Naughty Boy Rocket | ಈ ರಾಕೆಟ್‌ಗೆ 'ನಾಟಿ ಬಾಯ್' ಅನ್ನೋದ್ಯಾಕೆ ಗೊತ್ತಾ..? 
ದೇಶ

ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಬರೆದ ಇಸ್ರೋ!...ಈ ರಾಕೆಟ್‌ಗೆ 'ನಾಟಿ ಬಾಯ್' ಅನ್ನೋದ್ಯಾಕೆ ಗೊತ್ತಾ..? | Naughty Boy Rocket

Naughty Boy Rocket: ಸೆಪ್ಟೆಂಬರ್ 4 ರಂದು ಮಧ್ಯರಾತ್ರಿ 2:55 ರ ಸಮಯ, ದೇಶದ ಹೆಚ್ಚಿನ ಜನರು ಗಾಢ ನಿದ್ರೆಯಲ್ಲಿದ್ದಾಗ ಆಂಧ್ರಪ್ರದೇಶದ ಶ್ರೀಹರಿಕೋಟಾ ದ್ವೀಪದಲ್ಲಿ ವಿಭಿನ್ನ ಇತಿಹಾಸವೊಂದು ರೂಪುಗೊಳ್ಳುತ್ತಿತ್ತು. ದೇಶದಾದ್ಯಂತ ಹರಡಿರುವ ಮಿಷನ್ ಕಂಟ್ರೋಲ್ ರೂಮ್‌ಗಳು, ಉಡಾವಣಾ ಸಂಕೀರ್ಣಗಳು ಮತ್ತು ಟ್ರ್ಯಾಕಿಂಗ್ ಕೇಂದ್ರಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸುಮಾರು 16,500 ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ದಣಿವು, ಒತ್ತಡ ಮತ್ತು ದೇಶದ ನಿರೀಕ್ಷೆಗಳನ್ನು ಎದುರಿಸುತ್ತಾ ಕಾರ್ಯನಿರ್ವಹಿಸುತ್ತಿದ್ದರು. ಸರಿ 19 ನಿಮಿಷಗಳ ನಂತರ ಅಂದರೆ ಮುಂಜಾನೆ 3:14 ಕ್ಕೆ ಅವರು ಸಂಭ್ರಮಿಸಲು ಸಂಪೂರ್ಣ ಕಾರಣವೊಂದು ಸಿಕ್ಕಿತ್ತು. ಅಲ್ಲಿನ ಎಲ್ಲರ ಮುಖದಲ್ಲೂ ನಗು ಮತ್ತು ಹರ್ಷೋದ್ಗಾರಗಳು ಮನೆಮಾಡಿದ್ದವು.
ಈ ಯಶಸ್ಸನ್ನು ಕೊಂಡಾಡಿದ ಕೇಂದ್ರ ವಿಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಮತ್ತೊಂದು ದೈತ್ಯ ಜಿಗಿತ, ಜಿಎಸ್‌ಎಲ್‌ವಿ-ಎಫ್17/ಇಒಎಸ್-05 ಯಶಸ್ವಿ ಉಡಾವಣೆಗಾಗಿ ಇಸ್ರೋ ತಂಡಕ್ಕೆ ಅಭಿನಂದನೆಗಳು. ಇಒಎಸ್-05 ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹವಾಗಿದ್ದು, ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾಗಿದೆ. ಇದು ದೃಶ್ಯ, ಅತಿನೇರಳೆ (ಇನ್‌ಫ್ರಾರೆಡ್), ಮಲ್ಟಿ-ಸ್ಪೆಕ್ಟ್ರಲ್ ಮತ್ತು ಹೈಪರ್‌ಸ್ಪೆಕ್ಟ್ರಲ್ ಬ್ಯಾಂಡ್‌ಗಳಲ್ಲಿ ಸುಧಾರಿತ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗಲಿದೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ತನ್ನ ನಂಬಿಕಸ್ಥ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್‌ವಿ) ರಾಕೆಟ್‌ಗಳ ಸರಣಿ ವಿಫಲತೆಯ ಕಠಿಣ ಹಂತದ ನಂತರ ಭಾರತದ ಬಾಹ್ಯಾಕಾಶ ಸಂಸ್ಥೆ ಮತ್ತೆ ಯಶಸ್ಸಿನ ಉಡಾವಣಾ ಪಥಕ್ಕೆ ಮರಳಿದೆ. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‌ಎಲ್‌ವಿ-ಎಫ್17) ಇಒಎಸ್-05 ಭೂ ವೀಕ್ಷಣಾ ಉಪಗ್ರಹವನ್ನು ಬಾಹ್ಯಾಕಾಶದತ್ತ ಯಶಸ್ವಿಯಾಗಿ ಒಯ್ದಾಗ ಅಲ್ಲಿ ನಿರಾಳತೆ, ಕರತಾಡನ ಮತ್ತು ನವೀಕೃತ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಈ ಮಿಷನ್ ಕೇವಲ ಮತ್ತೊಂದು ಉಡಾವಣೆಯಾಗಿರಲಿಲ್ಲ, ಹಿನ್ನಡೆಗಳಿಂದ ಚೇತರಿಸಿಕೊಂಡು, ಸಂಘಟಿತವಾಗಿ ಮತ್ತೆ ಕಂಬ್ಯಾಕ್ ಮಾಡುವ ಸಾಮರ್ಥ್ಯ ಇಸ್ರೋಗೆ ಇನ್ನೂ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು.

