RRvsCSK | ರಾಜಸ್ಥಾನ ರಾಯಲ್ಸ್ ತಂಡದ ನಾಯಕ  
ದೇಶ

ಇಂತಹ ಆಟಗಾರ ತಂಡದಲ್ಲಿರುವುದೇ ನನ್ನ ಸೌಭಾಗ್ಯ..ವೈಭವ್​ಗೆ 14 ರ ಗ್ಯಾರಂಟಿ ನೀಡಿದ ನಾಯಕ ಪರಾಗ್​ | RRvsCSK

RRvsCSK: ಸೋಮವಾರ ಗುವಾಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು, ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದವರು ಕೇವಲ 15 ವರ್ಷದ ದೊಡ್ಡ ಪ್ರತಿಭೆ ವೈಭವ್ ಸೂರ್ಯವಂಶಿ. 
ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ವೈಭವ್ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕ ದಾಖಲಿಸಿದರು. ಈ ಅಬ್ಬರದ ಆಟವನ್ನು ಕಂಡು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಕೂಡ ದಿಗ್ಭ್ರಮೆಗೊಂಡಿದ್ದು, ಪಂದ್ಯದ ಬಳಿಕ ಮಾತನಾಡಿದ ಪರಾಗ್​, ವೈಭವ್ ಪವರ್‌ಪ್ಲೇನಲ್ಲಿ ಸಿಎಸ್‌ಕೆ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ರೀತಿ ನಂಬಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಆತ ನನ್ನ ತಂಡದಲ್ಲಿರುವುದೇ ಸಂತೋಷ

ನೀವು ಈ ಟೂರ್ನಿಯ ಎಲ್ಲಾ 14 ಪಂದ್ಯಗಳನ್ನು ಆಡಲಿದ್ದೀರಿ, ಹೊರಗಿನ ವಿಚಾರಗಳು ಅಥವಾ ಮಾಧ್ಯಮಗಳ ಮಾತುಗಳಿಗೆ ಕಿವಿಗೊಡುವುದು ಬೇಡ ಎನ್ನುವ ಸಲಹೆಯನ್ನು ನಾನು ವೈಭವ್​ಗೆ ನೀಡಿದ್ದೆ, ಆತ ಬ್ಯಾಟಿಂಗ್ ಮಾಡುವುದನ್ನು ತುಂಬಾ ಇಷ್ಟಪಡುತ್ತಾನೆ, ಅವನಿಗೆ ಅವಕಾಶ ಸಿಕ್ಕರೆ ಏನು ಮಾಡಬಲ್ಲ ಎಂಬುದನ್ನು ತೋರಿಸುತ್ತಾನೆ ಎನ್ನುವುದನ್ನು ನಾನು ಈ ಮೊದಲೇ ಕೋಚ್​ಗೆ ಹೇಳಿದ್ದೆ ಎಂದರು.
ನಾಲ್ಕನೇ ಓವರ್ ವರೆಗೆ ನಾನು ಮತ್ತು ಧ್ರುವ್ ಜುರೆಲ್ ಪೆವಿಲಿಯನ್‌ನಲ್ಲಿ ಕುಳಿತಿದ್ದಾಗ, ವೈಭವ್ ಹೊಡೆತಗಳನ್ನು ನೋಡಿ ಭಯಭೀತರಾಗಿದ್ದೆವು. ಆತ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ದಾಳಿ ಹೇಗೆ ಮಾಡುತ್ತಿದ್ದಾನೆ ಎಂದು ನಮಗೆ ಆಶ್ಚರ್ಯವಾಯಿತು. ಅಂತಿಮವಾಗಿ ಇಂತಹ ಪ್ರತಿಭೆ ನನ್ನ ತಂಡದಲ್ಲಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಪರಾಗ್ ಹೆಮ್ಮೆಯಿಂದ ಹೇಳಿಕೊಂಡರು.

ಪಂದ್ಯದ ಸಾರಾಂಶ

ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜೇಮೀ ಓವರ್ಟನ್ ಜವಾಬ್ದಾರಿಯುತವಾಗಿ 43 ರನ್‌ಗಳನ್ನು ಗಳಿಸದಿದ್ದರೆ, ಸಿಎಸ್​ಕೆ 100 ರನ್‌ಗಳ ಗಡಿಯನ್ನೂ ದಾಟದೆ ಮುಖಭಂಗ ಅನುಭವಿಸುವ ಸಾಧ್ಯತೆಯಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ಯುವ ಆಟಗಾರರಾದ ವೈಭವ್​ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್​ರ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಕೇವಲ 12.1 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು(ಏಜೆನ್ಸೀಸ್​​).