Ajit Pawar | ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ( ಸಂಗ್ರಹ ಚಿತ್ರ)
ಮುಂಬೈ: ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ ಎಂಬ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ತಮ್ಮ ಮಾತಿನ ಕುರಿತು ಸ್ಪಷ್ಟನೆ ನೀಡಿದ್ದು, ಅದು ಬೆದರಿಕೆ ಅಲ್ಲ ಎಂದಿದ್ದಾರೆ.
ಶುಕ್ರವಾರ ಬಾರಾಮತಿ ತಹಸಿಲ್‌ನ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಡಿಸಿಎಂ ಅಜಿತ್, ತಮ್ಮ ಪಕ್ಷದ ಎಲ್ಲಾ ಅಭ್ಯರ್ಥಿಗಳು ಆಯ್ಕೆಯಾದರೆ ಮಾತ್ರ ತಾವು ನೀಡುವುದಾಗಿ ಹೇಳಿದ್ದ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗ ಹಲವು ಯೋಜನೆಗಳಿದ್ದು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿ ಮತ್ತು ಇಬ್ಬರೂ ಉಪಮುಖ್ಯಮಂತ್ರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಈ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿದರೆ, ಮಾಲೆಗಾಂವ್‌ನ ಅಭಿವೃದ್ಧಿಯಾಗಲಿದೆ ಎಂದಿದ್ದರು. ಸದ್ಯ ತಮ್ಮ ಹೇಳಿಕೆಯ ಕುರಿತಾಗಿ ವ್ಯಕ್ತವಾಗಿರುವ ಟೀಕೆಯಿಂದ ವಿಚಲಿತರಾದಂತೆ ಕಂಡು ಬಂದಿರುವ ಅಜಿತ್ ಪವಾರ್, ಭಾನುವಾರ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದು ಮಾಲೆಂಗಾವ್ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ನಾನು ಈಗಾಗಲೇ ಹೇಳಬೇಕಾದ್ದನ್ನು ಹೇಳಿದ್ದೇನೆ, ಈಗ ವಿರೋಧ ಪಕ್ಷಗಳ ಸರದಿ, ವಿರೋಧ ಮಾಡುವುದು ಸಾಂವಿಧಾನಿಕ ಹಕ್ಕು, ನಾನು ಸತ್ಯವನ್ನು ಹೇಳುವುದರಿಂದ ಟೀಕೆಗೆ ಪ್ರಾಮುಖ್ಯತೆ ನೀಡುವುದಿಲ್ಲ, ನಾನು ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತೇನೆ. ನಮ್ಮ ಆದ್ಯತೆ ಅಭಿವೃದ್ಧಿ, ಆ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಇಚ್ಛೆಯಾಗಿದೆ ಎಂದರು.
ತಾವು ನೀಡಿರುವ ಹೇಳಿಕೆ ಮತದಾರರನ್ನು ಬೆದರಿಸುವ ತಂತ್ರವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್, ಅದು ಹೇಗೆ ಬೆದರಿಕೆಯಾಗುತ್ತದೆ? ನೀವು ಬೇರೆ ಕಡೆಗಳಲ್ಲಿನ ಚುನಾವಣೆಗಳನ್ನು ನೋಡುತ್ತಿದ್ದೀರಿ. ಎಲ್ಲರೂ ಚುನಾವಣೆಗೆ ಮುನ್ನ ಭರವಸೆ ನೀಡುತ್ತಾರೆ, ಇದು ಸಾಮಾನ್ಯ ಪ್ರಕ್ರಿಯೆ ಎಂದರು. ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಪ್ರತಿ ಮನೆಯ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದರು, ಅದೇ ರೀತಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ, ಅದನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರ ಜನರಿಗೆ ಬಿಟ್ಟಿದ್ದು ಎಂದು ಹೇಳಿದರು.
ಏನಿದು ವಿವಾದ..?
ಪುಣೆ ಜಿಲ್ಲೆಯ ಬಾರಾಮತಿ ತೆಹ್ಸಿಲ್‌ನಲ್ಲಿ ಮಾಲೆಗಾಂವ್ ನಗರ ಪಂಚಾಯತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅಜಿತ್, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಾಯ ಮಾಡಿದರೆ, ಹಣದ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಮತದಾರರಿಗೆ ಭರವಸೆ ನೀಡಿದ್ದರು. ಒಂದು ವೇಳೆ ಜನರು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ನಾನು ಜನರನ್ನು ತಿರಸ್ಕರಿಸುತ್ತೇನೆ. ನಿಮ್ಮ ಬಳಿ ಮತಗಳಿವೆ, ನನ್ನ ಬಳಿ ಹಣವಿದೆ ಎಂದಿರುವುದಾಗಿ ವರದಿಯಾಗಿತ್ತು(ಏಜೆನ್ಸೀಸ್).