ಇಸ್ರೋದಲ್ಲೊಬ್ಬ ನಾಟಿ ಬಾಯ್!...

ಭಾರತದ ಉಡಾವಣಾ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಏಳುತ್ತಿದ್ದ ಸಮಯದಲ್ಲಿ ಈ ಯಶಸ್ಸು ಬಂದಿರುವುದು ಅತ್ಯಂತ ಮಹತ್ವದ್ದಾಗಿದೆ. ಇಸ್ರೋದ ಕುದುರೆ ಎಂದೇ ಪರಿಗಣಿಸಲ್ಪಟ್ಟಿದ್ದ ಪಿಎಸ್‌ಎಲ್‌ವಿ 2025 ಮತ್ತು 2026 ರ ಜನವರಿಯಲ್ಲಿ ಸರಣಿ ಹಿನ್ನಡೆ ಅನುಭವಿಸಿತ್ತು. ಮತ್ತೆ ಹಾರಾಟಕ್ಕೆ ಅನುಮತಿ ನೀಡುವ ಮೊದಲು ಎಂಜಿನಿಯರ್‌ಗಳು ಪರೀಕ್ಷೆಗಳು ಮತ್ತು ತಿದ್ದುಪಡಿ ಕ್ರಮಗಳನ್ನು ಮುಂದುವರಿಸುತ್ತಿರುವುದರಿಂದ ಪಿಎಸ್‌ಎಲ್‌ವಿ ಸರಣಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ರಾಕೆಟ್‌ಗಳು ಅತ್ಯಂತ ಸಂಕೀರ್ಣವಾಗಿದ್ದು, ಅದಕ್ಕಾಗಿಯೇ ಇದನ್ನು ಇಂದಿಗೂ ರಾಕೆಟ್ ಸೈನ್ಸ್ ಎಂದು ಕರೆಯಲಾಗುತ್ತದೆ. ಶ್ರೀಹರಿಕೋಟಾದಿಂದ ಬೃಹತ್ ರಾಕೆಟ್ ಒಂದರ 107ನೇ ಉಡಾವಣೆ ಇದಾಗಿತ್ತು.

ಇದು 1990 ರ ಕಥೆ!...

