Lohagad Murder Case 
ದೇಶ

'ಕೊಲೆ ಮಾಡುವುದು ಹೇಗೆ?' ಅಂತರ್ಜಾಲದಲ್ಲಿ ಹುಡುಕಾಟ; ಲೋಹಗಡ ಉದ್ಯಮಿ ಹತ್ಯೆ ಪ್ರಕರಣಕ್ಕೆ ಹೊಸ ತಿರುವು!

ಪುಣೆ: ಮಹಾರಾಷ್ಟ್ರದ ಲೋಹಗಡ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ(Lohagad Murder Case) ಸಂಬಂಧಿಸಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ, ಹತ್ಯೆಗೆ ಕೆಲ ದಿನಗಳ ಮೊದಲು ಅಂತರ್ಜಾಲದಲ್ಲಿ ವ್ಯಕ್ತಿಯನ್ನು ಕೊಲ್ಲುವ ವಿಧಾನಗಳ ಬಗ್ಗೆ ಹುಡುಕಾಟ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2,004 ಕರೆ, 238 ಗಂಟೆ ಮಾತುಕತೆ

ಜೂನ್ 18ರಂದು ನಡೆದಿದ್ದ ಈ ಹತ್ಯೆ ಪೂರ್ವಯೋಜಿತ ಸಂಚಿನ ಭಾಗವಾಗಿತ್ತು ಎಂಬ ಶಂಕೆಯನ್ನು ತನಿಖೆ ಮತ್ತಷ್ಟು ಬಲಪಡಿಸಿದೆ. ಪೊಲೀಸರ ಪ್ರಕಾರ, ಜನವರಿಯಿಂದ ಜೂನ್‌ವರೆಗೆ ಸಿಯಾ ಮತ್ತು ಚೇತನ್ ನಡುವೆ ಒಟ್ಟು 2,004 ಕರೆಗಳು ನಡೆದಿವೆ. ಈ ಅವಧಿಯಲ್ಲಿ ಇಬ್ಬರೂ ಒಟ್ಟು 238 ಗಂಟೆಗಳ ಕಾಲ ಪರಸ್ಪರ ಮಾತನಾಡಿದ್ದಾರೆ. ಸಾಮಾನ್ಯ ಕರೆಗಳ ಜೊತೆಗೆ ವಾಟ್ಸಾಪ್ ಕರೆಗಳು ಹಾಗೂ ಫೇಸ್‌ಟೈಮ್ ಮೂಲಕವೂ ನಿರಂತರ ಸಂಪರ್ಕದಲ್ಲಿದ್ದರು. ಇಬ್ಬರ ಮೊಬೈಲ್ ದಾಖಲೆಗಳು, ಸಂದೇಶಗಳು ಮತ್ತು ಇಂಟರ್‌ನೆಟ್ ಚಟುವಟಿಕೆಗಳು ಹತ್ಯೆ ಪೂರ್ವಯೋಜಿತವಾಗಿತ್ತು ಎಂಬುದಕ್ಕೆ ಪ್ರಮುಖ ಸಾಕ್ಷ್ಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಮುನ್ನ ಕೆಫೆಯಲ್ಲಿ ಭೇಟಿ

ಜೂನ್ 18ರಂದು ಘಟನೆ ನಡೆದ ದಿನ ಸಿಯಾ ಮತ್ತು ಚೇತನ್ ಮೊದಲು ಕೆಫೆಯೊಂದರಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಇಬ್ಬರೂ ಲೋಹಗಡ ಕೋಟೆ ಪ್ರದೇಶಕ್ಕೆ ತೆರಳಿದ್ದರೆಂದು ಪೊಲೀಸರು ಶಂಕಿಸಿದ್ದಾರೆ. ಜೂನ್ 16 ಮತ್ತು 17ರಂದು ಕೊಲೆ ಸಂಚು ಅಂತಿಮಗೊಳಿಸಲಾಗಿತ್ತು ಎಂದು ತನಿಖಾ ತಂಡದ ಅಭಿಪ್ರಾಯವಾಗಿದೆ. ಸಿಯಾ ತನ್ನ ಹುಟ್ಟುಹಬ್ಬದ ಆಚರಣೆಯ ನೆಪದಲ್ಲಿ ಕೇತನ್ ಅವರನ್ನು ಲೋಹಗಡ ಕೋಟೆಗೆ ಕರೆದುಕೊಂಡು ಹೋಗಿದ್ದಳು. ಇದೇ ವೇಳೆ ಚೇತನ್ ಈಗಾಗಲೇ ಅಲ್ಲಿಗೆ ಬಂದು ಸಮೀಪದಲ್ಲೇ ಕಾಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಕಣ್ತಪ್ಪಿಸಲು ಯತ್ನ?

