ನಾಯಿ ಕಡಿತಕ್ಕೆ ಹಾವಿನ ವಿಷ ನಿರೋಧಕ ಲಸಿಕೆ ನೀಡಿದ ಆಸ್ಪತ್ರೆ ಸಿಬ್ಬಂದಿ
ರೀವಾ: ನಾಯಿ ಕಚ್ಚಿದೆ ಎಂದು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ರೋಗಿಗೆ ಹಾವು ಕಚ್ಚಿದಾಗ ನೀಡುವ ಇಂಜೆಕ್ಷನ್ ಕೊಟ್ಟಿರುವ ಘಟನೆ, ಮಧ್ಯಪ್ರದೇಶದ ರೀವಾದಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆ (Sanjay Gandhi Hospital) ಯಲ್ಲಿ ನಡೆದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮೂಲಕ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ಎಷ್ಟು ನಿಗಾ ವಹಿಸಲಾಗುತ್ತಿದೆ ಎನ್ನುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರು ಆಸ್ಪತ್ರೆ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಆಗಿದ್ದೇನು?
ಮಾಹಿತಿ ಪ್ರಕಾರ, ಆಯುಶ್ ಸಿಂಗ್ ಎಂಬಾತನಿಗೆ ಶನಿವಾರ (ಸೆ. 5) ರಂದು ಮನೆಯ ಬಳಿ ನಾಯಿಯೊಂದು ಕಚ್ಚಿದೆ. ಕೂಡಲೇ ಆಯುಶ್ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದು, ತಮ್ಮ ಸಮಸ್ಯೆಯನ್ನು ವೈದ್ಯರಿಗೆ ತಿಳಿಸಿದ್ದಾರೆ.
ಆದರೆ ವೈದ್ಯರು, ನಾಯಿ ಕಡಿತಕ್ಕೆ ನೀಡಬೇಕಾದ ಮದ್ದನ್ನು ನೀಡುವ ಬದಲು, ಹಾವು ಕಡಿದಾಗ ನೀಡುವ ಇಂಜೆಕ್ಷನ್ಅನ್ನು ಆಯುಶ್ನಿಗೆ ಕೊಟ್ಟಿದ್ದಾರೆ. ಅಸ್ಪತ್ರೆಯಿಂದ ಆಚೆ ಬರುವಾಗ, ಆಯುಶ್ಗೆ, ತನಗೆ ನಾಯಿ ಬದಲು ಹಾವಿನ ಕಡಿತಕ್ಕೆ ನೀಡುವ ಇಂಜೆಕ್ಷನ್ ನೀಡಿರುವ ಬಗ್ಗೆ ತಿಳಿದಿದೆ. ಕೂಡಲೇ ಆಯುಶ್ ಆಸ್ಪತ್ರೆ ಸಿಬ್ಬಂದಿಗಳ ಜೊತೆ ಜಗಳಕ್ಕೆ ನಿಂತಿದ್ದಾರೆ.
ನಾನು ಸತ್ತರೆ ನೀವೇ ಜವಾಬ್ದಾರಿ!
ನನಗೆ ನಾಯಿ ಕಡಿದಿದೆ ಎಂದು ಆಸ್ಪತ್ರೆಗೆ ಬಂದರೆ ಹಾವಿನ ಕಡಿತಕ್ಕೆ ನೀಡುವ ಇಂಜೆಕ್ಷನ್ ನೀಡಿದ್ದಿರಾ? ನಿಮಗೇನು ಬುದ್ಧಿ ಇಲ್ಲವಾ? ನಾನು ಸತ್ತು ಹೋದರೆ ಯಾರು ಹೊಣೆ? ನಾನು ಆಸ್ಪತ್ರೆ ವಿರುದ್ಧ ದೂರನ್ನು ದಾಖಲಿಸುತ್ತೇನೆಂದು ಆಯುಶ್ ಕೂಗಾಡಿದ್ದಾರೆ. ಮತ್ತು ದೂರನ್ನು ಕೂಡ ನೀಡುವುದಾಗಿ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ, ಆಸ್ಪತ್ರೆಯವರು, ಆಯುಶ್ ಸರಿಯಾಗಿ ಮಾಹಿತಿ ನೀಡಲಿಲ್ಲ. ಹೀಗಾಗಿ ಈ ರೀತಿ ಯಾಗಿದೆ ಎಂದು ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಸದ್ಯ ಆಯುಶ್ನ ಆರೋಗ್ಯದಲ್ಲಿ ಏನು ಸಮಸ್ಯೆ ಕಂಡು ಬಂದಿಲ್ಲವಾದರೂ, ಇದೊಂದು ಗಂಭೀರ ಸ್ವರೂಪದ ಅಪರಾಧವಾಗಿದೆ, (ಏಜನ್ಸೀಸ್).