ಇಂತಹ ಪರಿಸ್ಥಿತಿಯಲ್ಲಿ, ಜಿಎಸ್‌ಎಲ್‌ವಿ ಮಾರ್ಕ್ II ಮೇಲಿನ ಜವಾಬ್ದಾರಿ ಹೆಚ್ಚಾಗಿತ್ತು. ಇದನ್ನು ಇಸ್ರೋದಲ್ಲಿ ಪ್ರೀತಿಯಿಂದ ಹಾಗೂ ಕೆಲವೊಮ್ಮೆ ಆತಂಕದಿಂದ ನಾಟಿ ಬಾಯ್ (ತಂಟೆಕೋರ) ಎಂದು ಕರೆಯಲಾಗುತ್ತಿತ್ತು. 19 ಉಡಾವಣೆಗಳಲ್ಲಿ ಈ ರಾಕೆಟ್ 6 ಬಾರಿ ಹಿನ್ನಡೆ ಅನುಭವಿಸಿತ್ತು. ಆದರೆ ವಿಪರ್ಯಾಸವೆಂದರೆ, ಇದೇ ರಾಕೆಟ್ ಇಂದು ಭಾರತದ ತಾಂತ್ರಿಕ ಸ್ವಾವಲಂಬನೆಯ ಅತ್ಯಂತ ಪ್ರಮುಖ ಸಂಕೇತವಾಗಿ ಹೊರಹೊಮ್ಮಿದೆ. 1990 ರ ದಶಕದ ಆರಂಭದಲ್ಲಿ ಭಾರೀ ತೂಕದ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತಕ್ಕೆ ಕ್ರಯೋಜೆನಿಕ್ ಎಂಜಿನ್ ತಂತ್ರಜ್ಞಾನದ ತುರ್ತು ಅಗತ್ಯವಿತ್ತು. ಭಾರತ ಆರಂಭದಲ್ಲಿ ರಷ್ಯಾದ ಸಹಾಯವನ್ನು ಕೋರಿತು. ಆದರೆ ಅಮೆರಿಕ ನೇತೃತ್ವದ ಜಾಗತಿಕ ರಾಜಕೀಯ ಒತ್ತಡಗಳಿಂದ ತಂತ್ರಜ್ಞಾನ ಸಿಗಲಿಲ್ಲ.
ಈ ಹಿನ್ನಡೆಯ ಬದಲಿಗೆ, ಇಸ್ರೋ ವಿಜ್ಞಾನಿಗಳು ಅತ್ಯಂತ ಕಷ್ಟಕರವಾದ ಸ್ವದೇಶಿ ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳಲು 20 ವರ್ಷಗಳನ್ನು ವ್ಯಯಿಸಿದರು. ಸಾಲು ಸಾಲು ವಿಫಲತೆಗಳು ಎದುರಾದರೂ ಭಾರತ ದೃತಿಗೆಡದೆ ಶ್ರಮಿಸಿತು. ಆ ನಿರಂತರ ಶ್ರಮವೇ ಜಿಎಸ್‌ಎಲ್‌ವಿ ಮಾರ್ಕ್ II ಅನ್ನು ಇಸ್ರೋದ ಕಿರೀಟದ ರತ್ನವನ್ನಾಗಿ ಪರಿವರ್ತಿಸಿತು. ತಂತ್ರಜ್ಞಾನ ನಿರಾಕರಣೆಯು ಭಾರತದ ಬಾಹ್ಯಾಕಾಶ ಪಯಣವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಇಂದಿನ ಪ್ರತಿಯೊಂದು ಯಶಸ್ವಿ ಹಾರಾಟವೂ ಸಾಕ್ಷಿಯಾಗಿದೆ.

ಇನ್ನು ಹಸಿರಾಗಿದ್ದವು ಹಳೆಯ ನೆನಪುಗಳು!

ಆಗಸ್ಟ್ 2021 ರಲ್ಲಿ ಇಸ್ರೋ ಸಂಸ್ಥೆಯು ಜಿಎಸ್‌ಎಲ್‌ವಿ-ಎಫ್10 ರಾಕೆಟ್ ಮೂಲಕ ಜಿಎಸ್‌ಎಟಿ-1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಯತ್ನಿಸಿದಾಗ ಕ್ರಯೋಜೆನಿಕ್ ಇಂಜಿನ್ ಕೊನೆಯ ಹಂತದಲ್ಲಿ ವಿಫಲವಾಗಿತ್ತು. ಇದರಿಂದಾಗಿ ಆಕಾಶದ ಕಣ್ಣು ನೆಡುವ ಭಾರತದ ಕನಸು ಇನ್ನಷ್ಟು ದಿನ ಕಾಯಬೇಕಾಯಿತು. ಇಒಎಸ್-05 ಎನ್ನುವುದು ಆ ಅಸಂಪೂರ್ಣ ಕನಸಿನ ನೆರವೇರಿಕೆಯಾಗಿದೆ. ಈ ಬಾರಿ ರಾಕೆಟ್ ಅಂದುಕೊಂಡಂತೆಯೇ ಯಶಸ್ವಿಯಾಗಿ ಕೆಲಸ ಮಾಡಿದೆ. ಉಪಗ್ರಹವು ಭೂಮಿಯಿಂದ ಸುಮಾರು 36,000 ಕಿಲೋಮೀಟರ್ ಎತ್ತರದಲ್ಲಿರುವ ಜಿಯೋಸಿಂಕ್ರೋನಸ್ ಕಕ್ಷೆಯತ್ತ ತನ್ನ ಪಯಣ ಬೆಳೆಸಿದೆ.
ಸಾಮಾನ್ಯವಾಗಿ ಇತರ ಭೂ ವೀಕ್ಷಣಾ ಉಪಗ್ರಹಗಳು ಭೂಮಿಗೆ ಹತ್ತಿರದಲ್ಲಿದ್ದುಕೊಂಡು ಸುತ್ತುತ್ತವೆ ಮತ್ತು ನಿರ್ದಿಷ್ಟ ಪ್ರದೇಶದ ಫೋಟೋಗಳನ್ನು ಮಾತ್ರ ನೀಡುತ್ತವೆ. ಆದರೆ ಇಒಎಸ್-05 ಒಂದೇ ಕಡೆ ಸ್ಥಿರವಾಗಿದ್ದುಕೊಂಡು ನಿರಂತರ ವಿಡಿಯೋ ರೂಪದಲ್ಲಿ ಕಣ್ಗಾವಲು ವಹಿಸುವ ಭರವಸೆ ನೀಡಿದೆ. ಬಾಹ್ಯಾಕಾಶದ ಎತ್ತರದ ಸ್ಥಾನದಿಂದ, ಇಒಎಸ್-05 ಭಾರತೀಯ ಉಪಖಂಡ, ಸುತ್ತಮುತ್ತಲಿನ ಸಾಗರಗಳು, ಚಂಡಮಾರುತಗಳು, ಪ್ರವಾಹಗಳು, ಕಾಡ್ಗಿಚ್ಚು, ಕೃಷಿ, ಪರಿಸರ ಬದಲಾವಣೆಗಳು ಮತ್ತು ಆಯಕಟ್ಟಿನ ಸೂಕ್ಷ್ಮ ಪ್ರದೇಶಗಳನ್ನು ನಿರಂತರವಾಗಿ ವೀಕ್ಷಿಸುತ್ತದೆ.

