ಬಂಗಾಳದಲ್ಲಿ ಭಾರಿ ಸಂಚಲನ: ಮಮತಾ ಅವಧಿಯ OBC ಪಟ್ಟಿ ರದ್ದುಗೊಳಿಸಿದ ಸುವೇಂದು ಸರ್ಕಾರ! ಮುಸ್ಲಿಂ ಸಮುದಾಯಗಳಿಗೆ ಬಿಗ್ ಶಾಕ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ದಶಕದ ಅತ್ಯಂತ ಭೀಕರ ಹಾಗೂ ಐತಿಹಾಸಿಕ ತೀರ್ಮಾನವೊಂದನ್ನು ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ನೂತನ ಬಿಜೆಪಿ ಸರ್ಕಾರವು, ಹಿಂದಿನ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಇತರ ಹಿಂದುಳಿದ ವರ್ಗಗಳ (Muslim OBC Exclusion) ಮೀಸಲಾತಿ ಪಟ್ಟಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಸರ್ಕಾರದ ಈ ಹೆಜ್ಜೆಯಿಂದಾಗಿ, ಮಮತಾ ಸರ್ಕಾರದಿಂದ ಒಬಿಸಿ ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದ ಹಲವು ಮುಸ್ಲಿಂ ಸಮುದಾಯಗಳು ಈಗ ಈ ಕೋಟಾದಿಂದ ಸಂಪೂರ್ಣವಾಗಿ ಹೊರಬಿದ್ದಿವೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಇದ್ದ ಶೇಕಡಾ 17 ರಷ್ಟು ಒಬಿಸಿ ಮೀಸಲಾತಿಯು ಈಗ ನೇರವಾಗಿ ಶೇ. 7ಕ್ಕೆ ಕುಸಿದಿದೆ.
ಬಿಜೆಪಿ ಸರ್ಕಾರವು ರಾಜ್ಯದ ಒಬಿಸಿ ಮೀಸಲಾತಿ ವ್ಯವಸ್ಥೆಯನ್ನು ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚಿನ ಅಂದರೆ 2010 ಕ್ಕಿಂತ ಮೊದಲಿನ ಸ್ಥಿತಿಗೆ ಕೊಂಡೊಯ್ದಿದೆ. ಈ ಮೂಲಕ ಕೇವಲ 66 ಸಮುದಾಯಗಳಿಗೆ ಮಾತ್ರ ಒಬಿಸಿ ಮೀಸಲಾತಿಯನ್ನು ಸೀಮಿತಗೊಳಿಸಿ ಹೊಸ ಅಧಿಸೂಚನೆ ಹೊರಡಿಸಿದೆ.
ಮಮತಾ ಬ್ಯಾನರ್ಜಿ ಜಾರಿಗೆ ತಂದಿದ್ದ ಒಬಿಸಿ ವರ್ಗೀಕರಣ ಸಂಪೂರ್ಣ ರದ್ದು!
2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಅದಾದ ಬಳಿಕ 2012 ರಲ್ಲಿ ಮಮತಾ ಸರ್ಕಾರವು 'ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು ಶೇ.17 ರಷ್ಟು ಒಬಿಸಿ ಮೀಸಲಾತಿಯನ್ನು ಘೋಷಿಸಲಾಯಿತು.
ಇದಕ್ಕಾಗಿ ಒಬಿಸಿ ಸಮುದಾಯಗಳನ್ನು ಎರಡು ಉಪವರ್ಗಗಳಾಗಿ ವಿಂಗಡಿಸಲಾಗಿತ್ತು.
ವರ್ಗ 'ಎ' (Category A - ಹೆಚ್ಚು ಹಿಂದುಳಿದ ವರ್ಗಗಳು): ಇದಕ್ಕೆ ಶೇ.10 ರಷ್ಟು ಮೀಸಲಾತಿ ನೀಡಲಾಗಿತ್ತು.
ವರ್ಗ 'ಬಿ' (Category B - ಹಿಂದುಳಿದ ವರ್ಗಗಳು): ಇದಕ್ಕೆ ಶೇ.7 ರಷ್ಟು ಮೀಸಲಾತಿ ನಿಗದಿಪಡಿಸಲಾಗಿತ್ತು.
