ಇಂಡಿಗೋ ಏರ್​ಲೈನ್ಸ್​ 
ದೇಶ

ವಿಮಾನಗಳ ರದ್ದತಿಗೆ DGCA ಹೊಸ ನಿಯಮ ಮಾತ್ರವಲ್ಲ ಇಂಡಿಗೋ ಏರ್​ಲೈನ್ಸ್​ನ ಈ ಮಿಸ್ಟೇಕ್​ ಕೂಡ ಕಾರಣ! IndiGo Flights

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಇಂಡಿಗೋ ಸಂಸ್ಥೆಯ ಅನೇಕ ವಿಮಾನಗಳ ಪ್ರಯಾಣ ರದ್ದು
  • ಇಂಥದ್ದೊಂದು ಬಿಕ್ಕಟ್ಟಿಗೆ ಡಿಜಿಸಿಎ ಜಾರಿಗೆ ತಂದಿರುವ ಕಠಿಣ ನಿಯಮಗಳೇ ಕಾರಣ ಎಂಬ ವರದಿ
  • ವಿಮಾನಗಳ ರದ್ದತಿಗೆ ಇಂಡಿಗೋ ಏರ್​ಲೈನ್ಸ್​ ಮಾಡಿದ ಎಡವಟ್ಟು ಕೂಡ ಕಾರಣವಾಗಿದೆ
ನವದೆಹಲಿ: ಕಳೆದ ಎರಡು ದಿನಗಳಿಂದ ದೇಶದ ವಿಮಾನಯಾನ ಸೇವೆಯಲ್ಲಿ ಭಾರಿ ಅಡಚಣೆ ಉಂಟಾಗುತ್ತದೆ. ಅದರಲ್ಲೂ ದೇಶದ ಅತಿದೊಡ್ಡ ವಿಮಾನ ಸಂಸ್ಥೆಯಾಗಿರುವ ಇಂಡಿಗೋ ಏರ್​ಲೈನ್ಸ್ ( IndiGo Flights )​ ವಿಮಾನಗಳ ರದ್ದತಿಯಿಂದಾಗಿ ದೇಶಾದ್ಯಂತ ಅನೇಕ ಏರ್​ಪೋರ್ಟ್​ಗಳಲ್ಲಿ ಅವ್ಯವಸ್ಥೆ ನಿರ್ಮಾಣವಾಗಿದೆ. ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದು, ಸಾಕಷ್ಟು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಪ್ರಸ್ತುತ ದೇಶಾದ್ಯಂತ ನಿರ್ಮಾಣವಾಗಿರುವ ಇಂಥದ್ದೊಂದು ಬಿಕ್ಕಟ್ಟಿಗೆ ವಾಯುಯಾನ ಕಾವಲು ಸಂಸ್ಥೆಯಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಜಾರಿಗೆ ತಂದಿರುವ ಕಠಿಣ ನಿಯಮಗಳೇ ಕಾರಣ ಎಂಬ ವರದಿ ಇದೆ. ಇದರೊಂದಿಗೆ ಇಂಡಿಗೋ ಏರ್​ಲೈನ್ಸ್​ ಮಾಡಿದ ಎಡವಟ್ಟು ಕೂಡ ಕಾರಣವಾಗಿದೆ. ಹಾಗಾದರೆ, ಡಿಜಿಸಿಎ ನಿಯಮವೇನು? ಈ ಬಿಕ್ಕಟ್ಟು ಇದೇ ರೀತಿ ಮುಂದುವರಿಯುತ್ತಾ? ಈ ಬಿಕ್ಕಟ್ಟಿಗೆ ಪರಿಹಾರವೇನು? ಇಂಡಿಗೋ ಸಂಸ್ಥೆ ಮಾಡಿದ ಮಿಸ್ಟೇಕ್​ ಏನು? ಎಂಬಿತ್ಯಾದಿ ಮಾಹಿತಿಗಳು ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ, ಪ್ರಸ್ತುತ ಇಂಥದ್ದೊಂದು ಬಿಕ್ಕಟ್ಟು ಎದುರಿಸುತ್ತಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ, ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತದೆ. ತನ್ನ ಕಾರ್ಯಾಚರಣೆಯಲ್ಲಿ ಭಾರಿ ಅಡ್ಡಿಯಾಗಿರುವುದನ್ನು ಸ್ವತಃ ಇಂಡಿಗೋ ಸಂಸ್ಥೆ ಒಪ್ಪಿಕೊಂಡಿದೆ. ಅಲ್ಲದೆ, ಈ ಕುರಿತು ತನ್ನ ಗ್ರಾಹಕರಲ್ಲಿ ಕ್ಷಮೆ ಕೂಡ ಕೇಳಿದೆ. ಸಣ್ಣ ತಂತ್ರಜ್ಞಾನದ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿಯಲ್ಲಿನ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ವ್ಯವಸ್ಥೆಯಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ ಮತ್ತು ಇತ್ತೀಚೆಗೆ ಅಪ್​ಡೇಟ್​ ಮಾಡಿದ ಸಿಬ್ಬಂದಿ ರೋಸ್ಟರಿಂಗ್ ನಿಯಮಗಳ (ವಿಮಾನ ಕರ್ತವ್ಯ ಸಮಯ ಮಿತಿಗಳು) ಅನುಷ್ಠಾನ ಸೇರಿದಂತೆ ಹಲವಾರು ಅಂಶಗಳು ನಮ್ಮ ವಿಮಾನ ಕಾರ್ಯಾಚರಣೆಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮ ಅಡಚಣೆಯನ್ನು ತಡೆಗಟ್ಟಲು ಮತ್ತು ನಾವು ಮತ್ತೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಮ್ಮ ವೇಳಾಪಟ್ಟಿಗಳಲ್ಲಿ ಹೊಂದಾಣಿಕೆಯನ್ನು ಆರಂಭಿಸಿದ್ದೇವೆ. ಈ ಕ್ರಮಗಳು ಮುಂದಿನ 48 ಗಂಟೆಗಳ ಕಾಲ ಜಾರಿಯಲ್ಲಿರುತ್ತವೆ ಮತ್ತು ನಮ್ಮ ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರಲು ಮತ್ತು ನಮ್ಮ ಸಮಯಪಾಲನೆಯನ್ನು ಹಂತಹಂತವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಇಂಡಿಗೋ ಹೇಳಿದೆ. ಆದರೆ, ಪರಿಸ್ಥಿತಿ ಮಾತ್ರ ಅದೇ ರೀತಿ ಮುಂದುವರಿದಿದೆ. ಏಕೆಂದರೆ, ಗುರುವಾರ (ಡಿ.04) 170ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್​ನಲ್ಲಿ ಬುಧವಾರ ಒಟ್ಟಾರೆಯಾಗಿ ಸುಮಾರು 200 ವಿಮಾನಗಳ ಪ್ರಯಾಣ ರದ್ದಾದವು. ಇದರಿಂದ ದೇಶಾದ್ಯಂತ ವಿಮಾನ ಸೇವೆಯಲ್ಲಿನ ಬಿಕ್ಕಟ್ಟು ಮುಂದುವರಿದೆ.

