ನೇಹಾಭಿಕ್ರಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ | ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ || ‘ಈ ಆಧ್ಯಾತ್ಮಿಕ ಸಾಧನೆಯ ಪ್ರಯತ್ನವು ಎಂದಿಗೂ ವ್ಯರ್ಥವಾಗುವುದಿಲ್ಲ ಮತ್ತು ವ್ಯತಿರಿಕ್ತವಾದ ಫಲಿತಾಂಶ ಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಡೆಯುವ ಸಣ್ಣ ಪ್ರಯತ್ನ ಸಹ ನಿನ್ನನ್ನು ಅತಿದೊಡ್ಡ ಭಯ ಅಥವಾ ಅಪಾಯದಿಂದ ರಕ್ಷಿಸುತ್ತದೆ’ ಎಂದು ಭಗವದ್ಗೀತೆಯಲ್ಲಿ, ಸವೋಚ್ಚ ದೈವೀಶಕ್ತಿಯಾದ ಶ್ರೀಕೃಷ್ಣನು ಸಾರಿದ್ದಾನೆ.
ತನ್ನಲ್ಲಿರುವ ದೈವತ್ವವನ್ನು ಅರಿಯುವುದೇ ಮಾನವಜನ್ಮದ ಏಕೈಕ ಉದ್ದೇಶ. ‘ನನಗೆ ದೇವರ ಕುರಿತು ಅರಿವಾಗಬೇಕು, ನಾನು ದೇವರನ್ನು ಪಡೆಯಬೇಕು’ ಎಂಬ ತೀವ್ರವಾದ ಹಂಬಲವು ನಿಮಗಿದ್ದರೆ ಸಾಕು. ನಮ್ಮ ಹಿಂದೂ ಪುರಾಣಗಳಲ್ಲಿ ಚಕೋರಪಕ್ಷಿಯು ತಾನೇನಾದರೂ ತಿನ್ನಬೇಕೆಂದರೆ, ಚಂದ್ರನ ಕಿರಣಗಳು ಆಕಾಶದಲ್ಲೆಲ್ಲ ಪಸರಿಸಬೇಕು. ಈ ಚಂದ್ರನ ಉದಯಕ್ಕಾಗಿ ಚಕೋರಪಕ್ಷಿಯು ಏಕಾಗ್ರಚಿತ್ತದಿಂದ ಕಾಯುತ್ತಲೇ ಇರುತ್ತದೆ. ಚಾತಕ ಪಕ್ಷಿ ಸಹ, ತನಗೆ ಎಷ್ಟೇ ಬಾಯಾರಿಕೆಯಾದರೂ, ಅದು ಭೂಮಿಯಲ್ಲಿರುವ ನೀರನ್ನು ಕುಡಿಯುವುದಿಲ್ಲ. ಆಕಾಶದಿಂದ ಬೀಳುವ ಮಳೆನೀರನ್ನೇ ಕುಡಿಯಬೇಕೆಂದು ಮಳೆಗಾಗಿ ಕಾಯುತ್ತಲೇ ಇರುತ್ತದೆ. ದೇವರನ್ನು ಅರಿಯಲು ನಮಗೆ ಇಂಥದೇ ಏಕಾಗ್ರತೆ ಬೇಕು.