ಆದರೆ, ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸರ್ಕಾರವು ಈ ವರ್ಗ 'ಎ' ಮತ್ತು ವರ್ಗ 'ಬಿ' ಎಂಬ ಉಪವರ್ಗಗಳನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದೆ. ಕೇವಲ 2010 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ 66 ಒಬಿಸಿ ಗುಂಪುಗಳಿಗೆ ಮಾತ್ರ ಶೇ.೭ ರಷ್ಟು ಕೋಟಾವನ್ನು ಅನ್ವಯಿಸಿ ಆದೇಶ ಹೊರಡಿಸಿದೆ.
'ಮುಸ್ಲಿಂ ಓಲೈಕೆ ರಾಜಕಾರಣ'ಕ್ಕೆ ಸರ್ಜರಿ: ಸುವೇಂದು ಅಧಿಕಾರಿ ಅವರ ಸುದೀರ್ಘ ಹೋರಾಟದ ಹಾದಿ!
ಹಿಂದಿನ ಮಮತಾ ಸರ್ಕಾರವು ಒಬಿಸಿ ಮೀಸಲಾತಿಯನ್ನು ಕೇವಲ ಮುಸ್ಲಿಂ ಸಮುದಾಯಗಳ ಓಲೈಕೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಸುವೇಂದು ಅಧಿಕಾರಿ ಅವರು ಈ ಹಿಂದಿನಿಂದಲೂ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದರು. 2025 ರ ಜೂನ್ ತಿಂಗಳಲ್ಲಿ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕರಾಗಿದ್ದಾಗ, ಮಮತಾ ಸರ್ಕಾರವು ಒಬಿಸಿ ಕೋಟಾವನ್ನು ಏಕಪಕ್ಷೀಯ ಲಾಭದಾಯಕ ವರ್ಗಗಳ ಕೋಟಾ ಎಂದು ಕರೆದು ತೀವ್ರ ಆಕ್ರೋಶ ಹೊರಹಾಕಿದ್ದರು.
ಅಂಕಿ-ಅಂಶಗಳ ಸಮೇತ ಅಂದು ವಾದ ಮಂಡಿಸಿದ್ದ ಸುವೇಂದು ಅಧಿಕಾರಿ, ೨೦೧೦ ರಲ್ಲಿ ಕೇವಲ ೧೧ ಮುಸ್ಲಿಂ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿದ್ದವು. ಆದರೆ ಮಮತಾ ಬ್ಯಾನರ್ಜಿ ಅವರ ಸರ್ಕಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ವರ್ಗ ಎ ನಲ್ಲಿರುವ ಒಟ್ಟು 51 ಸಮುದಾಯಗಳ ಪೈಕಿ 46 ಮುಸ್ಲಿಂ ಸಮುದಾಯಗಳಿದ್ದವು. ಅಂದರೆ ಈ ವರ್ಗದಲ್ಲಿ ಶೇ.90 ರಷ್ಟು ಮುಸ್ಲಿಮರೇ ತುಂಬಿದ್ದರು. ಹಾಗೆಯೇ ವರ್ಗ 'ಬಿ' ನಲ್ಲಿದ್ದ 25 ಸಮುದಾಯಗಳಲ್ಲಿ 21 ಮುಸ್ಲಿಂ ಗುಂಪುಗಳಿದ್ದವು. ಅಂದರೆ ಇಲ್ಲಿ ಶೇ.84 ರಷ್ಟು ಮುಸ್ಲಿಮರಿದ್ದರು. ಇದು ಹಿಂದೂಗಳು ಮತ್ತು ಇತರ ಅರ್ಹ ಸಮುದಾಯಗಳನ್ನು ವಂಚಿಸಿ, ಕೇವಲ ಮುಸ್ಲಿಮರಿಗೆ ಏಕಪಕ್ಷೀಯವಾಗಿ ಲಾಭ ಮಾಡಿಕೊಡುವ ಉದ್ದೇಶವಾಗಿತ್ತು ಎಂದು ಆರೋಪಿಸಿದ್ದರು.
ಕಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ಆದೇಶಗಳು!