ಹೊಸದಾಗಿ ಪರಿಚಯಿಸಿರುವ ಪೈಲಟ್ ರೋಸ್ಟರ್ ನಿಯಮಗಳೇನು?

ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ನವೆಂಬರ್ 1 ರಿಂದ ತನ್ನ ಹೊಸ ಫ್ಲೈಟ್​ ಡ್ಯೂಟಿ ಟೈಂ ಲಿಮಿಟೇಷನ್​ (FDTL) ಮಾನದಂಡಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ಪೈಲಟ್​ಗಳ ವಾರದ ವಿಶ್ರಾಂತಿ ಅವಧಿಯನ್ನು 48 ಗಂಟೆಗಳವರೆಗೆ ಹೆಚ್ಚಿಸಲಾಗಿದೆ. ಅಲ್ಲದೆ, ರಾತ್ರಿ ಕರ್ತವ್ಯದ ಸಮಯವನ್ನು ವಿಸ್ತರಿಸಲಾಗಿದ್ದು, ರಾತ್ರಿ ಲ್ಯಾಂಡಿಂಗ್‌ಗಳನ್ನು ವಾರಕ್ಕೆ ಆರು ಗಂಟೆಗಳ ಬದಲಿಗೆ ಎರಡು ಗಂಟೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರೊಂದಿಗೆ ಪೈಲಟ್​ಗಳು ಬೆಳಗ್ಗೆ 12 ರಿಂದ ಬೆಳಗ್ಗೆ 6 ರವರೆಗೆ ನಿರ್ವಹಿಸಬಹುದಾದ ಲ್ಯಾಂಡಿಂಗ್‌ಗಳ ಸಂಖ್ಯೆಯನ್ನೂ ಮಿತಿಗೊಳಿಸಿದೆ.