ಬ್ರಹ್ಮಜ್ಞಾನದ ಹುಡುಕಾಟ: ಭೃಗು ಮಹರ್ಷಿಯು ಹೇಗೆ ಬ್ರಹ್ಮಜ್ಞಾನವನ್ನು ಗಳಿಸಿದ ಎಂಬುದನ್ನು ತೈತ್ತಿರೀಯೋಪನಿಷದ್ ವರ್ಣಿಸುತ್ತದೆ. ದೇವರ ಕುರಿತು ತಿಳಿಸು ಎಂದು ತನ್ನ ತಂದೆ ವರುಣನ ಹತ್ತಿರ ಬಾಲಕ ಭೃಗುವು ಕೋರಿಕೊಂಡ. ಈಗಿನ ತಂದೆಯರು ಹೇಳುವಂತೆ, ‘ನಿನ್ನ ನೋಟ್ ಪುಸ್ತಕ ತೆಗೆದು ನಾನು ದೇವರ ಕುರಿತು ಹೇಳುವ ಎಲ್ಲ ವಿಷಯಗಳನ್ನು ಟಿಪ್ಪಣಿ ಮಾಡಿಕೋ. ನಾಳೆಯ ಹೊತ್ತಿಗೆ ಅವೆಲ್ಲವುಗಳನ್ನು ಕಂಠಪಾಠ ಮಾಡಿ ನನಗೆ ಒಪ್ಪಿಸು’ ಎಂದು ಹೇಳಲಿಲ್ಲ. ಅದಕ್ಕೆ ಬದಲಾಗಿ, ಅವನು, ತಪಸ್ಯಾ ಬ್ರಹ್ಮ ವಿಜಿಜ್ಞಾಸವ | (ತೈತ್ತಿರೀಯೋಪನಿಷದ್ 3.2) ಎಂದು ಹೇಳಿದ. ಅಂದರೆ, ‘ಬ್ರಹ್ಮನ ಕುರಿತಾಗಿ ಕಠಿಣ ತಪಸ್ಸನ್ನಾಚರಿಸಿ ಅರಿತುಕೋ’ ಎಂದುಬಿಟ್ಟ. ತಂದೆಯ ಮಾತಿಗೆ ತಲೆಬಾಗಿದ ಭೃಗುವು ದಟ್ಟವಾದ ಕಾಡಿಗೆ ಹೋಗಿ ಧ್ಯಾನದಲ್ಲಿ ಮುಳುಗಿಹೋದ. ಸತತವಾದ ಮತ್ತು ಏಕಾಗ್ರಚಿತ್ತದ ಧ್ಯಾನದ ಮೂಲಕ ಬ್ರಹ್ಮನ ಸ್ವಭಾವವನ್ನು ಅರಿಯಲು ಪ್ರಯತ್ನಿಸಿದ ಅವನಿಗೆ, ‘ಎಲ್ಲವೂ ಆಹಾರದಿಂದಲೇ ಜನ್ಮತಾಳಿದೆ, ಪ್ರತಿಯೊಬ್ಬನೂ ಆಹಾರದ ಕಾರಣದಿಂದಲೇ ಜೀವಿಸಿದ್ದಾನೆ ಮತ್ತು ಅಂತಿಮವಾಗಿ ಎಲ್ಲರೂ ಆಹಾರವೇ ಆಗುತ್ತಾರೆ’ ಎಂಬುದು ಗೋಚರವಾಯಿತು. ಆಹಾರವೇ ಸರ್ವಸೃಷ್ಟಿಯ ಮೂಲವಾಗಿರುವುದರಿಂದ, ಆಹಾರವೇ ಬ್ರಹ್ಮನಾಗಿರಬಹುದು ಎಂದು ಅವನು ತೀರ್ವನಿಸಿ, ತಂದೆಗೆ ಬಂದು ಅರುಹಿದ. ತನ್ನ ಈ ಜ್ಞಾನಾನ್ವೇಷಣೆಯಿಂದ ತನಗೆ ಹೊಗಳಿಕೆ ಸಿಗಬಹುದು, ತಂದೆ ತನ್ನ ಬೆನ್ನು ತಟ್ಟಬಹುದು ಎಂದು ಯೋಚಿಸಿದ ಅನ್ನಂ ಬ್ರಹ್ಮೇತಿ ವ್ಯಜನಾತ್, ಅನ್ನದಿಂದಲೇ ಎಲ್ಲರೂ ಜನಿಸುತ್ತಾರೆ, ಜೀವಿಸುತ್ತಾರೆ ಮತ್ತು ಕೊನೆಗೆ ಅನ್ನದಿಂದಲೇ ಎಲ್ಲರ ಅಂತ್ಯವೂ ಆಗುತ್ತದೆಯಾದ್ದರಿಂದ, ಅನ್ನವೇ ಬ್ರಹ್ಮ ಎಂದು ತನಗೆ ಅರಿವಾಗಿದೆ ಎಂದು ಭೃಗುವು ಹೇಳಿದ.
