CJP Protest 
ದೇಶ

ಜೆನ್-ಜಿಗೆ ಸರ್ಕಾರ ಮಣಿದಿದ್ದು ಹೇಗೆ..?

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಮೊದಲಿಗೆ ಗಂಭೀರವಾಗಿ ಪರಿಗಣಿಸದ ಉದಾಸೀನ ಧೋರಣೆಯೇ ಕೇಂದ್ರ ಸರ್ಕಾರದ ಪಾಲಿಗೆ ಮುಳುವಾಯಿತು. ವಿದ್ಯಾರ್ಥಿ ಆಂದೋಲನ ದೇಶದ ಹಲವೆಡೆ ಹಬ್ಬುವವರೆಗೆ ತಟಸ್ಥವಾಗಿದ್ದ ಸರ್ಕಾರ, ಹೋರಾಟಕ್ಕೆ ದೊರೆತ ಬೆಂಬಲ ಮತ್ತು ಅದಕ್ಕೆ ಇನ್ನಿತರ ರಂಗಗಳು ಜತೆಯಾಗಿದ್ದನ್ನು ಕಂಡು, ಕೊನೆಗೂ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಪಡೆಯಿತು. ಈ ಹಿಂದೆ 2021ರಲ್ಲಿ ರೈತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು. ಮುಂಬರುವ ದಿನಗಳಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಯುವಕರ ಆಕ್ರೋಶ ಮುಂದುವರಿದರೆ ಕಷ್ಟಕರ ಎಂಬ ಅಭಿಪ್ರಾಯವನ್ನು ಎನ್ಡಿಎ ಮಿತ್ರಪಕ್ಷಗಳೇ ವ್ಯಕ್ತಪಡಿಸಿದವು.
ಯುವ ಮತಬ್ಯಾಂಕ್ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಕಷ್ಟ ಎಂಬ ಎಚ್ಚರಿಕೆಯೂ ಈ ಹಿಂದಿದೆ. ಅಲ್ಲದೆ, "ಯುವಕರ ಜತೆ ಸಂವಾದದ ಮಾರ್ಗ ಅನುಸರಿಸಿ' ಎಂದು ಆರೆಸ್ಸೆಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ಪರೋಕ್ಷವಾಗಿ ಸೂಚಿಸಿದರು. ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಕೂಡ ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಿದ್ದರು. ಹೀಗಾಗಿ, ಒತ್ತಡಕ್ಕೆ ಸಿಲುಕಿದ ಸರ್ಕಾರ ಮಣಿಯಲೇ ಬೇಕಾಯಿತು. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅದರ ಪರಿಣಾಮಗಳ ವಿವರ ಇಲ್ಲಿದೆ.