ಡಿಜಿಟಲ್ ದಾಖಲೆಗಳ ಪರಿಶೀಲನೆಯಲ್ಲಿ ಮತ್ತಷ್ಟು ಮಾಹಿತಿ ಸಿಕ್ಕಿದೆ. ಜೂನ್ 18ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5.40ರವರೆಗೆ ಚೇತನ್ ತನ್ನ ಮೊಬೈಲ್ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ತನ್ನ ಮೊಬೈಲ್ ಅನ್ನು ಅಂಗಡಿಯಲ್ಲೇ ಬಿಟ್ಟು, ನೌಕರನ ಮೊಬೈಲ್ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಸ್ಥಳ ಪತ್ತೆಹಚ್ಚುವುದನ್ನು ತಪ್ಪಿಸಲು ಈ ತಂತ್ರ ಅನುಸರಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಸಿಸಿಟಿವಿಯಲ್ಲಿ ಸಿಕ್ಕ ಸುಳಿವು

ಪ್ರಕರಣದ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು ಮಹತ್ವದ ಸಾಕ್ಷ್ಯವಾಗಿವೆ. ಭಾರೀ ಬಿಸಿಲಿನ ನಡುವೆಯೂ ಹುಡಿ ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ಅವರ ಹಿಂದೆ ಹೋಗುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿತ್ತು. ಬಳಿಕ ಸಿಸಿಟಿವಿ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣದ ಫೋಟೋಗಳನ್ನು ಪರಿಶೀಲಿಸಿದ ಪೊಲೀಸರು ಆ ವ್ಯಕ್ತಿಯನ್ನು ಚೇತನ್ ಎಂದು ಗುರುತಿಸಿದ್ದಾರೆ.

ಮದುವೆ ಬೇಡ, ಆದರೆ ನಿಶ್ಚಿತಾರ್ಥ ಮುರಿಯಲೂ ಇಷ್ಟವಿರಲಿಲ್ಲ?

ಸಿಯಾ ಮತ್ತು ಕೇತನ್ ಫೆಬ್ರುವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ವರ್ಷದ ನವೆಂಬರ್‌ನಲ್ಲಿ ಉದಯಪುರದಲ್ಲಿ ಮದುವೆ ನಡೆಯಬೇಕಾಗಿತ್ತು. ಮದುವೆ ಸಮಾರಂಭಕ್ಕಾಗಿ ಅರಮನೆಯೊಂದನ್ನು ಈಗಾಗಲೇ ಕಾಯ್ದಿರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಿಚಾರಣೆ ವೇಳೆ, "ಇಬ್ಬರೂ ಓಡಿ ಹೋಗಿ ಮದುವೆಯಾಗಬಹುದಿತ್ತಲ್ಲ?" ಎಂದು ಪೊಲೀಸರು ಚೇತನ್‌ನನ್ನು ಪ್ರಶ್ನಿಸಿದ್ದರು. ಇದಕ್ಕೆ ಸಿಯಾ ನಿಶ್ಚಿತಾರ್ಥ ಮುರಿದು ಓಡಿಹೋಗಲು ಇಷ್ಟಪಡಲಿಲ್ಲ. ಅದರಿಂದ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಆಕೆ ಭಾವಿಸಿದ್ದಳು ಎಂದು ಚೇತನ್ ಉತ್ತರಿಸಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಸಿಸಿಟಿವಿ ದೃಶ್ಯಗಳು, ಕರೆ ವಿವರಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಹತ್ಯೆ ಮತ್ತು ಕ್ರಿಮಿನಲ್ ಸಂಚು ಆರೋಪದಡಿ ತನಿಖೆ ಮುಂದುವರಿದಿದೆ,(ಏಜೆನ್ಸೀಸ್​​).