ವರುಣನು ಮುಗುಳ್ನಗುತ್ತ, ‘ತಪಸಾ ಬ್ರಹ್ಮ ವಿಜಿಜ್ಞಾಸವ’ ಎಂದು ಹೇಳಿದ. ಅಂದರೆ ‘ಮತ್ತೆ ತಪಸ್ಸು ಮಾಡಿ ಬ್ರಹ್ಮನನ್ನು ಅರಿತುಕೋ’ ಎಂದು. ‘ಅನ್ನವು ಬ್ರಹ್ಮನಲ್ಲದಿದ್ದರೆ, ಅನ್ನಕ್ಕಿಂತ ಮಿಗಿಲಾದುದು ಯಾವುದು?’ ಎಂದು ಯೋಚಿಸುತ್ತ ಭೃಗುವು ಮತ್ತೆ ಕಾಡಿಗೆ ಹೋದ. ಇನ್ನೂ ತೀವ್ರ ತಪಸ್ಸನ್ನಾಚರಿಸಿದ ನಂತರ, ‘ಪ್ರಾಣವೇ (ಜೀವಶಕ್ತಿ) ಬ್ರಹ್ಮ; ಜಗತ್ತಿನಲ್ಲಿ ಎಲ್ಲವೂ ಚಲಿಸುವುದು ಪ್ರಾಣದಿಂದಲೇ’ ಎಂಬ ಭಾವನೆ ಅವನಲ್ಲಿ ಉದಿಸಿತು. ಅವನು ಪುನಃ ತಂದೆಯ ಹತ್ತಿರ ಬಂದು, ‘ಪ್ರಾಣೋ ಬ್ರಹ್ಮೇತಿ ವ್ಯಜಾನಾತ್’, ‘ಪ್ರಾಣವೇ ಬ್ರಹ್ಮ’ ಎಂದು ಹೇಳಿದ. ಈಗಲೂ ವರುಣನು ಮುಗುಳ್ನಗುತ್ತ, ‘ತಪಸಾ ಬ್ರಹ್ಮ ವಿಜಿಜ್ಞಾಸವ’ ಎಂದುಬಿಟ್ಟ. ಒಂದು ವೇಳೆ, ಭೃಗುವಿಗೆ ಶ್ರದ್ಧೆ ಇರದಿದ್ದರೆ, ‘ತಂದೆಯೇ, ನನಗೆ ಸಾಕಾಗಿ ಹೋಗಿದೆ; ನೀನೆ ಉತ್ತರ ಹೇಳು’ ಎನ್ನುತ್ತಿದ್ದ. ಆದರೆ ಹಾಗೆ ಮಾಡದೆ ಮತ್ತೆ ಕಾಡಿಗೆ ಹೋದ.
‘ಪ್ರಾಣವನ್ನು ಯಾರು ನಿಯಂತ್ರಿಸುತ್ತಾರೆ? ಮನಸ್ಸು ಪ್ರಾಣವನ್ನು ನಿಯಂತ್ರಿಸುತ್ತದೆ. ಎಲ್ಲ ಚಟುವಟಿಕೆಗಳನ್ನು ಮನಸ್ಸೇ ನಿಯಂತ್ರಿಸುತ್ತದೆ; ಆದ್ದರಿಂದ, ಮನಸ್ಸು ಪ್ರಾಣಕ್ಕಿಂತಲೂ ಹೆಚ್ಚು ಪ್ರಬಲವಾದದ್ದು; ಆದ್ದರಿಂದ ಮನಸ್ಸೇ ಬ್ರಹ್ಮನಾಗಿರಬೇಕು’ ಎಂದು ಯೋಚಿಸಿದ. ಮತ್ತೆ ತಂದೆಯ ಹತ್ತಿರ ಹೋಗಿ, ‘ಮನೋ ಬ್ರಹ್ಮೇತಿ ವ್ಯಜಾನಾತ್’ ಎಂದು ಹೇಳಿದ. ಈಗಲೂ ಕೂಡ ವರುಣನು, ‘ತಪಸಾ ಬ್ರಹ್ಮ ವಿಜಿಜ್ಞಾಸವ’ ಎಂದ.