ಜಂತರ್-ಮಂತರ್ ಮೀರಿ ವ್ಯಾಪಿಸಿದ ಆಂದೋಲನ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನವದೆಹಲಿಯ ಜಂತರ್-ಮಂತರ್‌ನಲ್ಲಿ ಜೂನ್ 20ರಂದು ಆರಂಭಿಸಿದ ಪ್ರತಿಭಟನೆ, ಕೆಲವೇ ದಿನಗಳಲ್ಲಿ ದೇಶದ ಹಲವು ಭಾಗಗಳಿಗೆ ಹಬ್ಬಿತು. ಪ್ರತಿಭಟನೆ ಆರಂಭವಾದ ಎಂಟು ದಿನಗಳ ನಂತರ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆದರೆ, ಜುಲೈ 18ರಂದು ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನು ವಶಕ್ಕೆ ಪಡೆದು, ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಈ ಹೋರಾಟ ತಿರುವು ಪಡೆದುಕೊಂಡಿತು. ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಸಹಾನುಭೂತಿ ವ್ಯಕ್ತವಾಗಿ ಪ್ರತಿಭಟನಾ ಸ್ಥಳದಲ್ಲಿ ಜನರ ದಂಡೇ ಹರಿದುಬರತೊಡಗಿತು.
ಸಂಸತ್ ಚಲೋ ವೇಳೆ ಲಾಠಿಚಾರ್ಜ್: ಪ್ರತಿಭಟನಾಕಾರರು ಜುಲೈ 20ರಂದು ನಡೆಸಿದ ಸಂಸತ್ ಚಲೋ ವೇಳೆ ಭದ್ರತಾ ಪಡೆಗಳು ಲಾಠಿಚಾರ್ಜ್ ನಡೆಸಿದವು. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಈ ಘಟನೆಯನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಸಹ ವರದಿ ಮಾಡಿದವು. "ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯು, "ರಕ್ತ ಹರಿಯಿತು, ಲಾಠಿ ಬೀಸಲಾಯಿತು; ಆದಾಗ್ಯೂ ಪ್ರತಿಭಟನಾಕಾರರು ಹಿಂಜರಿಯಲಿಲ್ಲ' ಎಂದು ಬರೆಯಿತು. ಬ್ರಿಟನ್, ಜರ್ಮನಿ, ನೆದರ್ಲ್ಯಾಂಡ್ಸ್, ಐರ್ಲೆಂಡ್, ಕೆನಡಾ ಮತ್ತು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದರು. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಹೊರಗೆ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಲವೆಡೆಯಿಂದ ಸೃಷ್ಟಿಯಾದ ಒತ್ತಡ
ಜುಲೈ 21ರಂದು ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಪ್ರಧಾನಿ ನಿವಾಸದ ಎದುರು ದಿಢೀರ್ ಧರಣಿ ಕುಳಿತರು. ಈ ವೇಳೆ ಮಾತುಕತೆಗೆ ಬಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರಿಗೆ, "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೆ ಯಾವುದೇ ಚರ್ಚೆ ಸಾಧ್ಯವಿಲ್ಲ' ಎಂದು ರಾಹುಲ್ ಸ್ಪಷ್ಟಪಡಿಸಿದರು. ಇದರ ಬೆನ್ನಲ್ಲೇ ರಾಹುಲ್ ಸರಣಿ ಪತ್ರಿಕಾಗೋಷ್ಠಿ ನಡೆಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು. ಸಂಪೂರ್ಣ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಕಳೆದ ಒಂದು ವಾರದಿಂದ ಸಂಸತ್ತಿನ ಕಲಾಪ ಸಂಪೂರ್ಣ ಸ್ತಬ್ಧಗೊಂಡಿತ್ತು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಜುಲೈ 23ರಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, "ದೇಶದ ವಿವಿಧ ಭಾಗಗಳಿಂದ ಬಂದಿರುವ ಯುವ ವಿದ್ಯಾರ್ಥಿಗಳು ದೆಹಲಿಯ ಬೀದಿಗಳಲ್ಲಿ ದಿನಗಟ್ಟಲೇ ಹೋರಾಡುತ್ತಿರುವುದನ್ನು ನೋಡಲು ಬೇಸರವಾಗುತ್ತದೆ. ಯುವತಿಯರ ಮೇಲೆ ನಡೆದಿರುವ ಅಮಾನವೀಯ ವರ್ತನೆ ದುಃಖಕರ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದರೊಂದಿಗೆ ಪ್ರಸಿದ್ಧ ಕ್ರಿಕೆಟಿಗರು, ಬಾಲಿವುಡ್ ನಟ-ನಟಿಯರು, ದಕ್ಷಿಣ ಭಾರತದ ಚಿತ್ರರಂಗದ ತಾರೆಯರು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ಗಳು ಯುವಕರ ಹೋರಾಟಕ್ಕೆ ಕೈಜೋಡಿಸಿದರು. ಪ್ರಶ್ನೆಪತ್ರಿಕೆ ಸೋರಿಕೆಯು ಅತ್ಯಂತ ಗಂಭೀರ ವಿಚಾರ ಎಂದು ದನಿ ಎತ್ತಿದರು.
ಸಂಸತ್ ಚಲೋ ವೇಳೆ ನಡೆದ ಘಟನೆಯಿಂದ ಸರ್ಕಾರಕ್ಕೆ ಉಂಟಾದ ನಕಾರಾತ್ಮಕ ಇಮೇಜ್ ಕುರಿತು ಎನ್ಡಿಎ ಮೈತ್ರಿಕೂಟದ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. "ಈ ವಿಚಾರವನ್ನು ಇನ್ನೂ ಸೂಕ್ತವಾಗಿ ಬಗೆಹರಿಸಬಹುದಿತ್ತು. ಪರಿಸ್ಥಿತಿ ಕೈಮೀರಿ ಹೋಗಲು ಬಿಟ್ಟಿದ್ದು ಏಕೆ?' ಎಂದು ಕೆಲ ಸಂಸದರು ಪ್ರಶ್ನಿಸಿದರು. ಆಂಗ್ಲ ಪತ್ರಿಕೆಯೊಂದಿಗೆ ಮಾತನಾಡಿದ ಎನ್ಡಿಎ ಹಿರಿಯ ಸಂಸದರೊಬ್ಬರು, "ದುರದೃಷ್ಟವಶಾತ್ ಈ ಪರಿಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಲಿಲ್ಲ' ಎಂದು ಕಳವಳ ಹಂಚಿಕೊಂಡಿದ್ದರು.

