Nisha Chatterjee | ಜನತಾ ಉನ್ನಯನ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ನಿಶಾ ಚಟರ್ಜಿ
Nisha Chatterjee: ತೃಣಮೂಲ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ಹುಮಾಯೂನ್ ಕಬೀರ್, ಜನತಾ ಉನ್ನಯನ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ್ದು, ಪಕ್ಷದ ಏಕೈಕ ಹಿಂದೂ ಅಭ್ಯರ್ಥಿಯಾಗಿದ್ದ ನಿಶಾ ಚಟರ್ಜಿ ಎನ್ನುವವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಕೇವಲ 24 ಗಂಟೆಗಳೊಳಗೆ ವಜಾಗೊಳಿಸಲಾಗಿದೆ.
ನಿಶಾ ಸಾಮಾಜಿಕ ಜಾಲತಾಣಗಳಲ್ಲಿ ತುಂಡುಡುಗೆ ತೊಟ್ಟು ರೀಲ್ಸ್ ಮಾಡಿದ್ದ ಕಾರಣಕ್ಕಾಗಿಯೇ ಈ ಹಠಾತ್ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. ಈ ನಡೆಗೆ ಅಸಮಾಧಾನಗೊಂಡಿರುವ ಚಟರ್ಜಿ, ನನ್ನ ಧರ್ಮದ ಆಧಾರದ ಮೇಲೆ ಈ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ, ಕಬೀರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಚಟರ್ಜಿ, ಹುಮಾಯೂನ್ ಕಬೀರ್ ತಮ್ಮ ಪಕ್ಷದ ಸಾರ್ವಜನಿಕ ಸಭೆಗಾಗಿ ನನ್ನನ್ನು ಮುರ್ಷಿದಾಬಾದ್‌ಗೆ ಕರೆದರು, ಪಕ್ಷದ ಅಭ್ಯರ್ಥಿಯನ್ನಾಗಿ ನನ್ನ ಹೆಸರನ್ನು ಘೋಷಿಸಿದರು. ಈ ನಡೆ ಸ್ವತಃ ನನಗೆ ಆಶ್ಚರ್ಯವಾಗುವಂತೆ ಮಾಡಿತು. ನನ್ನ ಹೆಸರು ಘೋಷಿಸುವಂತೆ ನಾನೇನು ಕೇಳಿರಲಿಲ್ಲ, ತೆಗೆದುಹಾಕುವಂತೆಯೂ ಹೇಳಲಿಲ್ಲ. ಹಾಗಾದರೆ ನನ್ನನ್ನು ಟ್ರೋಲ್ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ನನ್ನನ್ನು ಅಭ್ಯರ್ಥಿಯಾಗಿ ಆತುರದಿಂದ ಘೋಷಿಸುವ ಮೊದಲೇ ಅವರು ನನ್ನ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕಿತ್ತು ಎನ್ನುವ ಮೂಲಕ ನೂತನ ಪಕ್ಷ ಜನತಾ ಉನ್ನಯನ್ ಅಭ್ಯರ್ಥಿ ಆಯ್ಕೆಯ ವಿಧಾನವನ್ನು ಪ್ರಶ್ನಿಸಿದ ಚಟರ್ಜಿ, ಆ ಪಕ್ಷದ ಜಾತ್ಯತೀತ ನಿಲುವುಗಳು ಕೇವಲ ತೋರಿಕೆಗೆ ಸೀಮಿತವಾಗಿವೆ ಎಂದರು. ಈ ಘಟನೆಯು ತನ್ನ ವೃತ್ತಿಪರ ಖ್ಯಾತಿಗೆ ಹಾನಿಯುಂಟುಮಾಡಿದ್ದು, ತನ್ನ ಸಾಮಾಜಿಕ ಜಾಲತಾಣದ ಫಾಲೋವರ್ಸ್ಗಳ ಗಮನವನ್ನು ತಮ್ಮ ಪಕ್ಷದತ್ತ ಸೆಳೆದುಕೊಳ್ಳಲು ನನ್ನ ಹೆಸರನ್ನು ಘೋಷಿಸಿದರು, ತಾವು ಅಂದುಕೊಂಡಂತೆ ಎಲ್ಲಾ ನಡೆದ ಮೇಲೆ ನನ್ನನ್ನು ಕೆಳಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.
ಈಗ ನನ್ನನ್ನು ಟ್ರೋಲ್ ಮಾಡಲಾಗುತ್ತಿದೆ ಮತ್ತು ಬೆದರಿಕೆಗಳು ಬರುತ್ತಿವೆ, ನಾನು ನನ್ನ ಹೆತ್ತವರಿಗಿರುವ ಏಕೈಕ ಮಗಳು, ನನಗೇನಾದರು ಆದರೆ ಅದಕ್ಕೆ ಹೊಣೆ ಯಾರು ಎಂದು ನಿಶಾ ಪ್ರಶ್ನಿಸಿದ್ದಾರೆ. ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ಗೆ ಪತ್ರ ಬರೆದು, ಹಿಂದೂ ಅಥವಾ ಮುಸ್ಲಿಂ, ಯಾರೇ ಆಗಿರಲಿ, ಜನರ ಭಾವನೆಗಳು ಮತ್ತು ವೃತ್ತಿಜೀವನದೊಂದಿಗೆ ಆಟವಾಡಬಾರದು ಎಂದು ಸಲಹೆ ನೀಡಿದ್ದಾರೆ(ಏಜೆನ್ಸೀಸ್).