ಈ ನಿಯಮ ಜಾರಿ ಏಕೆ?

ಭಾರತೀಯ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾಕ್‌ಪಿಟ್ ಸಿಬ್ಬಂದಿಯಿಂದ ನಿರಂತರ ಬಳಲಿಕೆಯ ಬಗ್ಗೆ ಗಂಭೀರ ದೂರುಗಳು ಬಂದ ನಂತರ ಡಿಜಿಸಿಎ ನವೆಂಬರ್ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸಿಬ್ಬಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಹೊಸ ಕರ್ತವ್ಯ ನಿಯಮಗಳನ್ನು ಡಿಜಿಸಿಎ ಜಾರಿಗೆ ತಂದಿದೆ. ಈ ಹೊಸ ನಿಯಮಗಳನ್ನು ಹೇಗಾದರೂ ಮಾಡಿ ಮುಂದೂಡಬೇಕೆಂದು ಇಂಡಿಗೋ ಮತ್ತು ಟಾಟಾ ಒಡೆತನದ ಏರ್​ ಇಂಡಿಯಾ ಸೇರಿದಂತೆ ಅನೇಕ ಸ್ವದೇಶಿ ವಿಮಾನಯಾನ ಸಂಸ್ಥೆಗಳು ಪ್ರಯತ್ನಿಸಿದವು. ಆದರೆ, ಸೀಮಿತ ಸಡಿಲಿಕೆಗಳನ್ನು ನೀಡುವ ಮೂಲಕ ಡಿಜಿಸಿಎ ನವೆಂಬರ್​ 1ರಿಂದ ಜಾರಿಗೊಳಿಸಿದೆ.

ಏಕಾಏಕಿ ಜಾರಿಗೆ ತಂದಿದ್ದಲ್ಲ

ಇನ್ನು ಈ ನಿಯಮಗಳನ್ನು ಏಕಾಏಕಿ ಜಾರಿಗೆ ತಂದಿದ್ದಲ್ಲ, ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಯಿತು. ಮೊದಲ ಹಂತವು ಜುಲೈನಲ್ಲಿ ಜಾರಿಗೆ ಬಂದಿತು. ರಾತ್ರಿ ಲ್ಯಾಡಿಂಗ್​ ಮಿತಿಯನ್ನು ಆರರಿಂದ ಎರಡಕ್ಕೆ ಇಳಿಸುವ ನಿಯಮವು ನವೆಂಬರ್ 1 ರಿಂದ ಜಾರಿಗೆ ಬಂದಿತು. ಆದರೆ, ಹೊಸ ಮಾನದಂಡಗಳು 2024 ಮಾರ್ಚ್ ತಿಂಗಳಲ್ಲೇ ಜಾರಿಗೆ ಬರಬೇಕಿತ್ತು. ಈ ನಿಯಮ ಜಾರಿಯಾದರೆ ವಿಮಾನಯಾನ ಸಂಸ್ಥೆಗಳಲ್ಲಿ ಭಾರಿ ಸಿಬ್ಬಂದಿ ಕೊರತೆ ಉಂಟಾಗಲಿದೆ ಎಂಬ ಪಿಟಿಐ ವರದಿಯನ್ನು ಉಲ್ಲೇಖಿಸಿ, ಹಂತಹಂತವಾಗಿ ಜಾರಿಗೆ ತರಲು ವಿಮಾನಯಾನ ಸಂಸ್ಥೆಗಳು ವಿನಂತಿಸಿದ್ದವು. ಇದೀಗ ನವೆಂಬರ್​ 1ರಂದು ಜಾರಿಗೆ ಬಂದಿದ್ದು, ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದ ಇಂಡಿಗೋ ಏರ್​ಲೈನ್ಸ್​ ಇದೀಗ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದರ ನಡುವೆ ನಮ್ಮ ಅಡಚಣೆಯನ್ನು ತಡೆಗಟ್ಟಲು ಮತ್ತು ನಾವು ಮತ್ತೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ನಮ್ಮ ವೇಳಾಪಟ್ಟಿಗಳಲ್ಲಿ ಹೊಂದಾಣಿಕೆಯನ್ನು ಆರಂಭಿಸಿದ್ದೇವೆ. ಈ ಕ್ರಮಗಳು ಮುಂದಿನ 48 ಗಂಟೆಗಳ ಕಾಲ ಜಾರಿಯಲ್ಲಿರುತ್ತವೆ ಮತ್ತು ನಮ್ಮ ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರಲು ಮತ್ತು ನಮ್ಮ ಸಮಯಪಾಲನೆಯನ್ನು ಹಂತಹಂತವಾಗಿ ಚೇತರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಇಂಡಿಗೋ ಹೇಳಿದೆ. ಆದರೆ, ಇದೆಲ್ಲ ಯಾವಾಗ ಸರಿ ಹೋಗುತ್ತದೆ ಎಂಬುವುದನ್ನು ಇಂಡಿಗೋ ಏರ್​ಲೈನ್ಸ್​ ನಿಖರವಾಗಿ ತಿಳಿಸಿಲ್ಲ. ಹೀಗಾಗಿ ಪ್ರಯಾಣಿಕರಲ್ಲಿ ಅನಿಶ್ಚಿತತೆ ಮುಂದುವರಿದೆ.

