Election Themed Sweets | ಹೌರಾದಲ್ಲಿ ಮತದಾರರ ಮನಗೆಲ್ಲಲು ಸಜ್ಜಾಗಿವೆ ಪೊಲಿಟಿಕಲ್ ಮಿಠಾಯಿಗಳು!  
ದೇಶ

ಬಂಗಾಳ ಎಲೆಕ್ಷನ್​​ನಲ್ಲಿ 'ಸ್ವೀಟ್' ವಾರ್; ಹೌರಾದಲ್ಲಿ ಮತದಾರರ ಮನಗೆಲ್ಲಲು ಸಜ್ಜಾಗಿವೆ ಪೊಲಿಟಿಕಲ್ ಮಿಠಾಯಿಗಳು! | Election Themed Sweets

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆ ಆರಂಭವಾಗಿದ್ದು, ಈ ಚುನಾವಣೆ ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ, ಈಗ ಸಿಹಿ ತಿನಿಸುಗಳ ಅಂಗಡಿಗಳಿಗೂ ವಿಸ್ತರಿಸಿದೆ. ಹೌರಾದ ಸ್ಥಳೀಯ ಮಿಠಾಯಿ ತಯಾರಕರೊಬ್ಬರು ಚುನಾವಣೆಗೆ ಸಂಬಂಧಿಸಿದ ಆಕರ್ಷಕ ಸಿಹಿತಿಂಡಿಗಳನ್ನು (Election Themed Sweets) ಸಿದ್ಧಪಡಿಸಿದ್ದು, ರಾಜ್ಯ ರಾಜಕೀಯದ ಪೈಪೋಟಿಯನ್ನು ಬಂಗಾಳದ ಸಾಂಪ್ರದಾಯಿಕ ಪಾಕಶಾಲೆಯ ಪರಂಪರೆಯೊಂದಿಗೆ ಬೆಸೆದಿದ್ದಾರೆ.
ಹೌರಾದ ಹೃದಯಭಾಗದಲ್ಲಿರುವ ಈ ಪ್ರಸಿದ್ಧ ಸಿಹಿತಿಂಡಿ ಅಂಗಡಿಯಲ್ಲಿ ಮೊದಲಿನಂತೆ ರಸಗುಲ್ಲಾಗಳಿಗಿಂತ ಹೆಚ್ಚಾಗಿ ವಿವಿಧ ಪಕ್ಷಗಳ ಚಿಹ್ನೆಗಳ ಆಕಾರದಲ್ಲಿರುವ ಸಿಹಿತಿಂಡಿಗಳು ರಾರಾಜಿಸುತ್ತಿವೆ. ಟಿಎಂಸಿಯ ಜೋಡಿ ಹೂವು, ಬಿಜೆಪಿಯ ಕಮಲ, ಕಾಂಗ್ರೆಸ್ಸಿನ ಕೈ ಚಿಹ್ನೆ ಹಾಗೂ ಎಡಪಂಥೀಯರ ಸುತ್ತಿಗೆ ಮತ್ತು ಕುಡಗೋಲುಗಳನ್ನು ಒಳಗೊಂಡ ಸ್ವೀಟ್​​​ಗಳು ಗ್ರಾಹಕರನ್ನು ಸೆಳೆಯುತ್ತಿವೆ.
ರಾಜ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗಿದ್ದರೂ, ಸಿಹಿತಿಂಡಿ ಅಂಗಡಿಯ ಒಳಗೆ ಮಾತ್ರ ಸೌಹಾರ್ದತೆಯ ವಾತಾವರಣ ನೆಲೆಸಿದ್ದು, ಎಲ್ಲಾ ಪಕ್ಷಗಳ ಬೆಂಬಲಿಗರು ಕುತೂಹಲದಿಂದ ಈ ಸ್ವೀಟ್​​ಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಪಶ್ಚಿಮ ಬಂಗಾಳದ ಚುನಾವಣೆ ಹೆಚ್ಚಿನ ಮತದಾನ ಮತ್ತು ಉತ್ಸಾಹದ ಪ್ರಚಾರಕ್ಕೆ ಸಾಕ್ಷಿಯಾಗುತ್ತಿದೆ. ಹೌರಾದ ಓಣಿಗಳಲ್ಲಿ ಮಾರಾಟವಾಗುತ್ತಿರುವ ಈ ಸಿಹಿತಿಂಡಿಗಳು, ಉದ್ವಿಗ್ನತೆ ವಾತಾವರಣದ ನಡುವೆಯೂ ಬಂಗಾಳವನ್ನು ಒಟ್ಟಿಗೆ ಬಂಧಿಸುವ ಸಿಹಿ ಸಂಸ್ಕೃತಿಯನ್ನು ನೆನಪಿಸುತ್ತಿವೆ. 

ಕೈ ಕೊಟ್ಟ ಇವಿಎಂ

ಎರಡನೇ ಹಂತದ ಮತದಾನ ಆರಂಭವಾದ ಮೊದಲ ಎರಡು ಗಂಟೆಗಳಲ್ಲಿ ಸುಮಾರು 18% ಮತದಾನ ದಾಖಲಾಗಿದ್ದು, ಹೌರಾ ಸೇರಿದಂತೆ 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಹೌರಾದ ಕೆಲವು ಮತಗಟ್ಟೆಗಳಲ್ಲಿ ಇವಿಎಂ (EVM) ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದ ಮತದಾನ ಪ್ರಕ್ರಿಯೆ ವಿಳಂಬವಾಗಿ ಮತದಾರರಲ್ಲಿ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ದೋಷಪೂರಿತ ಯಂತ್ರಗಳನ್ನು ಸರಿಪಡಿಸಲು ಅಥವಾ ಬದಲಾಯಿಸಲು ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದು, ಇದೇ ವೇಳೆ, ಹೂಗ್ಲಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆದ ವರದಿಗಳಾಗಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿರುವ ಭವಾನಿಪುರ ಈ ಹಂತದ ಹೈ-ವೋಲ್ಟೇಜ್ ಕ್ಷೇತ್ರವಾಗಿದ್ದು, ರಾಜ್ಯದ್ಯಂತ ಚುನಾವಣಾ ಆಯೋಗವು ಬಿಗಿ ಭದ್ರತೆಯನ್ನು ಕೈಗೊಂಡಿದೆ(ಏಜೆನ್ಸೀಸ್​​).