Gold-Silver price: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಬೆಳ್ಳಿ ಮತ್ತು ಬಂಗಾರ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇದು ಜನರಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಬೆಲೆ ಕುಸಿತದ ವಿಷಯವನ್ನು ಕುತೂಹಲದಿಂದ ಗಮನಿಸುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕಂಡುಬಂದ ಪ್ರಮುಖ ಬದಲಾವಣೆಗಳು
24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ಶೇ. 5.4 ರಷ್ಟು ಇಳಿಕೆಯಾಗಿದ್ದು, ಸುಮಾರು 1,69,470 ಕ್ಕೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ಶೇ. 9 ಕ್ಕಿಂತ ಹೆಚ್ಚು ಇಳಿಕೆಯಾಗಿ ಔನ್ಸ್‌ಗೆ 4,887 ಡಾಲರ್‌ಗೆ ತಲುಪಿದೆ. ಈ ಮದ್ಯ ಬೆಳ್ಳಿ ಬೆಲೆಯಲ್ಲಿ ಶೇ. 19 ರಷ್ಟು ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ 3.12 ಲಕ್ಷಕ್ಕೆ ತಲುಪಿದೆ.
ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಬೆಳ್ಳಿ ಬೆಲೆ ಶೇ. 18.85 ರಷ್ಟು ಅಂದರೆ 72,500 ರೂ ಇಳಿಕೆಯಾಗಿ, ಪ್ರತಿ ಕೆಜಿಗೆ 3,12,000 ಕ್ಕೆ ತಲುಪಿದೆ. ಹೀಗಾಗಿ ಎರಡನೇ ದಿನವೂ ಭಾರಿ ನಷ್ಟ ಕಂಡಿದ್ದು, ಈ ವಾರದ ದಾಖಲೆಯ ಲಾಭವನ್ನು ಅಳಿಸಿಹಾಕಿದೆ ಎಂದು ಪಿಟಿಐ ವರದಿ ಮಾಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ (ಜ. 26) 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 1,62,060 ಇದ್ದರೆ, ಬೆಳ್ಳಿ ಬೆಲೆ ಕೆಜಿಗೆ 3,60,000 ಆಗಿತ್ತು. ಕಳೆದ ವರ್ಷದ ಅಂತ್ಯದಲ್ಲಿ 10 ಗ್ರಾಂಗೆ 1,37,700 ರಷ್ಟಿದ್ದ ಚಿನ್ನದ ಬೆಲೆ ಶೇ. 20.2 ರಷ್ಟು (27,800) ಏರಿಕೆಯಾಗಿದೆ .
ಜಾಗತಿಕ ಮಾರುಕಟ್ಟೆಗಳಲ್ಲಿ ಬೆಳ್ಳಿ ಮತ್ತು ಬಂಗಾರ ಕುಸಿತ ಕಂಡಿದ್ದು, ಸ್ಪಾಟ್ ಬೆಳ್ಳಿ ಬೆಲೆ ಔನ್ಸ್‌ಗೆ 31.44 ಡಾಲರ್ ಅಥವಾ 27.07 ಶೇಕಡಾ ಕುಸಿದು 84.70 ಡಾಲರ್‌ಗೆ ತಲುಪಿತು. ಸ್ಪಾಟ್ ಬೆಳ್ಳಿ ಇಂಟ್ರಾಡೇಯಲ್ಲಿ ಶೇ 36 ರಷ್ಟು ಕುಸಿದು ಔನ್ಸ್‌ಗೆ 73.30 ಡಾಲರ್‌ಗೆ ತಲುಪಿತು. ಚಿನ್ನದ ಬೆಲೆ 530.53 ಡಾಲರ್ ಅಥವಾ 9.83 ಶೇಕಡಾ ಕುಸಿದು ಔನ್ಸ್‌ಗೆ 4,865.35 ಡಾಲರ್‌ಗೆ ತಲುಪಿದೆ (ಏಜೆನ್ಸೀಸ್).