ಮತ್ತೆ ಭೃಗುವು ಕಾಡಿಗೆ ಹೋದ. ‘ಕೆಲವು ಜನರು ಒಳ್ಳೆಯ ಮನಸ್ಸಿನವರಾಗಿರುತ್ತಾರೆ, ಇನ್ನೂ ಕೆಲವರು ಕೆಟ್ಟ ಮನಸ್ಸಿನವರಾಗಿರುತ್ತಾರೆ, ಜನರು ಒಳ್ಳೆಯ ಅಥವಾ ಕೆಟ್ಟ ವಿಚಾರಗಳನ್ನು ಹೊಂದುವಂತೆ ಮಾಡುವಂಥದ್ದು ಯಾವುದಿದೆ? ಹಾಗಾದರೆ, ಮನಸ್ಸಿಗಿಂತ ಮಿಗಿಲಾದದ್ದು ಬೇರೆ ಏನೋ ಇದೆ. ಅದೇ ಮನಸ್ಸನ್ನು ನಿಯಂತ್ರಿಸುತ್ತದೆ’ ಎಂದು ಯೋಚಿಸಿದ. ‘ಮನಸ್ಸಿಗೆ ಮೀರಿದ್ದು ವಿಜ್ಞಾನ (ಬುದ್ಧಿಶಕ್ತಿ)’ ಎಂದು ಅವನು ತೀರ್ವನಿಸಿ ವಿಜ್ಞಾನವೇ ಬ್ರಹ್ಮ ಇರಬೇಕು ಎಂದು ತಿಳಿದ. ಮತ್ತೆ ತಂದೆಯ ಹತ್ತಿರ ಹೋಗಿ, ‘ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್’ (ತೈತ್ತಿರೀಯೋಪನಿಷದ್ 3.5), ‘ನನಗೆ ವಿಜ್ಞಾನವೇ ಬ್ರಹ್ಮ ಎಂದು ಗೊತ್ತಾಗಿದೆ’ ಎಂದು ಸಾರಿದ. ಮತ್ತೊಂದು ಸಲ ವರುಣನು, ‘ತಪಸಾ ಬ್ರಹ್ಮ ವಿಜಿಜ್ಞಾಸವ’ ಎಂದು ಹೇಳಿ ಕಳಿಸಿದ. ಈಗಲೂ ತಂದೆಗೆ ಎದುರಾಡದೆ ಭೃಗುವು ಕಾಡಿಗೆ ಹೋಗಿ, ‘ಅನ್ನವು ಬ್ರಹ್ಮನಲ್ಲ, ಪ್ರಾಣವು ಬ್ರಹ್ಮನಲ್ಲ, ಮನಸ್ಸೂ ಬ್ರಹ್ಮನಲ್ಲ, ವಿಜ್ಞಾನ ಕೂಡ ಬ್ರಹ್ಮನಲ್ಲ, ಇವೆಲ್ಲಕ್ಕಿಂತ ಮಿಗಿಲಾದದ್ದು ಇನ್ನೊಂದೇನೋ ಇರಬೇಕು. ಅದು ಏನಾಗಿರಬಹುದು?’ ಎಂದು ಯೋಚಿಸಿದ. ಈ ವಿಚಾರವಾಗಿ ಅವನು ಧ್ಯಾನ ಮಾಡಲು ತೊಡಗಿದ. ಅವನಿಗಿದ್ದ ಅಪಾರವಾದ ಶ್ರದ್ಧೆಯಿಂದಾಗಿ, ಅವನಿಗೆ ಜ್ಞಾನೋದಯವಾಗಿ, ‘ಆನಂದೋ ಬ್ರಹ್ಮೇತಿ ವ್ಯಜಾನಾತ್’ (ತೈತ್ತಿರೀಯೋಪನಿಷದ್ 3.6), ‘ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಹಂಬಲಿಸುವ ದಿವ್ಯಾನಂದವೇ ಬ್ರಹ್ಮನ್’ ಎಂಬ ಸತ್ಯವನ್ನು ಅರಿತುಕೊಂಡ. ಯಾರಿಗೂ ದುಃಖವನ್ನು ಎದುರಿಸುವ ಇಚ್ಛೆಯಿರುವುದಿಲ್ಲ, ಆದ್ದರಿಂದ, ಈ ಜಗತ್ತಿನಲ್ಲಿ, ಆನಂದವೇ ಎಲ್ಲ ಚಟುವಟಿಕೆಗಳಿಗೆ ಆಧಾರವಾಗಿದೆ; ಎಲ್ಲರೂ ಯಾವಾಗಲೂ ಸಂತೋಷವಾಗಿರುವುದನ್ನೇ ಬಯಸುತ್ತಾರೆ. ಆದ್ದರಿಂದ, ಆನಂದವೊಂದೇ ಬ್ರಹ್ಮನ ನಿಜವಾದ ಸ್ವಭಾವವಾಗಿದೆ.
