Ketan Agarwal Murder Plot By Fiancee
- ಕೇತನ್ ಸಹೋದರಿ, ಸಿಯಾಳ ನಡುವೆ ನಡೆದ ಮಾತುಕತೆಯೇ ಕೊಲೆಯ ಸಂಚನ್ನು ಬಯಲು ಮಾಡಿದ್ದು
- ಅನುಭವಿ ಟ್ರೆಕ್ಕರ್ ಕಂದಕಕ್ಕೆ ಬೀಳೋದು ಹೇಗೆ ಸಾಧ್ಯ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ವಿಶಾಲ್ ಅಗರ್ವಾಲ್
- ಆರು ತಿಂಗಳಲ್ಲಿ 2004 ಕರೆ, 238 ಗಂಟೆ ಮಾತನಾಡಿದ್ದ ಚೇತನ್ ಹಾಗೂ ಸಿಯಾ
ಐತಿಹಾಸಿಕ ಲೋಹ್ಗಡ್ ಕೋಟೆ ಬಳಿ ಟ್ರೆಕ್ಕಿಂಗ್ಗೆ ತೆರಳಿದ್ದಾಗ ಕಾಲು ಜಾರಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಮೃತಪಟ್ಟರು ಎನ್ನಲಾಗಿತ್ತು. ಆದರೆ, ಅನುಭವಿ ಟ್ರೆಕ್ಕರ್ ಆದ ಮಗ ಅಷ್ಟು ಸುಲಭವಾಗಿ ಬೀಳೋದು ಹೇಗೆ, ಭಾವಿ ಪತ್ನಿ ಸಿಯಾಳ ಹೇಳಿಕೆಗಳು ಕ್ಷಣಕ್ಕೊಮ್ಮೆ ಬದಲಾಗ್ತಿರೋದು ಯಾಕೆ ಎಂದು ಅನುಮಾನ ಕುಟಂಬಸ್ಥರಿಗೆ ವ್ಯಕ್ತವಾಯಿತು.ಇದೇ ಗೊಂದಲಗಳು ಕೊಲೆಯ ಸಂಚು ಬಯಲಾಗಲು ಕಾರಣವಾಗಿದ್ದು.
ಜೂನ್ 18ರಂದು ಸಿಯಾಗೋಯಲ್ ಮತ್ತು ಕೇತನ್ ಟ್ರೆಕ್ಕಿಂಗ್ಗೆ ತೆರಳಿದ್ದರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಜೋರಾದ ಗಾಳಿ ಬೀಸಿ ಅವರು ಕಂದಕಕ್ಕೆ ಬಿದ್ದು ಮೃತಪಟ್ಟರು ಎನ್ನಲಾಗಿತ್ತು. ಘಟನೆ ನಡೆದು ಮೂರ್ನಾಲ್ಕು ದಿನಗಳ ನಂತರ ಸಿಯಾ ಗೋಯೆಲ್ ಭಾವಿ ಪತಿಯ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ್ದರು.
ಸಹೋದರಿ ಜೊತೆ ಮಾತುಕತೆ ಹುಟ್ಟಿಸಿತು ಅನುಮಾನ
ಸಿಯಾ ಮತ್ತು ಕೇತನ್ ಮೂರು ಬಾರಿ ಮೇ 31, ಜೂನ್ 14 ಮತ್ತು ಜೂನ್ 18 ಲೋಹ್ಗಡ್ಗೆ ಟ್ರೆಕ್ಕಿಂಗ್ಗೆ ತೆರಳಿದ್ದರು. ಎರಡು ಬಾರಿ ಏನೂ ಆಗಲಿಲ್ಲ. ಆದರೆ ಈಗ ನಿಜಕ್ಕೂ ಏನಾಯ್ತು ಎಂದು ಕೇತನ್ನ ಸಹೋದರಿ ಕೇಳಿಕೊಂಡಿದ್ದರು. ಆಕೆ ಘಟನೆ ಬಗ್ಗೆ ವಿಶ್ಲೇಷಿಸಿದಳು. ಪ್ರಕರಣದಲ್ಲಿ ತನ್ನ ಪಾತ್ರ ತಳಕು ಹಾಕಿಕೊಳ್ಳದಂತೆ ಕತೆಯನ್ನು ಸೃಷ್ಟಿಸಿ ಹೇಳಿಕೊಂಡು ಹೊರಟಳು.