ಭಾಗವತ್ ಕಿವಿಮಾತು

ಜುಲೈ 24ರಂದು ವಿಷಯಕ್ಕೆ ಸಂಬಂಧಿಸಿ ಪರೋಕ್ಷವಾಗಿ ಪ್ರತಿಕ್ರಿಯಿಸಿದ ಆರೆಸ್ಸೆಸ್ ಸರಸಂಚಾಲಕ ಮೋಹನ್ ಭಾಗವತ್, "ಹೊಸ ಪೀಳಿಗೆಯು ಪ್ರಶ್ನೆಗಳನ್ನು ಕೇಳುತ್ತದೆ. ಅವರಿಗೆ ನಾವು ತಾರ್ಕಿಕವಾಗಿ ವಿಷಯಗಳನ್ನು ಅರ್ಥೈಸಬೇಕು. ಅವರೊಂದಿಗೆ ಹೆಚ್ಚು ಸಮಯ ಕಳೆದು, ಪ್ರೀತಿಯಿಂದ ಸಂವಾದ ನಡೆಸಬೇಕಾದ ಅಗತ್ಯವಿದೆ' ಎಂದರು.

ಯುವ ಮತಬ್ಯಾಂಕ್ ಕೈತಪ್ಪುವ ಭೀತಿ

ಭಾರತದಲ್ಲಿ ಶೇಕಡ 50ರಷ್ಟು ಜನಸಂಖ್ಯೆಯು 29 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ ಕೂಡಿದ್ದು, ಒಟ್ಟು ಮತದಾರರಲ್ಲಿ ಕಾಲು ಭಾಗದಷ್ಟು ಯುವಕರೇ ಇದ್ದಾರೆ. ಸಿಎಸ್‌ಡಿಎಸ್-ಲೋಕನೀತಿ ಸಮೀಕ್ಷೆಯ ಪ್ರಕಾರ, 2014, 2019 ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ.33ಕ್ಕಿಂತ ಹೆಚ್ಚು ಯುವ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರು. ಆದರೆ, ಇತ್ತೀಚಿನ ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಯುವಜನರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಮೂಡಿಸಲು ಕಾರಣವಾಗಿದ್ದವು. ರಾಜಕೀಯ ಸಂಶೋಧನಾ ಸಂಸ್ಥೆ "ವೋಟ್ವೈಬ್' ವಿದ್ಯಾರ್ಥಿಗಳ ಹೋರಾಟದ ಕುರಿತು ಸಮೀಕ್ಷೆ ನಡೆಸಿತ್ತು. ಶೇ.87ರಷ್ಟು ಜನರಿಗೆ ಸಿಜೆಪಿ ಹೋರಾಟದ ಮಾಹಿತಿ ಇದೆಯಲ್ಲದೆ, ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಈ ಪ್ರತಿಭಟನೆಯನ್ನು ನೇರವಾಗಿ ಬೆಂಬಲಿಸಿದ್ದರು. ಈ ಪ್ರತಿಭಟನೆಯಿಂದ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟಕ್ಕೆ ರಾಜಕೀಯವಾಗಿ ಭಾರಿ ಹಿನ್ನಡೆಯಾಗಲಿದೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.41.4ರಷ್ಟು ಜನರು ಅಭಿಪ್ರಾಯಪಟ್ಟಿದ್ದರು.
ಒಂದು ವೇಳೆ ಕೇಂದ್ರ ಸರ್ಕಾರವು ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಪಡೆಯದೆ, ಪ್ರತಿಭಟನೆ ಹೀಗೆಯೇ ಸುದೀರ್ಘವಾಗಿ ಮುಂದುವರಿದಿದ್ದರೆ, ತಳಮಟ್ಟದಲ್ಲಿ ಯುವಕರ ಆಕ್ರೋಶ ಹೆಚ್ಚಾಗಿ ಪಕ್ಷದ ಭದ್ರಕೋಟೆಗೆ ಧಕ್ಕೆಯಾಗುವ ಭೀತಿ ಎದುರಾಗಿತ್ತು. ಈ ಎಲ್ಲ ರಾಜಕೀಯ ಲೆಕ್ಕಾಚಾರಗಳೇ ಅಂತಿಮವಾಗಿ ಸಚಿವರ ರಾಜೀನಾಮೆಗೆ ಕಾರಣವಾದವು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳ ವಿಧಾನಸಭೆಗಳ ಅವಧಿ 2027ರಲ್ಲಿ ಮುಕ್ತಾಯಗೊಳ್ಳಲಿದ್ದು, 2027ರ ಫೆಬ್ರವರಿ-ಮಾರ್ಚ್‌ನಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಭಟನೆಯು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಸವಾಲು ಅಥವಾ ಹಿನ್ನಡೆ ಸೃಷ್ಟಿಸುವ ಸಾಧ್ಯತೆ ಇತ್ತು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಪ್ರಬಲ ಸ್ಥಾನದಲ್ಲಿದ್ದರೆ, ಉತ್ತರಾಖಂಡದಲ್ಲಿ ಕಾಂಗ್ರೆಸ್ ಕಳೆದ 10 ವರ್ಷಗಳಿಂದ ಅಧಿಕಾರದಿಂದ ಹೊರಗುಳಿದಿದೆ. ಈ ಎಲ್ಲ ಪ್ರಮುಖ ಪಕ್ಷಗಳು ಪ್ರಶ್ನೆಪತ್ರಿಕೆ ಸೋರಿಕೆ ವಿಚಾರ ಹಾಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದಿದ್ದವು.
ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಸಮಾಜವಾದಿ ಪಾರ್ಟಿ ಕಾರ್ಯಕರ್ತರು ಸ್ವತಂತ್ರವಾಗಿ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿದ್ದರು. ಒಂದು ವೇಳೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ, ವಿರೋಧ ಪಕ್ಷಗಳು ಇದನ್ನು ಬಿಜೆಪಿಯ ವಿರುದ್ಧ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದವು. ದೆಹಲಿಗೆ ಸಮೀಪದಲ್ಲಿರುವ ಈ ಮೂರೂ ರಾಜ್ಯಗಳ ಅಪಾರ ಸಂಖ್ಯೆಯ ಯುವಕರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಬಿಸಿ ಈ ರಾಜ್ಯಗಳಿಗೂ ಸುಲಭವಾಗಿ ಹರಡುತ್ತಿತ್ತು. 2029ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆದರೆ, ಯುವಕರ ಈ ಹೋರಾಟ ತೀವ್ರಗೊಳ್ಳುತ್ತಿದ್ದ ರೀತಿಯನ್ನು ಕಂಡ ವಿಶ್ಲೇಷಕರು, ಇದನ್ನು 1974ರ "ಜೆಪಿ (ಜಯಪ್ರಕಾಶ್ ನಾರಾಯಣ್) ಚಳವಳಿ' ಹಾಗೂ 2011ರ ಅಣ್ಣಾ ಹಜಾರೆ ಹೋರಾಟಕ್ಕೆ ಹೋಲಿಸಲು ಪ್ರಾರಂಭಿಸಿದ್ದರು. ಇತಿಹಾಸದ ಪ್ರಕಾರ, ಈ ಎರಡೂ ಐತಿಹಾಸಿಕ ಹೋರಾಟಗಳ ನಂತರ ದೇಶದಲ್ಲಿ ಸರ್ಕಾರಗಳೇ ಪತನಗೊಂಡಿದ್ದವು.
ಜಂತರ್-ಮಂತರ್‌ನಲ್ಲಿ 36 ದಿನಗಳ ಕಾಲ ನಡೆದ ಪ್ರತಿಭಟನೆಯ ನಂತರ, ಜುಲೈ 25ರಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಶೀಘ್ರದಲ್ಲೇ ರಾಜಕೀಯ ರಂಗಪ್ರವೇಶ ಮಾಡಲಿದೆ ಎಂಬ ಬಲವಾದ ಸುಳಿವುಗಳು ದೊರೆತಿವೆ. "ನಮಗೆ ಎಲ್ಲ ಆಯ್ಕೆಗಳೂ ಮುಕ್ತವಾಗಿವೆ. ನಮ್ಮ ಪೀಳಿಗೆಯ ದನಿಗೆ ಬೆಲೆ ಸಿಗಬೇಕು ಎಂಬುದಷ್ಟೇ ನಮ್ಮ ಹೋರಾಟದ ಮುಖ್ಯ ಉದ್ದೇಶ. ಅದನ್ನು ತಲುಪಲು ಯಾವ ಮಾರ್ಗವನ್ನಾದರೂ ನಾವು ಅನುಸರಿಸಲಿದ್ದೇವೆ' ಎಂದು ಸಿಜೆಪಿ ವಕ್ತಾರ ಆಶುತೋಷ್ ರಾಂಕಾ ಹೇಳಿದ್ದರೆ, "ದೇಶದಲ್ಲಿ 750ರಿಂದ 800 ರಾಜಕೀಯ ಪಕ್ಷಗಳಿದ್ದರೂ ಜನರು ಇಂದಿಗೂ ನಿರಾಶೆಗೊಂಡಿದ್ದಾರೆ. ತಾವು ಎಲ್ಲಿ ಎಡವುತ್ತಿದ್ದೇವೆ ಎಂದು ಈ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಸ್ತುತ ನಮ್ಮದೊಂದು ಚಳವಳಿ, ಇದು ತಳಮಟ್ಟಕ್ಕೆ ತಲುಪಿದಾಗ ಜನರು ಯಾವುದೇ ಪಕ್ಷದಿಂದ ಬೇಕಾದರೂ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು' ಎಂದಿದ್ದಾರೆ ಸಿಜೆಪಿಯ ಇನ್ನೊಬ್ಬ ವಕ್ತಾರ ಸೌರವ್ ದಾಸ್.