಷ್ಟೊಂದು ಕಷ್ಟಪಟ್ಟು ಹಣ ಉಳಿಸಿಕೊಂಡು ಬಂದರೆ, ನೀನು ದುಬಾರಿ ಬಟ್ಟೆಗಾಗಿ 22 ಸಾವಿರ ದುಡ್ಡನ್ನು ಅಷ್ಟು ಸಲಿಸಾಗಿ ಖರ್ಚು ಮಾಡುವ ಅಗತ್ಯವೇನಿತ್ತು? ಎಂದು ಕೆರಳಿ, ಆಕೆಯೊಂದಿಗೆ ಜಗಳವಾಡಿದ್ದಾನೆ. ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಪತ್ನಿ ತವರು ಮನೆಗೆ ಹೊರಟು ಹೋಗಿದ್ದಾಳೆ.

ಹೆಂಡತಿಯ ಈ ನಡೆಯಿಂದ ಇನ್ನೂ ಸಿಟ್ಟಾದ ಪತಿರಾಯ, ತನ್ನ ಮಾತಿಗೆ ಕಿಂಚಿತ್ತು ಬೆಲೆ ಕೊಡದ ಪತ್ನಿಗೆ ಮನೆಯನ್ನು ಕಟ್ಟಿಸಿಕೊಡುವ ಆಸೆ ಏಕೆಂದು, ಬ್ಯಾಂಕ್‌ನಲ್ಲಿದ್ದ ಇನ್ನೊಂದಿಷ್ಟು ಉಳಿತಾಯದ ಹಣವನ್ನೆಲ್ಲ ಡ್ರಾ ಮಾಡಿಕೊಂಡು ತಂದಿದ್ದಾನೆ. ಎಲ್ಲ ಹಣವನ್ನು ರಸ್ತೆಯಲ್ಲಿ ಬಿಸಾಡಿ, ಬ್ಯಾಗ್​ನಲ್ಲಿದ್ದ ಒಂದಷ್ಟು ಕಂತೆಗಳನ್ನು ಒಂದೊಂದಾಗಿ ಇಟ್ಟು ಬೆಂಕಿ ಹಚ್ಚಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮನ್ಜೀತ್‌ನನ್ನು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿ ಖರೀದಿಸಿದ 22 ಸಾವಿರ ರೂ. ಮೌಲ್ಯದ ಸೂಟ್​ನಿಂದ ಆರಂಭಗೊಂಡ ಸಣ್ಣ ಜಗಳ, ಕೊನೆಗೆ ತಾನು ವರ್ಷಗಳಿಂದ ಉಳಿಸಿದ ಹಣವನ್ನೇ ಸುಟ್ಟುಹಾಕುವ ಹಂತಕ್ಕೆ ತಲುಪಿದ್ದು ನಿಜಕ್ಕೂ ಒಂದು ನಿಮಿಷ ನಮ್ಮಲ್ಲೇ ಇಂಥವರು ಇರ್ತಾರಾ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡುತ್ತೆ,(ಏಜೆನ್ಸೀಸ್).