ಸಿಯಾಳ ನಡವಳಿಕೆ, ಹೇಳಿಕೆಯ ಸೂಕ್ಷ್ಮವಾಗಿ ಗಮನಿಸಿ ಕೇತನ್ ಸಹೋದರಿ ಏನೋ ಸರಿಯಿಲ್ಲ ಎಂದು ಪೋಷಕರಿಗೆ ಹೇಳಿದರು. ಆಗ ತಂದೆಗೂ ಅನುಮಾನ ವ್ಯಕ್ತವಾಯಿತು. ಆತ ಟ್ರೆಕ್ಕಿಂಗ್ ಅನುಭವಿ ಅಷ್ಟು ಸುಲಭವಾಗಿ ಸಾಯೋಕೆ ಸಾಧ್ಯಾನೆ ಇಲ್ಲ ಎಂದು ಪೊಲೀಸರಿಗೆ ದೂರು ಕೊಟ್ಟರು. ಆಗಲೇ ಸಿಯಾಳ ಅಸಲಿ ಕತೆ ಬಯಲಾಗಿದ್ದು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ, ತಾಂತ್ರಿಕವಾಗಿ ತನಿಖೆ ನಡೆಸಿದಾಗ ಚೇತನ್ ಹಾಗೂ ಸಿಯಾ ಮಧ್ಯೆ ಒಂದು ವರ್ಷದಿಂದ ಸಂಬಂಧವಿದ್ದಿದ್ದು ಬೆಳಕಿಗೆ ಬಂದಿದೆ. ಸಿಯಾ ಹಾಗೂ ಕೇತನ್ ವಾಹನದ ಚಲನವಲನ. ಉರಿಬಿಸಿಲಲ್ಲೂ ಜಾಕೆಟ್ ಧರಿಸಿದ್ದ ಬಗ್ಗೆ ಗಮನ ಸೆಳೆಯಿತು. ಇದು ಪೊಲೀಸರ ತನಿಖೆಗೆ ಮತ್ತಷ್ಟು ಪುಷ್ಠಿಯನ್ನು ನೀಡಿತ್ತು.
ಸಿಯಾ, ಚೇತನ್ ಸಂಬಂಧದ ಬಗ್ಗೆ ಅವರಿಗೆ ಗೊತ್ತಿತ್ತು
ಸಿಯಾ ಮತ್ತು ಚೇತನ್ ನಡುವಿನ ಸಂಬಂಧ ಆಕೆಯ ಪೋಷಕರಿಗೆ ತಿಳಿದಿತ್ತು. ಆದರೆ, ಬೇಕಂತಲೆ ನಮ್ಮ ಮಗನಿಗೆ ಕೊಟ್ಟು ಮದುವೆ ಮಾಡಲು ನೋಡಿದರು ಎಂದು ಕೇತನ್ ಕುಟುಂಬ ಆರೋಪಿಸಿದೆ.
2004 ಕರೆ, 238 ಗಂಟೆ ಮಾತು
ಚೇತನ್ ಚೌಧರಿ ಹಾಗೂ ಸಿಯಾಳ ಫೋನ್ ಕರೆ ವೀಕ್ಷಿಸಿದಾಗ ಇಬ್ಬರ ನಡುವೆ ಕಳೆದ ಆರು ತಿಂಗಳಲ್ಲಿ 2004 ಬಾರಿ ಕರೆ ಮಾಡಿದ್ದಾರೆ. ಒಟ್ಟು 238 ಗಂಟೆ ಮಾತಾನಾಡಿರುವುದು ಬೆಳಕಿಗೆ ಬಂದಿದೆ.ಈ ಸಂಭಾಷಣೆಯೂ ಕೊಲೆ ಮಾಡುವ ಸಲುವಾಗಿ ನಡೆಸಿದ ಕರೆಗಳು ಎನ್ನುವುದನ್ನು ಪೊಲೀಸರು ಶಂಕಿಸಿದ್ದಾರೆ. ಸದ್ಯ ಸಿಯಾ ಮತ್ತು ಚೇತನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜೂನ್ 29ರವರೆಗೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಘಟನೆ ನಡೆದ ದಿನ ಸಿಯಾ ಬೆಳಿಗ್ಗೆ 7 ರಿಂದ ಸಂಜೆ 5:40ವರೆಗೂ ಮೊಬೈಲ್ ಬಳಕೆ ಮಾಡಿರಲಿಲ್ಲ. ಚೇತನ್ ಸಹ ಫೋನ್ ಅನ್ನು ಅಂಗಡಿಯಲ್ಲೇ ಬಿಟ್ಟು, ತನ್ನ ಅಂಗಡಿಯವನೊಬ್ಬನ ಮೊಬೈಲ್ನಲ್ಲಿ ಸಿಯಾಳಿಗೆ ಕರೆ ಮಾಡಿ ತೆರಳಿದ್ದ ಎನ್ನುವುದು ತಿಳಿದುಬಂದಿದೆ, (ಏಜೆನ್ಸೀಸ್).