ಈ ಸಲ, ಭೃಗುವು ತಂದೆಯ ಹತ್ತಿರ ಹೋಗಲಿಲ್ಲ. ಅವನು ತನ್ನ ಆನಂದಭಾವ ಅಥವಾ ಬ್ರಹ್ಮಾನಂದಭಾವದಲ್ಲಿ ಮುಳುಗಿಹೋಗಿ ಕಾಡಿನಲ್ಲಿಯೇ ಕುಳಿತುಬಿಟ್ಟ. ಅದನ್ನು ಸಾಧಿಸಿದ ನಂತರ ಭೃಗುವು, ಎಲ್ಲ ಜ್ಞಾನಗಳನ್ನು ಪಡೆದ ಸಿದ್ಧನಾದ; ಸಂತೃಪ್ತನಾದ, ಬ್ರಹ್ಮನ ಭಾವಾನುಭವದೊಂದಿಗೆ ಉನ್ಮತ್ತನಾದ, ಅತ್ಯಂತ ಪೂರ್ಣವಾದ ಸ್ತಬ್ಧತೆಯನ್ನು ಪಡೆದ; ಅವನು ತನ್ನ ಆತ್ಮದಲ್ಲಿಯೇ ಆನಂದವನ್ನು ಅನುಭವಿಸತೊಡಗಿ ಆತ್ಮಾರಾಮನಾದ ಮತ್ತು ಅಂತಿಮವಾಗಿ, ತಾನೇ ಅಮರನಾದ ಬ್ರಹ್ಮನಾದ.
ಈ ನಡುವೆ, ಮಗನಿಗೆ ಏನಾಯಿತು? ಅವನು ದೇವರನ್ನು ಹುಡುಕುವ ಆಸೆಯನ್ನೇ ಬಿಟ್ಟಿರಬಹುದು ಎಂದು ಭಾವಿಸಿ ವರುಣನು ಕಾಡಿಗೆ ಬಂದು ನೋಡುತ್ತಾನೆ... ಭೃಗು ತನ್ನ ಸುತ್ತಲಿನ ಪರಿಸರದ ಯಾವುದೇ ಪರಿವೆಯಿಲ್ಲದೇ, ಬ್ರಹ್ಮಾನಂದದಲ್ಲಿ ಲೀನವಾಗಿದ್ದ.
ಸಂಪೂರ್ಣ ದಿವ್ಯಾನಂದ ಎಂದರೇನು?: ನಮ್ಮ ಉಪನಿಷತ್ತುಗಳು ದಿವ್ಯಾನಂದದ ಅಳತೆಯನ್ನು ವಿಷದವಾಗಿ ವರ್ಣಿಸಿವೆ. ಅವುಗಳ ಪ್ರಕಾರ, ಮನುಷ್ಯಾನಂದದ ಲಕ್ಷಾಂತರ ಕೋಟಿ ಪಟ್ಟು ಆನಂದವು ಒಂದು ಬ್ರಹ್ಮಾನಂದಕ್ಕೆ ಸಮ. ಅಂಕಿ ಅಂಶಗಳ ಮೇಲೆ ಇದನ್ನು ಅಳೆಯುವುದೆಂದರೆ, ಒಂದು ಬೃಹತ್ತಾದ ಪರ್ವತವು ಎಷ್ಟು ದೊಡ್ಡದಿದೆ ಎಂಬುದನ್ನು ಕೇವಲ ಒಂದು ಸಣ್ಣ ಕಲ್ಲಿನ ಮೂಲಕ ಲೆಕ್ಕ ಹಾಕಿದಂತೆ.
