ಫಾಸ್ಟ್ಯಾಗ್ ವಾರ್ಷಿಕ ಪಾಸ್
- ಏ.01ರಿಂದಲೇ ಫಾಸ್ಟ್ಯಾಗ್ ವಾರ್ಷಿಕ್ ಪಾಸ್ ಶುಲ್ಕ ಹೆಚ್ಚಳ ಜಾರಿ
- ಇಂದೇ ನವೀಕರಿಸಿದರೆ, ಹಳೆಯ ಮೊತ್ತವೇ ಅನ್ವಯ
- ಆನ್ಲೈನ್ನಲ್ಲಿ ಪಾಸ್ ನವೀಕರಣ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಹಂತ ಹಂತ ಮಾಹಿತಿ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಇದೀಗ ಕೇಂದ್ರ ಸರ್ಕಾರ ಫಾಸ್ಟ್ಯಾಗ್ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಿದೆ. ಈ ಹೊಸ ನಿಯಮ ಇದೇ ಏ.01ರಿಂದ ಜಾರಿಗೆ ಬರಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ಹಣಕಾಸು ವರ್ಷಕ್ಕೆ (2026-27) ಫಾಸ್ಟ್ಯಾಗ್ ವಾರ್ಷಿಕ ಶುಲ್ಕವನ್ನು ಹೆಚ್ಚಿಸಿದೆ. ಏಪ್ರಿಲ್ 1ರಿಂದ, ಪಾಸ್‌ನ ಬೆಲೆಯನ್ನು 3 ಸಾವಿರ ರೂ.ನಿಂದ 3,075ಕ್ಕೆ ಏರಿಸಿದೆ. ಅಲ್ಲಿಗೆ, 75 ರೂ. ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಲ್ಲಿ ನಗದು ರಹಿತ ಪ್ರಯಾಣಕ್ಕೆ ಇದು ಉತ್ತಮ ವ್ಯವಸ್ಥೆಯಾಗಿದ್ದು, ಟೋಲ್ಗಳಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುತ್ತದೆ.
ಏನಿದು ವಾರ್ಷಿಕ ಪಾಸ್?
ಈ ವಾರ್ಷಿಕ ಪಾಸ್ ಒಂದು ವರ್ಷಕ್ಕೆ ಅಥವಾ 200 ಟೋಲ್ ಕ್ರಾಸಿಂಗ್‌ಗಳವರೆಗೆ ಮಾನ್ಯವಾಗಿರುತ್ತದೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನೀವು 200 ಟೋಲ್ ಕ್ರಾಸ್ ಮಾಡಿದರೆ, ಪಾಸ್ ವ್ಯಾಲಿಡಿಟಿ ಅಂತ್ಯಗೊಳ್ಳುತ್ತದೆ. ಸಣ್ಣ ಪ್ರಮಾಣದಲ್ಲಿ ಏರಿಕೆ ಮಾಡಿದ್ದೇ ಆದರೂ ಆಗಾಗ್ಗೆ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಯಾರಿಗೆ ಹೆಚ್ಚು ಲಾಭ ಹಾಗೂ ಅನ್ವಯ?
ವಾರ್ಷಿಕ ಪಾಸ್ ಅನ್ನು ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಬಳಸಬಹುದು. ಅದು ವ್ಯಾಪ್ತಿಯ ಮಿತಿ ಮಾತ್ರ. ದೇಶಾದ್ಯಂತ ಸುಮಾರು 1,150 ಟೋಲ್ ಪ್ಲಾಜಾಗಳಲ್ಲಿ (ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು) ಇದು ಮಾನ್ಯವಾಗಿದೆ. ರಾಜ್ಯ ಹೆದ್ದಾರಿಗಳು ಅಥವಾ ಖಾಸಗಿ ಟೋಲ್ ರಸ್ತೆಗಳಿಗೆ ಪಾಸ್ ಅನ್ವಯವಾಗುವುದಿಲ್ಲ ಎಂಬುದು ಗಮನಾರ್ಹ.
ಪಾಸ್ ನವೀಕರಣೆ ಹೇಗೆ?
- 'ರಾಜಮಾರ್ಗ ಯಾತ್ರಾ' ಅಪ್ಲಿಕೇಶನ್ ಡೌನ್ಲೋಡ್ ಮಾಡಿ
- ಇಲ್ಲವೇ, NHAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಒಟಿಪಿಯೊಂದಿಗೆ ಲಾಗಿನ್ ಆಗಿ
- 'ವಾರ್ಷಿಕ ಟೋಲ್ ಪಾಸ್' ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ ವಾಹನ ನೋಂದಣಿ ಸಂಖ್ಯೆಯನ್ನು (VRN) ನಮೂದಿಸಿ
- ಯುಪಿಐ/ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಪಾವತಿಸಿ
- ಪಾವತಿಯ ಸುಮಾರು 2 ಗಂಟೆಗಳೊಳಗೆ ನಿಮ್ಮ FASTag ಸಕ್ರಿಯಗೊಳ್ಳುತ್ತದೆ