ಈ ಇಡೀ ವಿವಾದವು ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. 2024ರ ಮೇ ತಿಂಗಳಲ್ಲಿ ಕಲ್ಕತ್ತಾ ಹೈಕೋರ್ಟ್‌ನ ದ್ವಿಸದಸ್ಯ ಪೀಠವು ಭಾರಿ ಮಹತ್ವದ ತೀರ್ಪು ನೀಡಿ, 2010 ರಿಂದ 2012ರ ಅವಧಿಯಲ್ಲಿ ಮಮತಾ ಸರ್ಕಾರವು 77 ಸಮುದಾಯಗಳಿಗೆ (ಹೆಚ್ಚಾಗಿ ಮುಸ್ಲಿಂ ಗುಂಪುಗಳು) ನೀಡಿದ್ದ ಒಬಿಸಿ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಕೇವಲ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದು ಭಾರತದ ಸಂವಿಧಾನ ಮತ್ತು ನ್ಯಾಯಾಲಯದ ಆದೇಶಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ೨೦೧೦ ರ ನಂತರ ನೀಡಲಾಗಿದ್ದ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ಕೋರ್ಟ್ ಅಸಿಂಧುಗೊಳಿಸಿತ್ತು.
ಇದರ ಬೆನ್ನಲ್ಲೇ ಮಮತಾ ಸರ್ಕಾರವು 2025 ರ ಜೂನ್‌ನಲ್ಲಿ ಮತ್ತೆ ತರಾತುರಿಯಲ್ಲಿ ಹೊಸ ಸಮೀಕ್ಷೆಯ ನೆಪವೊಡ್ಡಿ ಮುಸ್ಲಿಂ ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು (NCBC) ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತ್ತು. ತದನಂತರ ಡಿಸೆಂಬರ್ 2024 ರಲ್ಲಿ ಸುಪ್ರೀಂ ಕೋರ್ಟ್ ಕೂಡ ಮೀಸಲಾತಿಯು ಯಾವುದೇ ಕಾರಣಕ್ಕೂ ಧರ್ಮದ ಆಧಾರದ ಮೇಲೆ ಇರಬಾರದು ಎಂದು ಕಟ್ಟುನಿಟ್ಟಿನ ಅವಲೋಕನ ಮಾಡಿತ್ತು. ನ್ಯಾಯಾಲಯಗಳ ಈ ಎಲ್ಲಾ ಆದೇಶಗಳನ್ನು ಅಸ್ತ್ರವಾಗಿಸಿಕೊಂಡಿರುವ ಸುವೇಂದು ಅಧಿಕಾರಿ ಸರ್ಕಾರ, ಈಗ ಇಡೀ ವಿವಾದಿತ ಪಟ್ಟಿಯನ್ನೇ ಗುಡಿಸಿ ಹಾಕಿದೆ.
ಭವಿಷ್ಯದ ರಾಜಕೀಯದ ಮೇಲಾಗುವ ಭೀಕರ ಪರಿಣಾಮಗಳು!
ಸುವೇಂದು ಅಧಿಕಾರಿ ಸರ್ಕಾರದ ಈ ಆಘಾತಕಾರಿ ತೀರ್ಮಾನವು ಪಶ್ಚಿಮ ಬಂಗಾಳದಲ್ಲಿ ದೊಡ್ಡ ಮಟ್ಟದ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಒಂದು ಕಡೆ ಮುಸ್ಲಿಂ ಸಮುದಾಯಗಳಿಗೆ ಒಬಿಸಿ ಹಕ್ಕು ತಪ್ಪಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದರೆ, ಮತ್ತೊಂದು ಕಡೆ ರಾಜ್ಯದ ಒಟ್ಟು ಒಬಿಸಿ ಮೀಸಲಾತಿಯು ಶೇ.17 ರಿಂದ ಶೇ.7 ಕ್ಕೆ ಇಳಿಕೆಯಾಗಿರುವುದು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಕೈಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಹಿಂದುಳಿದ ವರ್ಗಗಳ ಒಟ್ಟಾರೆ ಹಕ್ಕನ್ನು ಬಿಜೆಪಿ ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಮುಂಬರುವ ದಿನಗಳಲ್ಲಿ ಭಾರಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿವೆ,(ಏಜೆನ್ಸೀಸ್).