ಸಮೃದ್ಧಿ ಯಾತ್ರೆಯಲ್ಲಿ ಸಿ.ಎಂ. ನಿತೀಶ್ ಕುಮಾರ್, ಸ್ಪೋಟದಿಂದ ಕುಸಿದು ಬಿದ್ದ ಮನೆ
- ಬಿಹಾರದ ಸಿವಾನ್‌ನಲ್ಲಿ ಭಾರಿ ಸ್ಪೋಟ
- ಅನತಿ ದೂರದ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಮುಖ್ಯಂತ್ರಿ ನಿತೀಶ್ ಕುಮಾರ್
- ಅಕ್ರಮ ಪಟಾಕಿ ತಯಾರಿಕೆಯೇ ಸ್ಫೋಟಕ್ಕೆ ಕಾರಣ ಎಂದ ಸ್ಥಳೀಯರು
ಬಿಹಾರ: ಬಿಹಾರದ ಸಿವಾನ್‌ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ರ್ಯಾಲಿಯಿಂದ ಅನತಿ ದೂರದಲ್ಲಿ ಪಟಾಕಿ ತಯಾರಿಸುವ ಮನೆಯೊಳಗೆ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮೃತನನ್ನು ಬದ್ರಾಮ್ ಗ್ರಾಮದ ನಿವಾಸಿ ಮುರ್ತುಜಾ ಮನ್ಸೂರಿ (50) ಎಂದು ಗುರುತಿಸಲಾಗಿದ್ದು, ಸ್ಫೋಟದ ಸದ್ದು 2 ಕಿ.ಮೀ ವ್ಯಾಪ್ತಿಯನ್ನು ಆವರಿಸಿದ್ದು, ಮೃತನ ತಲೆ ಮತ್ತು ಕಾಲುಗಳು ಸುಮಾರು 20 ಅಡಿ ದೂರಕ್ಕೆ ಬಿದ್ದಿವೆ ಎಂದು ಹೇಳಲಾಗುತ್ತಿದೆ.
ಕುಸಿದ ಮನೆ; ಸ್ಥಳಕ್ಕೆ ಆಗಮಿಸಿದ ಪೊಲೀಸರು
ಹುಸೇನ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬದ್ರಾಮ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಸ್ಫೋಟದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಮನೆ ಸಂಪೂರ್ಣವಾಗಿ ಕುಸಿದಿದ್ದು, ಘಟನಾ ಸ್ಥಳದಿಂದ ಸುಮಾರು 7 ಕಿ.ಮೀ ದೂರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುತ್ತಿದ್ದರು.
2 ಕಿಲೋಮೀಟರ್ ದೂರದವರೆಗೆ ಕೇಳಿಬಂದ ಶಬ್ದ
ಸ್ಫೋಟದ ಶಬ್ದವು ತುಂಬಾ ಜೋರಾಗಿದ್ದು, ಎರಡು ಕಿಲೋಮೀಟರ್ ದೂರದವರೆಗೆ ಕೇಳಿಬರುತ್ತಿತ್ತು ಎಂದು ಸ್ಥಳೀಯ ನಿವಾಸಿಗಳು ಹೇಳಿದರು. ಪರಿಣಾಮ ಹತ್ತಿರದ ಮನೆಗಳ ಬಾಗಿಲುಗಳು ಅಲುಗಾಡಿವೆ ಎಂದು ವರದಿಯಾಗಿದೆ. ಜನರು ತಮ್ಮ ಮನೆಗಳಿಂದ ಹೊರಗೆ ಓಡಿಬಂದಾಗ ಪಕ್ಕದ ಮನೆಯಿಂದ ಹೊಗೆ ಬರುತ್ತಿರುವುದನ್ನು ಮತ್ತು ಮನೆ ಕುಸಿಯುತ್ತಿರುವುದನ್ನು ನೋಡಿದ್ದಾರೆ ಎಂದು ಹೇಳಿದ್ದಾರೆ.
ಅಕ್ರಮ ಪಟಾಕಿ ತಯಾರಿಕೆ ಆರೋಪ
ಘಟನೆಗೆ ಕಾರಣವೇನು ಎಂದು ಪೊಲೀಸ್ ತನಿಖೆಗಳು ನಡೆಯುತ್ತಿದ್ದು, ಈ ಕುಟುಂಬವು ಅಕ್ರಮ ಪಟಾಕಿ ತಯಾರಿಕೆ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಈ ಹಿಂದೆ ಇವರ ವಿರುದ್ಧ ಹಲವು ಬಾರಿ ದೂರುಗಳನ್ನು ನೀಡಲಾಗಿತ್ತು, ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮತ್ತೊಂದು ಮನೆಯಲ್ಲಿ ಪಟಾಕಿ ತಯಾರಿಕೆಯ ಸಮಯದಲ್ಲಿ ಇದೇ ರೀತಿಯ ಸ್ಫೋಟ ಸಂಭವಿಸಿದೆ ಎಂದು ಅವರು ನೆನಪಿಸಿಕೊಂಡರು.
ಪ್ರದೇಶವನ್ನು ಸುತ್ತುವರೆದ ಪೊಲೀಸರು; ಮುಂದುವರೆದ ತನಿಖೆ
ಸ್ಥಳವನ್ನು ತಲುಪಿದ ನಂತರ ಹಾನಿಗೊಳಗಾದ ಮನೆಯ ಸುತ್ತಲಿನ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದಾರೆ. ಸ್ಫೋಟದ ಸ್ಥಳದ ಬಳಿ ದೊಡ್ಡ ಜನಸಮೂಹ ಜಮಾಯಿಸಿದ್ದು, ಪೊಲೀಸರು ಅದನ್ನು ಚದುರಿಸುತ್ತಿದ್ದಾರೆ. ಸ್ಥಳದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ಸ್ಫೋಟದ ಸಮಯದಲ್ಲಿ ಮನೆಯೊಳಗೆ ಎಷ್ಟು ಜನರು ಇದ್ದರು ಎಂಬುದನ್ನು ಕಂಡುಹಿಡಿಯಲು ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).