ಹೆಣಗಾಡುತ್ತಿರುವ ಇಂಡಿಗೋ

ಈ ಹೊಸ ಮಾನದಂಡಗಳಿಂದ ಪೈಲಟ್‌ಗಳ ಬೇಡಿಕೆ ಹೆಚ್ಚಾಗಿದೆ. ನವೆಂಬರ್ ತಿಂಗಳಲ್ಲಿ ವಿಮಾನ ರದ್ದತಿಯ ದತ್ತಾಂಶವನ್ನು ನೋಡಿದರೆ ಇಂಡಿಗೋ ತನ್ನ ಅವಶ್ಯಕತೆಯನ್ನು ಪೂರೈಸಲು ಹೆಣಗಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಇಂಡಿಗೋ ವಿಮಾನಯಾನ ಸಂಸ್ಥೆಯ ಆನ್-ಟೈಮ್ ಕಾರ್ಯಕ್ಷಮತೆ (OTP) ಕೂಡ ತೀವ್ರವಾಗಿ ಕುಸಿದಿದೆ. 2025 ಅಕ್ಟೋಬರ್​ನಲ್ಲಿ ಶೇ. 84.1 ರಷ್ಟಿದ್ದ ಕಾರ್ಯಕ್ಷಮತೆ ಕಳೆದ ತಿಂಗಳು ಶೇ. 67.7 ಕ್ಕೆ ಇಳಿದಿದೆ.
ಹೊಸ ವಿಶ್ರಾಂತಿ ಮಾನದಂಡಗಳಿಗೆ ಅನುಗುಣವಾಗಿ ಇಂಡಿಗೋ ಹೆಚ್ಚುವರಿ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲಿಲ್ಲ ಅಥವಾ ತರಬೇತಿಯನ್ನೂ ಹೆಚ್ಚಿಸಲಿಲ್ಲ. ಇದರಿಂದಾಗಿ ಲಭ್ಯವಿರುವ ಸಿಬ್ಬಂದಿಯನ್ನೇ ಅತಿಯಾಗಿ ವಿಸ್ತರಿಸಲಾಯಿತು. ಆಗಾಗ ಮರು ನಿಯೋಜನೆ ಮಾಡುವುದು ಮತ್ತು ದೀರ್ಘ ಕರ್ತವ್ಯ ಸಮಯವನ್ನು ವಿಸ್ತರಿಸುವುದು ಮಾಡಿತು. ಇಷ್ಟೆಲ್ಲ ಮಾಡಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾತ್ರ ಆಗಿಲ್ಲ. ಡಿಜಿಸಿಎ ಹೊಸ ನಿಯಮಗಳಿಂದಾಗಿ ಸಿಬ್ಬಂದಿ ಅವಶ್ಯಕತೆ ಹೆಚ್ಚಾದ ಕಾರಣ, ಇಂಡಿಗೂ ಕಾಯ್ದುಕೊಂಡಿದ್ದ ಶೇ. 4 ರಷ್ಟು ಹೆಚ್ಚುವರಿ ಸಿಬ್ಬಂದಿಯನ್ನೂ ಸಹ ಬಳಸಲಾಗಿದ್ದು, ಇದೀಗ ಬಫರ್ ಶೂನ್ಯವಾಗಿದೆ. ನವೆಂಬರ್‌ನಿಂದಲೇ ನಿಯಮಗಳು ಜಾರಿಗೆ ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ, ಅದಕ್ಕೆ ಅನುಗುಣವಾಗಿ ಯೋಜಿಸದಿರುವುದು ನಮ್ಮ ಕಾರ್ಯತಂತ್ರದ ತಪ್ಪು ಎಂದು ಇಂಡಿಗೋ ಏರ್​ಲೈನ್ಸ್​ ವಕ್ತಾರರು ತಿಳಿಸಿದ್ದಾರೆ.

