ಸಾಂದರ್ಭಿಕ ಚಿತ್ರ 
ದೇಶ

ಪತಿ ಮೇಲೆ ಹಲ್ಲೆಗೈದು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: ಎಂಟು ದುಷ್ಕರ್ಮಿಗಳನ್ನು ಬಂಧಿಸಿದ ಪೊಲೀಸರು | gang-raped

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧಿಸಿದಂತೆ ಎಂಟು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಪತಿಯ ಮೇಲೆ ಹಲ್ಲೆ ಮಾಡಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧಿಸಿದಂತೆ ಎಂಟು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಪೂರ್ವ ಚಂಪಾರಣ್ ಜಿಲ್ಲೆಯ ಮಧುಬನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ನೆರೆಯ ಶಿಯೋಹರ್ ಜಿಲ್ಲೆಯ ದಂಪತಿಗಳು ದಸರಾ ಹಬ್ಬದ ಸಂದರ್ಭದಲ್ಲಿ ತಮ್ಮ ಪರಿಚಯಸ್ಥರನ್ನು ನೋಡಲು ಮತ್ತು ಪೂಜಾ ಪೆಂಡಲ್‌ಗಳಿಗೆ ಭೇಟಿ ನೀಡಲು ಬೈಕ್​ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ.

ಬಂಜಾರಿಯಾ ಸರೇಹ್ ಗ್ರಾಮದ ಬಳಿ ದಂಪತಿಯನ್ನು ತಡೆದ ಎಂಟು ಮಂದಿ ಆರೋಪಿಗಳು, ಹಣವನ್ನು ಕೇಳಿದ್ದಾರೆ. ಕೊಡದೇ ಇದ್ದಾಗ ಪತಿ ಮೇಲೆ ಹಲ್ಲೆ ಮಾಡಿ ಮೊಬೈಲ್ ಅನ್ನು ಕಸಿದುಕೊಂಡಿದ್ದಾರೆ. ಬಳಿಕ ಮಹಿಳೆಯನ್ನು ಪಕ್ಕದ ತೋಟಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ದಂಪತಿಗಳು ಹೇಗೋ ಸ್ಥಳದಿಂದ ತಪ್ಪಿಸಿಕೊಂಡು ಮಧುಬನ್ ಪೊಲೀಸ್ ಠಾಣೆಗೆ ಆಗಮಿಸಿ ಘಟನೆಯ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ 8 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಾದವರನ್ನು ಅಂಬಿಕೇಶ್ ತಿವಾರಿ, ರಿಂಕಿ ಕುಮಾರ್, ಅಂಕುಶ್ ಕುಮಾರ್, ರಾಹುಲ್ ಕುಮಾರ್, ಕಾಂಚನ್ ಕುಮಾರ್, ಮುನ್ನಾ ಕುಮಾರ್, ರಣಧೀರ್ ಕುಮಾರ್ ಮತ್ತು ಅಮಿತ್ ಕುಮಾರ್ ಎಂದು ಗುರುತಿಸಲಾಗಿದೆ.

ಬಂಧಿತ ವ್ಯಕ್ತಿಗಳಿಂದ ಸಂತ್ರಸ್ತೆಯ ಪತಿಯಿಂದ ಕಸಿದುಕೊಂಡ ಮೊಬೈಲ್ ಫೋನ್ ಸೇರಿದಂತೆ ಎಂಟು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಂಬರೀಶ್​ಗೆ 38 ವರ್ಷ ವಯಸ್ಸಾಗಿದ್ದರೆ, ಉಳಿದ ಏಳು ಆರೋಪಿಗಳು 18 ರಿಂದ 20 ವರ್ಷ ವಯಸ್ಸಿನವರು ಎನ್ನಲಾಗಿದೆ. ತನಿಖೆ ನಡೆಯುತ್ತಿದೆ (ಏಜೆನ್ಸೀಸ್).