- ಐಬೊಮ್ಮ ವೆಬ್‌ಸೈಟ್‌ನ ನಿರ್ವಾಹಕ ಇಮ್ಮಡಿ ರವಿ ಬಂಧನ
- ಪೈರಸಿಯಿಂದಾಗಿ ಚಿತ್ರರಂಗಕ್ಕೆ ಭಾರೀ ನಷ್ಟ
- 65 ಮಿರರ್ ವೆಬ್‌ಸೈಟ್, 21,000ಕ್ಕೂ ಅಧಿಕ ಸಿನಿಮಾಗಳು
ಆಂಧ್ರಪ್ರದೇಶ: ಇಂದು (ನ.17) ಟಾಲಿವುಡ್ ಸ್ಟಾರ್ಗಳಾದ ಮೆಗಾಸ್ಟಾರ್ ಚಿರಂಜೀವಿ, ನಾಗಾರ್ಜುನ, ರಾಜಮೌಳಿ, ದಿಲ್ರಾಜು ಸೇರಿದಂತೆ ಹಲವರು ಹುಬ್ಬಳ್ಳಿ ಹುಲಿ ಸಿಪಿ ಸಜ್ಜನರ್ ಅವರನ್ನು ಭೇಟಿಯಾದರು. ಇತ್ತೀಚೆಗೆ ಸೈಬರ್ ಕ್ರೈಂ ಪೊಲೀಸರು ಐಬೊಮ್ಮ ವೆಬ್‌ಸೈಟ್‌ನ ನಿರ್ವಾಹಕ ಇಮ್ಮಡಿ ರವಿನನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ತಾರೆಯರು ಸಜ್ಜನರ್ ಅವರೊಂದಿಗೆ ಮಾತುಕತೆ ನಡೆಸಿದರು. .
ಚಿತ್ರರಂಗದ ಹಿರಿಯ ನಟರ ಜತೆಗಿನ ಮಾತುಕತೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಜ್ಜನರ್, "ಪೈರಸಿಯಿಂದಾಗಿ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ. ಇದನ್ನು ತಡೆಯುವ ಭಾಗವಾಗಿ, ಐಬೊಮ್ಮ ವೆಬ್‌ಸೈಟ್‌ನ ನಿರ್ವಾಹಕ ಇಮ್ಮಡಿ ರವಿಯನ್ನು ನಾವು ಬಂಧಿಸಿದ್ದೇವೆ. ರವಿ ವಿರುದ್ಧ ಈಗಾಗಲೇ ಐಟಿ ಕಾಯ್ದೆ ಮತ್ತು ಹಕ್ಕುಸ್ವಾಮ್ಯ ಕಾಯ್ದೆಯಡಿ 4 ಪ್ರಕರಣಗಳು ದಾಖಲಾಗಿವೆ" ಎಂದರು.
"ಈ ಪೈರಸಿಗೆ ಸಂಬಂಧಿಸಿದಂತೆ ಶಿವರಾಜ್ ಮತ್ತು ಪ್ರಶಾಂತ್ ಅವರನ್ನು ಸಹ ಬಂಧಿಸಲಾಗಿದೆ. ಇಮ್ಮಡಿ ರವಿ ಪೈರಸಿಯಲ್ಲಿ ಶಾಮೀಲಾಗಿರುವುದು ಮಾತ್ರವಲ್ಲದೆ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಸಹ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ. ಅನೇಕ ಅಮಾಯಕರು ಅದರಿಂದ ಸಾವನ್ನಪ್ಪಿದ್ದಾರೆ. ರವಿ ವೆಬ್‌ಸೈಟ್‌ಗಳನ್ನು ರಚಿಸುವಲ್ಲಿ ಎಕ್ಸ್ಪರ್ಟ್ ಇದ್ದಾನೆ" ಎಂದು ಹೇಳಿದ್ದಾರೆ.
"65 ಮಿರರ್ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದ್ದ ಈತನ ಬಳಿ 21,000ಕ್ಕೂ ಹೆಚ್ಚು ಚಿತ್ರಗಳು ಹಾರ್ಡ್ಡಿಸ್ಕ್ನಲ್ಲಿವೆ. ಅದರಲ್ಲಿ, 1972ರಲ್ಲಿ ರಿಲೀಸ್ ಆದ ದಿ ಗಾಡ್‌ಫಾದರ್‌ನಿಂದ ಹಿಡಿದು 2025ರ OG ವರೆಗಿದೆ. ಇದರಿಂದ ರವಿ 20 ಕೋಟಿ ರೂ. ಗಳಿಸಿದ್ದಾನೆ" ಎಂದು ಹೇಳಿದ್ದಾರೆ.
"ಐಬೊಮ್ಮ ಬಳಸುವ ಸುಮಾರು 5 ಮಿಲಿಯನ್ ಚಂದಾದಾರರ ಡೇಟಾ ಇವನ ಬಳಿಯಿದೆ. ಇಷ್ಟೊಂದು ಡೇಟಾವನ್ನು ಹೊಂದಿರುವುದು ತುಂಬಾ ಅಪಾಯಕಾರಿ. ಪ್ರಸ್ತುತ, ಈತನ ಜಾಲವನ್ನು ಪತ್ತೆಹಚ್ಚಿದ್ದೇವೆ. ಪೈರೆಸಿ ತಡೆಯುವಲ್ಲಿ ನಮ್ಮಿಂದ ಏನೇನು ಸಾಧ್ಯವೋ, ಅದೆಲ್ಲವನ್ನೂ ಮಾಡಿದ್ದೇವೆ” ಎಂದು ಸಜ್ಜನರ್ ಹೇಳಿದ್ದಾರೆ.
ಪ್ರಸ್ತುತ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸಜ್ಜನರ್ ಅವರು ಈ ಹಿಂದೆ ಟಿಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೆ, ಸೈಬರಾಬಾದ್ ಆಯುಕ್ತಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಜ್ಜನರ ಅವರು ಸೈಬರಾಬಾದ್ ಆಯುಕ್ತರಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್-19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.
ಹೈದರಾಬಾದ್ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್ಕೌಂಟರ್ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್ ಸಜ್ಜನರ್ ಭಾರಿ ಸುದ್ದಿಯಾದರು. ಅವರ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು.(ಏಜೆನ್ಸೀಸ್)