ಹಾಗಾದರೆ, ಸ್ವಾಮಿ, ನಾನು ಸಾಮಾನ್ಯ ಮನುಷ್ಯ. ನನಗೆ ಎಲ್ಲ ಶಾಸ್ತ್ರಗಳನ್ನು ಓದಿ ಪಾರಂಗತನಾಗಲು ಸಾಧ್ಯವಾಗದು; ನಾನು ಅತ್ಯಂತ ಬುದ್ಧಿವಂತ ಮತ್ತು ಸಮರ್ಥನಾದವನೂ ಅಲ್ಲ; ನಾನು ಬ್ರಹ್ಮಾನಂದವನ್ನು ಹೇಗೆ ಹೊಂದಬಲ್ಲೆ? ಎಂದು ಕೇಳಬಹುದು. ಬ್ರಹ್ಮಾನಂದವನ್ನು ಹೊಂದುವುದಕ್ಕೆ ಸುಲಭದ ದಾರಿಯಿದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಅದೆಂದರೆ, ವೇದಗಳ ಸತ್ಯವನ್ನು ಅರಿತು ಎಲ್ಲ ಆಸೆ ಮತ್ತು ಬಯಕೆಗಳನ್ನು ತ್ಯಜಿಸುವುದು. ಮನುಷ್ಯನಿಂದ ಎಲ್ಲ ಆಸೆಗಳನ್ನು ತೆಗೆದುಹಾಕಿದರೆ, ಅವನು ದೇವರಿಗೆ ಸಮನಾಗುತ್ತಾನೆ. ಆದ್ದರಿಂದ, ವೇದಗಳ ಆಳವಾದ ಸತ್ಯವನ್ನು ಅರಿತರೆ, ನಿಮಗೆ ದೇವರನ್ನು ಪಡೆಯುವ ಅತ್ಯಂತ ಹತ್ತಿರದ ಮತ್ತು ವೇಗವಾಗಿ ತಲುಪುವ ದಾರಿಯು ಸಿಗುತ್ತದೆ.
ಪ್ರಜ್ಞಾನಂ ಬ್ರಹ್ಮ (ಐತರೇಯೋಪನಿಷದ್ 3.3) - ಪ್ರಜ್ಞಾನವು ಬ್ರಹ್ಮನ್
ಅಯಮಾತ್ಮಾ ಬ್ರಹ್ಮ (ಮಾಂಡೂಕ್ಯೋಪನಿಷದ್ 1.2) ಈ ಆತ್ಮವೇ ಬ್ರಹ್ಮನ್
ತತ್ ತ್ವಂ ಅಸಿ (ಛಾಂದೋಗ್ಯೋಪನಿಷದ್ 6.8.7) ನೀನು ಅದೇ ಆಗಿದ್ದೀಯ.
ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕೋಪನಿಷದ್ 1.4.10) - ನಾನು ಬ್ರಹ್ಮನೇ ಆಗಿದ್ದೇನೆ.
