ಸಿಎಂ ಸರ್ ಇನ್ನೆಷ್ಟು ದಿನ ನಾವು ಅಡುಗೆ ಮಾಡಿಕೊಂಡಿರಬೇಕು... ಸಂಚಲನ ಮೂಡಿಸಿದ ವಿದ್ಯಾರ್ಥಿನಿಯ ಪತ್ರ! Student Writes Letter To CM
- ಚಂದ್ರನತ್ತ ಹೋಗುವ ದಿನಗಳು ಬಂದಿದ್ದರೂ ನಮ್ಮ ಸಮಾಜದಲ್ಲಿ ಇಂದಿಗೂ ಲಿಂಗ ತಾರತಮ್ಯ ಇದೆ
- ಪರಿಸ್ಥಿತಿ ಈಗ ಸ್ವಲ್ಪ ಸುಧಾರಿಸಿದ್ದರೂ ಲಿಂಗ ಸಮಾನತೆಯನ್ನು ಸಂಪೂರ್ಣ ಸಾಧಿಸಿಲ್ಲ
- ತೆಲಂಗಾಣದ ಇಂಟರ್ ಬೋರ್ಡ್ ಇಂಗ್ಲಿಷ್ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ವಿವಾದ ಸ್ವರೂಪ ಪಡೆದಿವೆ
- ಲಿಂಗ ತಾರತಮ್ಯವನ್ನು ಪ್ರಶ್ನಿಸಿ ಪಿಯು ವಿದ್ಯಾರ್ಥಿನಿ ಸಿಎಂ ರೇವಂತ್ ರೆಡ್ಡಿಗೆ ಬರೆದ ಪತ್ರ ವೈರಲ್ ಆಗಿದೆ
Student Writes Letter To CM: ರಾಕೆಟ್‌ನಲ್ಲಿ ಚಂದ್ರನತ್ತ ಹೋಗುವ ದಿನಗಳು ಬಂದಿದ್ದರೂ ನಮ್ಮ ಸಮಾಜದಲ್ಲಿ ಇಂದಿಗೂ ಲಿಂಗ ತಾರತಮ್ಯ ಮುಂದುವರೆದಿದೆ. ಹಿಂದಿನದಕ್ಕೆ ಹೋಲಿಸಿದರೆ ಪರಿಸ್ಥಿತಿ ಈಗ ಸ್ವಲ್ಪ ಸುಧಾರಿಸಿದ್ದರೂ ಲಿಂಗ ಸಮಾನತೆಯನ್ನು ಸಂಪೂರ್ಣ ಸಾಧಿಸಿಲ್ಲ ಅನ್ನೋದು ಕಹಿ ಸತ್ಯ. ಕನಿಷ್ಠ ಇಂದಿನ ಪೀಳಿಗೆಯ ನಾಗರಿಕರಿಗೂ ಸಮಾನತೆಯ ಪಾಠ ಮಾಡುತ್ತಿಲ್ಲ ಮತ್ತು ತಿಳುವಳಿಕೆ ಮೂಡಿಸುತ್ತಿಲ್ಲ ಅನ್ನೋದಕ್ಕೆ ತೆಲಂಗಾಣದಲ್ಲಿ ನಡೆದ ಈ ಘಟನೆಯೇ ತಾಜಾ ಸಾಕ್ಷಿ.
ತೆಲಂಗಾಣದಲ್ಲಿ ಇತ್ತೀಚಿಗೆ ನಡೆದ ಇಂಟರ್ ಬೋರ್ಡ್ ಇಂಗ್ಲಿಷ್ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ವಿವಾದಕ್ಕೆ ಕಾರಣವಾಗಿವೆ. ಸಮಾನತೆಯನ್ನು ಕಲಿಸಬೇಕಾದ ಪುಸ್ತಕಗಳಲ್ಲಿಯೇ ತಾರತಮ್ಯವನ್ನು ಪ್ರೋತ್ಸಾಹಿಸುವಾಗ ಸಮಾಜದಲ್ಲಿ ಬದಲಾವಣೆ ಸಾಧ್ಯವೇ? ಏನಿದು ಸಿಎಂ ಸರ್? ಹುಡುಗಿಯರು ಕೇವಲ ಅಡುಗೆಗೆ ಮಾತ್ರ ಸೀಮಿತವೇ? ಅಡುಗೆ ಮಾಡುವುದು ಕೇವಲ ಮಹಿಳೆಯರ ಕೆಲಸವೇ? ತಮ್ಮ ಭವಿಷ್ಯ ಮತ್ತು ವೃತ್ತಿಜೀವನದ ಬಗ್ಗೆ ಕನಸು ಕಾಣುವ ಹಕ್ಕು ಹುಡುಗರಿಗೆ ಮಾತ್ರ ಇದೆಯೇ? ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಿಮಾ ಕೀರ್ತನಾ, ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ. ಈ ಪತ್ರ ಇದೀಗ ತೆಲಂಗಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಏನಿದು ವಿವಾದ?