ಆ ತುಂಟ ಈಗ ಜಾಣನಾಗಿದ್ದಾನೆ!...

ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ನೂತನ ನಿರ್ದೇಶಕ ಡಿ.ಕೆ. ಸಿಂಗ್, ಇಒಎಸ್-05 ಅನ್ನು ಆಕಾಶದಲ್ಲಿ ಮತ್ತೊಂದು ಕಣ್ಣು ಎಂದು ಕರೆದಿದ್ದಾರೆ. ಉಡಾವಣೆಗೆ ಸಾಕ್ಷಿಯಾಗಲು ಭಾರತೀಯ ನೌಕಾಪಡೆ ಮತ್ತು ವಾಯುಪಡೆಯ ಹಿರಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಿರಂತರ ವೀಕ್ಷಣಾ ಸಾಮರ್ಥ್ಯವು ಸಾಮುದ್ರಿಕ ಅರಿವನ್ನು ಬಲಪಡಿಸುತ್ತದೆ, ವಿಪತ್ತು ಸ್ಪಂದನೆಯನ್ನು ಸುಧಾರಿಸುತ್ತದೆ ಮತ್ತು ರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಕಳೆದ ವರ್ಷವಷ್ಟೇ, ಇದೇ ರಾಕೆಟ್ ಕುಟುಂಬವು ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ಉಪಗ್ರಹವಾದ ನಿಸಾರ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
ಈಗ 2,376 ಕೆಜಿ ತೂಕದ ಇಒಎಸ್-05 ಉಪಗ್ರಹವು ನಿರೀಕ್ಷೆಗಿಂತ ಉತ್ತಮ ಕಕ್ಷೆಯನ್ನು ತಲುಪಿದೆ. ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು, ಕಠಿಣ ಪರಿಶ್ರಮಕ್ಕೆ ಸಿಗುವ ಪ್ರತಿಫಲ ಅಂದರೆ ಇನ್ನಷ್ಟು ಕೆಲಸ ಎಂದು ಹೇಳಿದ್ದಾರೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಇನ್ನೂ ಆರು ಉಡಾವಣೆಗಳನ್ನು ಯೋಜಿಸಲಾಗಿದೆ. ಮೊದಲ ಮಾನವರಹಿತ ಗಗನಯಾನ ಮಿಷನ್ ಅನ್ನು ವರ್ಷಾಂತ್ಯದ ಮೊದಲು ಗುರಿಯಾಗಿಸಲಾಗಿದೆ.
ಸೆಪ್ಟೆಂಬರ್ 4 ರ ಮುಂಜಾನೆ, ದೇಶದ ಹೆಚ್ಚಿನ ಭಾಗಗಳು ಎಚ್ಚರಗೊಳ್ಳಲು ಪ್ರಾರಂಭಿಸುತ್ತಿದ್ದಾಗ, ಇಸ್ರೋ ಈಗಾಗಲೇ ವರ್ಷದ ತನ್ನ ಅತ್ಯಂತ ಪ್ರಮುಖ ಕಾರ್ಯಯೋಜನೆಗಳಲ್ಲಿ ಒಂದನ್ನು ಪೂರ್ಣಗೊಳಿಸಿತ್ತು. ಆ ನಾಟಿ ಬಾಯ್ ಬೆಳೆದು ದೊಡ್ಡವನಾಗಿದ್ದ. ಮತ್ತು ಈ ಮುಂಜಾನೆ, ಅವನು ನಿಜಕ್ಕೂ ಒಬ್ಬ ಜಾಣ ಹುಡುಗನಂತೆ ನಡೆದುಕೊಂಡಿದ್ದ (ಏಜೆನ್ಸೀಸ್).