ನೀವೆಲ್ಲರೂ ಬ್ರಹ್ಮಾನಂದವನ್ನು ಅನುಭವಿಸಲು ಯೋಗ್ಯರಾಗಿಯೇ ಇದ್ದೀರಿ. ನೀವು ಸಿಹಿ ಅಥವಾ ಐಸ್ಕ್ರೀಮನ್ನು ತಿಂದಾಗ, ಒಳ್ಳೆಯ ಆಟ ಆಡಿದಾಗ, ಒಳ್ಳೆಯ ಸಾಹಿತ್ಯವನ್ನು ಓದಿದಾಗ ಅಥವಾ ಒಳ್ಳೆಯ ಹಾಡುಗಳನ್ನು ಆಲಿಸಿದಾಗ ಸಿಗುವ ಆನಂದವು ಕೇವಲ ಒಂದು ಮನುಷ್ಯಾನಂದಕ್ಕೆ ಸಮನಾಗಿರುವುದಿಲ್ಲ ಎಂದಾಗ, ಇನ್ನು ಬ್ರಹ್ಮಾನಂದವು ಯಾವ ಮಟ್ಟಕ್ಕೆ ಇರಬೇಕು ಎಂಬುದನ್ನು ನೀವು ಕಲ್ಪಿಸಿಕೊಳ್ಳಿರಿ! ನಮ್ಮ ಹಿಂದಿನ ಕಾಲದ ಋಷಿಗಳು ಎಲ್ಲವನ್ನೂ ತ್ಯಜಿಸಿ ಯಾಕೆ ಗುಹೆಗಳಿಗೆ ಹೋದರೆಂದು ನೀವು ತಿಳಿದುಕೊಳ್ಳಬೇಕು. ಈ ಜಗತ್ತು ಯಾವ ಆನಂದವನ್ನು ಕೊಡುತ್ತದೆಯೋ ಅದಕ್ಕಿಂತ ಸಾವಿರಾರು ಪಟ್ಟು ಉಚ್ಚತಮವಾದುದನ್ನು ತಾವು ಗಳಿಸಬಲ್ಲೆವು ಎಂದು ಅವರಿಗೆ ಗೊತ್ತಿತ್ತು. ಆದ್ದರಿಂದಲೇ ಅವರು ಹಾಗೆ ಮಾಡಿದರು.
ಸೇವೆಯೇ ತಪಸ್ಸಾಗಲಿ: ನಿಮಗೆ ಕಾಡಿಗೆ ಹೋಗಿ ತಪಸ್ಸು ಮಾಡಿರಿ ಎಂದರೆ, ಎಷ್ಟು ಜನ ಸಿದ್ಧರಿದ್ದೀರಿ? ಯಾರೂ ಇಲ್ಲ! ಆದ್ದರಿಂದಲೇ, ನೀವು ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಸ್ವಾರ್ಥರಹಿತರಾಗಬೇಕು, ಎಲ್ಲ ಆಸೆ ಬಯಕೆಗಳನ್ನು ತ್ಯಜಿಸಿ ‘ನಾನು ದೇವರು’ ಎಂಬ ಅಂತಿಮ ಸತ್ಯವನ್ನು ಅರಿತರೆ ಸಾಕು. ನಿಮ್ಮ ಯೋಚನೆ, ಮಾತುಗಳು ಮತ್ತು ವರ್ತನೆಯಲ್ಲಿ ದಿವ್ಯತ್ವವಿರಲಿ; ಆಗಲೇ ನೀವು ಬ್ರಹ್ಮಾನಂದವನ್ನು ಹೊಂದಲು ಅರ್ಹತೆಯನ್ನು ಪಡೆಯುತ್ತೀರಿ. ಒಮ್ಮೆ ನೀವು ಬ್ರಹ್ಮಾನಂದವನ್ನು ಹೊಂದಿದ ಮೇಲೆ, ಮನುಷ್ಯಾನಂದದ ಈ ಪ್ರಾಪಂಚಿಕ ಸುಖಗಳ ಆಸೆ ಆಕಾಂಕ್ಷೆ ಬಯಕೆಗಳೆಲ್ಲವೂ ಈ ಜ್ಞಾನಾಗ್ನಿಯಲ್ಲಿ ಸುಟ್ಟು ಬೂದಿಯಾಗಿ ಹೋಗುತ್ತವೆ ಮತ್ತು ನಿಮ್ಮಲ್ಲಿ ಏನೂ ಉಳಿದಿರುವುದೇ ಇಲ್ಲ. ನೀವು ಮೋಕ್ಷವನ್ನು ಹೊಂದಲು ಇಷ್ಟೇ ಸಾಕು.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)