ತೆಲಂಗಾಣ ಇಂಟರ್ ಬೋರ್ಡ್ ಇತ್ತೀಚೆಗೆ ಇಂಗ್ಲಿಷ್ ಪರೀಕ್ಷೆಯನ್ನು ನಡೆಸಿತು. ಇದರಲ್ಲಿ ಸಂಭಾಷಣೆ ಬರೆಯುವ ವಿಭಾಗದಲ್ಲಿ ನೀಡಲಾದ ಪ್ರಶ್ನೆಗಳು ವಿವಾದಕ್ಕೆ ಕಾರಣವಾಗಿವೆ. ಆ ಪ್ರಶ್ನೆಗಳು ಹೇಗಿತ್ತು ಅಂದರೆ, ತನ್ನ ಮಗಳಿಗೆ ಅಡುಗೆ ಕಲಿಸಲು ಬಯಸುವ ತಾಯಿ ಮತ್ತು ಮಗಳ ನಡುವಿನ ಸಂಭಾಷಣೆಯ ಬಗ್ಗೆ ಬರೆಯಿರಿ ಎಂದು ಕೇಳಲಾಗಿತ್ತು. ಇಷ್ಟೇ ಇದ್ದರೆ ವಿವಾದವಾಗುತ್ತಿರಲಿಲ್ಲ, ಅದೇ ಸಂಭಾಷಣೆ ವಿಭಾಗದಲ್ಲಿ ಇನ್ನೊಂದು ಆಯ್ಕೆಯಾಗಿ, ತನ್ನ ಮಗನ ಭವಿಷ್ಯದ ಯೋಜನೆಗಳ ಬಗ್ಗೆ ಕೇಳುವ ತಂದೆ ಮತ್ತು ಮಗನ ನಡುವಿನ ಸಂಭಾಷಣೆಯ ಬಗ್ಗೆ ಬರೆಯಲು ಕೇಳಲಾಯಿತು. ಹೀಗಾಗಿ, ಈ ಎರಡು ಪ್ರಶ್ನೆಗಳಲ್ಲಿನ ತಾರತಮ್ಯ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಕನಿಷ್ಠ ಕೌಶಲ್ಯ
ಇಂಟರ್ ಸೆಕೆಂಡರಿ ವಿದ್ಯಾರ್ಥಿನಿಯಾಗಿರುವ ಕೀರ್ತನಾ, ಪರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ನೋಡಿ ಆಶ್ಚರ್ಯಚಕಿತರಾದರು. ಈ ಲಿಂಗ ತಾರತಮ್ಯವನ್ನು ಸರ್ಕಾರದ ಗಮನಕ್ಕೆ ತರಲು ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಪತ್ರ ಬರೆಯಲು ನಿರ್ಧರಿಸಿದರು. ಅದರಂತೆ ಪತ್ರ ಬರೆದ ಕೀರ್ತನಾ, ತಮ್ಮ ಪತ್ರದಲ್ಲಿ ಹಲವಾರು ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಅಡುಗೆ ಮಾಡುವುದು ಕೇವಲ ಮಹಿಳೆಯರಿಗೆ ಮಾತ್ರ ಇರುವ ಕೆಲಸವಲ್ಲ. ಇದು ಮಹಿಳೆಯರು ಮತ್ತು ಪುರುಷರು ಇಬ್ಬರೂ ತಿಳಿದುಕೊಳ್ಳಬೇಕಾದ ಕನಿಷ್ಠ ಕೌಶಲ್ಯ ಎಂದಿದ್ದಾರೆ.