ಸಭೆ ಕರೆದ ಡಿಜಿಸಿಎ

ಸದ್ಯ ದೇಶದೆಲ್ಲೆಡೆ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ ವಾಯುಯಾನ ಕಾವಲು ಸಂಸ್ಥೆಯಾದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಗುರುವಾರ ವಿಮಾನಯಾನ ಅಧಿಕಾರಿಗಳನ್ನು ಸಭೆಗೆ ಕರೆದಿದೆ. ಇದರ ನಡುವೆ ಇಂಡಿಗೋ ವಿಮಾನಗಳ ಹಾರಾಟದ ಅಡಚಣೆಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಪ್ರಸ್ತುತ ಎದುರಾಗಿರುವ ಪರಿಸ್ಥಿತಿಗೆ ಕಾರಣಗಳನ್ನು ಮತ್ತು ವಿಮಾನ ರದ್ದತಿ ಮತ್ತು ವಿಳಂಬವನ್ನು ಕಡಿಮೆ ಮಾಡುವ ಯೋಜನೆಗಳನ್ನು ಸಲ್ಲಿಸುವಂತೆ ಇಂಡಿಗೋ ವಿಮಾನಯಾನ ಸಂಸ್ಥೆಯನ್ನು ಡಿಜಿಸಿಎ ಕೇಳಿದೆ.

ಇತ್ತೀಚಿನ ಮಾಹಿತಿ ಒದಗಿಸಿದ ಇಂಡಿಗೋ

ಇಂಡಿಗೋ ಒದಗಿಸಿದ ಇತ್ತೀಚಿನ ಕಾರ್ಯಾಚರಣೆಯ ಮಾಹಿತಿ ಪ್ರಕಾರ, ನವೆಂಬರ್‌ನಲ್ಲಿ ಒಟ್ಟು 1,232 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಇದರಲ್ಲಿ ಸಿಬ್ಬಂದಿ ಮತ್ತು ಎಫ್‌ಡಿಟಿಎಲ್ (ವಿಮಾನ ಕರ್ತವ್ಯ ಸಮಯ ಮಿತಿಗಳು) ನಿರ್ಬಂಧಗಳಿಂದಾಗಿ 755 ವಿಮಾನಗಳು ರದ್ದಾಗಿದ್ದರೆ, ವಿಮಾನ ನಿಲ್ದಾಣ/ವಾಯುಪ್ರದೇಶ ನಿರ್ಬಂಧಗಳು ಕಾರಣದಿಂದಾಗಿ 258 ವಿಮಾನಗಳು ರದ್ದಾಗಿವೆ. ಇದರೊಂದಿಗೆ ಎಟಿಸಿ (ವಾಯು ಸಂಚಾರ ನಿಯಂತ್ರಣ) ವ್ಯವಸ್ಥೆಯ ವೈಫಲ್ಯದಿಂದಾಗಿ 92 ವಿಮಾನಗಳು ಮತ್ತು ಇತರ ಕಾರಣಗಳಿಂದಾಗಿ 127 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಡಿಜಿಸಿಎ ತಿಳಿಸಿದೆ, (ಏಜೆನ್ಸೀಸ್​).