ಎಲ್ಲರನ್ನೂ ಯೋಚಿಸುವಂತೆ ಮಾಡುತ್ತಿದೆ
ಅಷ್ಟೇ ಅಲ್ಲದೆ, ಹುಡುಗಿಯರನ್ನು ಅಡುಗೆಗೆ ಸೀಮಿತಗೊಳಿಸುವುದು ಮತ್ತು ಹುಡುಗರು ಮಾತ್ರ ವೃತ್ತಿಜೀವನವನ್ನು ಹೊಂದಿರಬೇಕಾದ ಪ್ರಶ್ನೆಗಳನ್ನು ಕೇಳುವುದು ಸರಿಯಾದ ಮಾರ್ಗವೇ? ಈ ಸಿದ್ಧಾಂತವು 2026 ರಲ್ಲಿಯೂ ಮುಂದುವರಿಯುತ್ತದೆಯೇ? ಎಂದು ಕೀರ್ತನಾ ಅವರು ಪ್ರಶ್ನೆ ಮಾಡಿರುವ ರೀತಿಯನ್ನು ನೋಡಿದರೆ, ಇಂದಿಗೂ ತಾರತಮ್ಯ ಮುಂದುವರಿದಿರುವುದು ಸಮಾಜದ ವೈಫಲ್ಯವೋ ಅಥವಾ ಶಿಕ್ಷಣ ವ್ಯವಸ್ಥೆಯ ವೈಫಲ್ಯವೋ? ಎಂದು ಎಲ್ಲರನ್ನೂ ಯೋಚಿಸುವಂತೆ ಮಾಡುತ್ತಿದೆ.
ಅಪ್ಪ-ಅಮ್ಮ ಇಬ್ಬರೂ ಒಟ್ಟಿಗೆ ಅಡುಗೆ ಮಾಡ್ತಾರೆ
ಅಂದಹಾಗೆ, ಮಹಿಮಾ ಕೀರ್ತನಾ ಕಾಚೆಗುಡ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಇದಲ್ಲದೆ, ಈಕೆ ರಾಷ್ಟ್ರಮಟ್ಟದ ರೈಫಲ್ ಶೂಟರ್. 2023 ರಲ್ಲಿ ತೆಲಂಗಾಣ ರಾಜ್ಯ SGFI ಚಾಂಪಿಯನ್ ಆದರು. ತಾವು ಬರೆದ ಪತ್ರದಲ್ಲಿ ತಮ್ಮ ವಿಷಯಗಳನ್ನೂ ಕೀರ್ತನಾ ಉಲ್ಲೇಖಿಸಿದ್ದಾರೆ. ತಾನೊಬ್ಬ ಶೂಟರ್ ಮತ್ತು ಭವಿಷ್ಯದಲ್ಲಿ ವಕೀಲೆಯಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ಮನೆಯಲ್ಲಿ ನಮ್ಮ ಅಪ್ಪ-ಅಮ್ಮ ಇಬ್ಬರೂ ಒಟ್ಟಿಗೆ ಅಡುಗೆ ಮಾಡುತ್ತಾರೆ ಅಂತಾನೂ ಹೇಳಿದ್ದಾರೆ.
ಲಿಂಗ ತಾರತಮ್ಯಕ್ಕೆ ಅವಕಾಶವಿರಬಾರದು
ಸಮಾಜದಲ್ಲಿ ಬದಲಾವಣೆ ತರಲು ಬಯಸುವ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಇಂತಹ ಪ್ರಶ್ನೆಗಳಿಂದ ಹಿಂದಕ್ಕೆ ತಳ್ಳುತ್ತಿದೆ ಎಂದು ಕೀರ್ತನಾ ವಿಷಾದ ವ್ಯಕ್ತಪಡಿಸಿದರು. ಅಂತಹ ಪಠ್ಯಕ್ರಮವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಪುಸ್ತಕಗಳಲ್ಲಿ ಯಾವುದೇ ಕಾರಣಕ್ಕೂ ಲಿಂಗ ತಾರತಮ್ಯಕ್ಕೆ ಅವಕಾಶವಿರಬಾರದು ಎಂದು ಕೀರ್ತನಾ ಹೇಳಿದ್ದಾರೆ. ಇದೀಗ ಕೀರ್ತನಾ ಅವರು ಬರೆದ ಪತ್ರದ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಪತ್ರಕ್ಕೆ ಸಿಎಂ ರೇವಂತ್ ರೆಡ್ಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).